ಶುಕ್ರವಾರ, ಫೆಬ್ರವರಿ 3, 2023
25 °C
ಜಾಗೃತಿ ಸಮಾವೇಶದಲ್ಲಿ ಜ್ಞಾನ ಪ್ರಕಾಶ್‌ ಸ್ವಾಮೀಜಿ ಸಲಹೆ

‘ಪರಿಶಿಷ್ಟ ಜಾತಿ, ಪಂಗಡಗಳು ಒಟ್ಟಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕರ್ನಾಟಕ ಸ್ವಾಭಿಮಾನಿ ಎಸ್‌ಸಿ, ಎಸ್ಟಿ ಸಂಘಟನೆಗಳ ಒಕ್ಕೂಟದ ಜಿಲ್ಲಾ ಶಾಖೆ ಆಶ್ರಯದಲ್ಲಿ ನಗರದ ಎಸ್.ಟಿ. ಶ್ರೀನಿವಾಸ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪಂಗಡಗಳ ಜಾಗೃತಿ ಸಮಾವೇಶ ಮತ್ತು ‘ಎಸ್ಸಿ, ಎಸ್ಟಿಗಳು ಏಕೆ ಒಂದಾಗಬೇಕು?’ ವಿಚಾರ ಸಂಕಿರಣವನ್ನು 7 ಸ್ವಾಮೀಜಿಗಳು, ಅರಳಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಸಾವಿರಾರು ವರ್ಷಗಳಿಂದ ಎಸ್ಸಿ, ಎಸ್ಟಿ ಸಮುದಾಯವನ್ನು ಮನುವಾದಿಗಳು ಶೋಷಿಸುತ್ತ ಬರುತ್ತಿದ್ದಾರೆ. ಈಗಲೂ ನಿರಂತರವಾಗಿ ಈ ಹಲ್ಲೆ, ದೌರ್ಜನ್ಯ, ಕೊಲೆಗಳು ನಡೆಯುತ್ತವೆ. ಪರಿಶಿಷ್ಟ ಜಾತಿ, ಪಂಗಡಗಳ ಜನರು ಪರಸ್ಪರ ಸಾಮಾಜಿಕ ಸಾಮರಸ್ಯ ಕಾಪಾಡಿಕೊಂಡು ರಾಜಕೀಯ ಅಧಿಕಾರವನ್ನು ಪಡೆಯುವ ಮೂಲಕ ನೂರಕ್ಕೆ ನೂರರಷ್ಟು ಬದಲಾವಣೆ ಹೊಂದಲು ಸಾಧ್ಯ ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ, ಕರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಪ್ರಸನ್ನಾನಂದ ಪುರಿ ಸ್ವಾಮೀಜಿ ಮಾತನಾಡಿ, ಸರ್ಕಾರ ಜನಸಂಖ್ಯಾವಾರು ಮೀಸಲಾತಿ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ. ಪರಿಶಿಷ್ಟ ಜಾತಿ, ಪಂಗಡಗಳ ಸಂಘಟನೆಗಳ ಒಕ್ಕೂಟ ಸರ್ಕಾರದ ಮುಂದೆ ಇಟ್ಟಿದ್ದ 25 ಬೇಡಿಕೆಗಳಲ್ಲಿ ಕೇವಲ ಒಂದು ಬೇಡಿಕೆ ಮಾತ್ರ ಈಡೇರಿದ್ದು ಉಳಿದ 24 ಬೇಡಿಕೆಗಳ ಈಡೇರಿಕೆಗಾಗಿ ಎರಡನೇ ಹಂತದ ಹೋರಾಟವನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಒಕ್ಕೂಟದ ಮುಖಂಡರು ಸಂಘಟನೆಯನ್ನು ಗ್ರಾಮೀಣ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ, ಒಕ್ಕೂಟದ ರಾಜ್ಯ ಮುಖಂಡ ಶ್ರೀಧರ ಕಲಿವೀರ, ಎಸ್ಸಿ, ಎಸ್ಟಿಗಳು ನಾಗಕುಲದ ವಂಶಸ್ಥರಾದ ಅಶೋಕ ಚಕ್ರವರ್ತಿ ಮತ್ತು ಮೌರ್ಯ ಸಾಮ್ರಾಜ್ಯದ ರಾಜ ಚಂದ್ರಗುಪ್ತರ ವಂಶಕ್ಕೆ ಸೇರಿದವರಾಗಿದ್ದು, ಚಂದ್ರಗುಪ್ತ ಮೌರ್ಯ ಹಾಸನ ಜಿಲ್ಲೆಯಲ್ಲಿ ಸಂಚರಿಸಿ ಜೈನ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಮರಣ ಹೊಂದಿದ್ದಾರೆ ಎಂದರು.

ಮೈಸೂರಿನ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್, ಪಂಚಮರ ವಿದ್ಯಾಭ್ಯಾಸಕ್ಕಾಗಿ ಹಾಸನದಲ್ಲಿ ಪ್ರಾರಂಭಿಸಿದ್ದ ವಸತಿ ನಿಲಯಯಕ್ಕೆ ಡಾ.ಅಂಬೇಡ್ಕರ್‌ 1954 ರಲ್ಲಿ ಭೇಟಿ ನೀಡಿದ್ದರು. ಅಂಬೇಡ್ಕರ್ ಅವರು ತಮ್ಮ ಸಂಶೋಧನಾ ಗ್ರಂಥದಲ್ಲಿ ಹಾಸನ ಜಿಲ್ಲೆಯ ಛಲವಾದಿ ಸಮುದಾಯದ ಬಗ್ಗೆ ಪ್ರಸ್ತಾಪಿಸಿದ್ದಾರೆ ತಿಳಿಸಿದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಬಸವ ನಾಗಿದೇವ ಸ್ವಾಮೀಜಿ, ಸರ್ದಾರ್ ಸೇವಲಾಲ್ ಸ್ವಾಮೀಜಿ, ಕೇತೇಶ್ವರ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಬಹುಜನ ಸಮಾಜ ಪಕ್ಷದ ರಾಜ್ಯ ಮುಖಂಡರಾದ ಮಾರಸಂದ್ರ ಮುನಿಯಪ್ಪ, ಎಂ.ಗೋಪಿನಾಥ್, ನಿವೃತ್ತ ಜಿಲ್ಲಾಧಿಕಾರಿ ಶಿವಣ್ಣ ವಾಲ್ಮೀಕಿ, ನಿವೃತ್ತ ಅಧಿಕಾರಿ ಮೃತ್ಯುಂಜಯ, ನಿವೃತ್ತ ನ್ಯಾಯಾಧೀಶ ಮಲ್ಲೇಶಪ್ಪ ಆರ್.ಮುನಿಯಪ್ಪ, ಗಂಗಾಧರ್ ಬಹುಜನ್, ಕೆ.ಈರಪ್ಪ, ಬಿ.ವಿ.ರವಿಕಮಾರ್, ಕೃಷ್ಣದಾಸ್, ಎನ್.ಟಿ. ಶ್ರೀನಿವಾಸ್, ಅತ್ನಿ ಹರೀಶ್, ಸೋಮನಾಯಕ್, ಗೋವಿಂದರಾಜ್ ಹಂದಿಜೋಗಿ, ಹುಲಿಯಪ್ಪ ಬೋವಿ, ಶಿವಮ್ಮ,ಭಾಗ್ಯಕುಮಾರ್ ಕಲಿವೀರ್, ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.