ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾಖಲೆ ಬರೆದ ಸೇವಂತಿಗೆ: ಮಾರಿಗೆ ₹ 200

ಬರದ ಛಾಯೆ ನಡುವೆ ಯುಗಾದಿ ಸಂಭ್ರಮ: ಜನರಿಂದ ಖರೀದಿ ಜೋರು
ಸಂತೋಷ್‌ ಸಿ.ಬಿ.
Published 9 ಏಪ್ರಿಲ್ 2024, 7:00 IST
Last Updated 9 ಏಪ್ರಿಲ್ 2024, 7:00 IST
ಅಕ್ಷರ ಗಾತ್ರ

ಹಾಸನ: ಬರದ ಛಾಯೆ ನಡುವೆಯೂ ಯುಗಾದಿ ಹಬ್ಬಕ್ಕೆ ಜನತೆ ಹೂ, ಹಣ್ಣು, ಹೊಸ ಬಟ್ಟೆ ಖರೀದಿಯಲ್ಲಿ ನಿರತರಾಗಿದ್ದು, ವರ್ಷದ ಮೊದಲ ಹಬ್ಬ ಆಚರಣೆಗೆ ಭರದ ಸಿದ್ಧತೆ ಮಾಡಿಕೊಂಡರು.

ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕು ಕೇಂದ್ರದಲ್ಲಿ ಸೋಮವಾರ ಸಂಜೆ ಮಾರುಕಟ್ಟೆಯಲ್ಲಿ ಅಗತ್ಯ ಪದಾರ್ಥಗಳನ್ನು ಖರೀದಿಸಲು ಜನರ ಸಂಖ್ಯೆ ಹೆಚ್ಚಾಗಿತ್ತು. ಕಳೆದ ವರ್ಷಕ್ಕಿಂತ ಮುಖ್ಯ ರಸ್ತೆ, ಮಾರುಕಟ್ಟೆ, ಪೇಟೆ ಬೀದಿಯಲ್ಲಿ ಸ್ವಲ್ಪಮಟ್ಟಿಗೆ ಜನಸಂದಣಿ ಇತ್ತು.

ದಾಖಲೆ ಬರೆದ ಸೇವಂತಿಗೆ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳ ಖರೀದಿ ಜೋರಾಗಿದ್ದು, ಹಬ್ಬದಲ್ಲಿ ಪ್ರಮುಖವಾಗಿ ಬಳಕೆಯಾಗುವ ಸೇವಂತಿ ಹೂ ಪ್ರತಿ ಮಾರಿಗೆ ₹ 200ಕ್ಕೆ ಮಾರಾಟವಾಯಿತು. ಇತ್ತೀಚಿನ ದಿನಗಳಲ್ಲಿ ಇದು ದಾಖಲೆಯ ದರವಾಗಿದೆ.

ಕೆಲ ದಿನಗಳ ಹಿಂದೆ ₹80 ರಿಂದ ₹ 100 ರವರೆಗೆ ಮಾರಾಟವಾಗುತ್ತಿದ್ದ ಹಳದಿ ಸೇವಂತಿಗೆ, ಸೋಮವಾರ ₹200 ರ ಗಡಿ ದಾಟಿದೆ. ಹಬ್ಬದ ಕಾರಣ ದರ ಹೆಚ್ಚಾದರೂ, ಗ್ರಾಹಕರು ಖರೀದಿಸುತ್ತಿದ್ದು, ಇನ್ನು ಕೆಲವರು ಇತರೆ ಹೂಗಳ ಮೊರೆ ಹೋಗಿದ್ದಾರೆ.

ಬರ ಆವರಿಸಿರುವ ಹಿನ್ನೆಲೆಯಲ್ಲಿ ಹೂವಿನ ಇಳುವರಿ ಕಡಿಮೆಯಾಗಿದೆ. ಇತರೆಡೆಗಳಿಂದ ಹೂವಿನ ಆಮದು ಸಹ ಕಡಿಮೆ ಆಗಿರುವ ಕಾರಣ ದರದಲ್ಲಿ ಏರಿಕೆಯಾಗಿದೆ ಎಂದು ಹೂವಿನ ವ್ಯಾಪಾರಿಗಳು ಹೇಳುತ್ತಾರೆ.

ಮಾರಾಟ ಜೋರು: ನಗರದ ಕಟ್ಟಿನಕೆರೆ ಮಾರುಕಟ್ಟೆ, ಮಹಾವೀರ ವೃತ್ತ, ಕಸ್ತೂರಿಬಾ ರಸ್ತೆ, ಸ್ಲೇಟರ್ ಹಾಲ್, ಎಂ.ಜಿ. ರಸ್ತೆ ಸೇರಿದಂತೆ ಬಡಾವಣೆಗಳ ಪ್ರಮುಖ ವೃತ್ತಗಳಲ್ಲಿ ಹೂವಿನ ಮಾರಾಟ ಭರ್ಜರಿಯಾಗಿ ನಡೆಯಿತು.

ಮಾವಿನ ಕಾಯಿ, ಬೇವು, ಮಾವಿನ ಎಲೆ, ಬಾಳೆಹಣ್ಣು, ಸೌತೆಕಾಯಿ ಸೇರಿದಂತೆ ಇತರೆ ಪದಾರ್ಥಗಳ ವ್ಯಾಪಾರ ಜೋರಾಗಿ ನಡೆಯಿತು.

ಕಳೆದ ವರ್ಷದ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಜನರಲ್ಲಿ ಉತ್ಸಾಹ ಕಡಿಮೆಯೇ ಇದೆ. ಅದರಲ್ಲೂ ರೈತಾಪಿ ವರ್ಗದಲ್ಲಿ ಸಂಭ್ರಮ ಕಳೆಗುಂದಿದೆ. ಯುಗಾದಿ ಹಬ್ಬಕ್ಕೆ ಮುನ್ನ ಸ್ವಲ್ಪ ಮಟ್ಟಿಗೆ ಮಳೆ ಆಗಬೇಕಿತ್ತು. ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಕಾಲವೇ ಇದಾಗಿದ್ದು, ಯುಗಾದಿ ಹಬ್ಬದ ದಿನ ಹೊಲದಲ್ಲಿ ಒಂದು ಸುತ್ತು ಉಳುಮೆ ಮಾಡಿದರೇನೆ ರೈತರಿಗೆ ಸಮಾಧಾನ. ಹಬ್ಬದಂದು ಹೊನ್ನಾರು ಕಟ್ಟಿದರೆ ಭೂಮಿ ಬಂಗಾರದಂತಾಗುತ್ತದೆ ಎಂಬುದು ರೈತರ ನಂಬಿಕೆ. ಹಾಗಾಗಿ ರೈತ ಸಂಗಾತಿಗಳಾದ ರಾಸುಗಳನ್ನು ಸಿಂಗರಿಸುವ ಕಾರ್ಯವೂ ಅಲ್ಲಲ್ಲಿ ನಡೆಯುತ್ತದೆ.

ಆದರೆ ಈ ಬಾರಿ ಮಳೆ ಕಾಲಕ್ಕೆ ಬಾರದ ಕಾರಣ ಮತ್ತು ಬರ ಆವರಿಸಿರುವ ಹಿನ್ನೆಲೆಯಲ್ಲಿ ಯುಗಾದಿ ಹಬ್ಬ ಗ್ರಾಮೀಣ ಭಾಗದಲ್ಲಿ ಮಂಕಾಗಿದೆ.

ಹಾಸನದ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಜೋರಾಗಿತ್ತು.
ಹಾಸನದ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಜೋರಾಗಿತ್ತು.
ಹಾಸನದ ಮಾರುಕಟ್ಟೆಯಲ್ಲಿ ಮಾವು ಬೇವಿನ ಎಲೆಗಳನ್ನು ಖರೀದಿಸುತ್ತಿರುವ ಜನರು.
ಹಾಸನದ ಮಾರುಕಟ್ಟೆಯಲ್ಲಿ ಮಾವು ಬೇವಿನ ಎಲೆಗಳನ್ನು ಖರೀದಿಸುತ್ತಿರುವ ಜನರು.

ಹೂವು ಹಣ್ಣಿನ ದರ (₹ಗಳಲ್ಲಿ) ಸೇವಂತಿಗೆ (ಒಂದು ಮಾರು);180- 200 ಕೆಂಪು ಸೇವಂತಿಗೆ;130-150 ಮಲ್ಲಿಗೆ;150 ಕನಕಾಂಬರ;160 ಕಾಕಡ;120 ಸೇಬು (ಕೆ.ಜಿ.);200 ದಾಳಿಂಬೆ;180- 220 ಕಿತ್ತಳೆ;80- 100 ದ್ರಾಕ್ಷಿ;60- 80 ಸಪೋಟ;80- 100 ತರಕಾರಿ ಆಲೂಗಡ್ಡೆ;30 ಟೊಮ್ಯಾಟೊ;20 ಬದನೆ;30 ಬೀನ್ಸ್;80 ಕ್ಯಾರೆಟ್;50 ಬೀಟ್‌ರೂಟ್;40 ಹಸಿಮೆಣಸಿನಕಾಯಿ;80 ಮಾವಿನಕಾಯಿ;80-100 ಮಾವು- ಬೇವು (ಕಂತೆ);10-20

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT