ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ವ್ಯತ್ಯಯ: ರೋಗಿಗಳಿಗೆ ಸಂಕಟ

ಸೇವೆ ಸ್ಥಗಿತಗೊಳಿಸಿದ ಖಾಸಗಿ ಆಸ್ಪತ್ರೆ ವೈದ್ಯರು
Last Updated 1 ಆಗಸ್ಟ್ 2019, 11:52 IST
ಅಕ್ಷರ ಗಾತ್ರ

ಹಾಸನ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ಮಸೂದೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ದೇಶದಾದ್ಯಂತ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಖಾಸಗಿ ಆಸ್ಪತ್ರೆಗಳು ಸೇವೆ ಸ್ಥಗಿತ ಗೊಳಿಸಿದ್ದ ಪರಿಣಾಮ ರೋಗಿಗಳು ಪರದಾಡಬೇಕಾಯಿತು. ಮುಷ್ಕರದ ಮಾಹಿತಿ ಇಲ್ಲದೆ ದೂರದ ಊರುಗಳಿಂದ ಬಂದಿದ್ದ ರೋಗಿಗಳು, ಹೊರ ರೋಗಿ ವಿಭಾಗದ ಬಂದ್‌ ಆಗಿದ್ದರಿಂದ ಕಾದು ಕುಳಿತರು.

ಕೆಲವರು ಜಿಲ್ಲಾಸ್ಪತ್ರೆಗೆ ತೆರಳಿದರು. ಅಲ್ಲೂ ವಿವಿಧ ವಿಭಾಗಗಳ ಎದುರು ರೋಗಿಗಳು ಸರದಿ ಸಾಲಿನಲ್ಲಿ ನಿಂತಿದ್ದರು. ಮುಂಜಾಗ್ರತೆಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್‌, ಒಪಿಡಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.

ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿತ್ತು. ಔಷಧ ಅಂಗಡಿಗಳು ಎಂದಿನಂತೆ ಬಾಗಿಲು ತೆರೆದಿದ್ದವು. ರಕ್ತ ಪರೀಕ್ಷಾ ಕೇಂದ್ರ, ಸ್ಕ್ಯಾನಿಂಗ್‌ ಸೌಲಭ್ಯ ಇರಲಿಲ್ಲ. ಒಪಿಡಿ ಸೇರಿದಂತೆ ಉಳಿದ ಸೇವೆಗಳು ಸ್ಥಗಿತಗೊಂಡಿದ್ದವು. ಮಧ್ಯಾಹ್ನದ ಬಳಿಕ ಎಲ್ಲಾ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಸೇವೆ ನೀಡಲು ಆರಂಭಿಸಿದವು.

ಜಿಲ್ಲೆಯ ವೈದ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ನಡೆಸಿ ಮಸೂದೆ ಹಿಂಪಡೆಯುವಂತೆ ಮನವಿ ಸಲ್ಲಿಸಿದರು.

‘ಎನ್‌ಎಂಸಿ ಮಸೂದೆ ಬಡವರ ವಿರೋಧಿಯಾಗಿದ್ದು, ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಶೇಕಡಾ 40ರಷ್ಟು ಸೀಟುಗಳಿಗೆ ಶುಲ್ಕ ನಿಗದಿ ಮಾಡುವ ಅಧಿಕಾರ ಸರ್ಕಾರದ ಬಳಿ ಇರಲಿದೆ. ಹಲವು ಲೋಪ ಹೊಂದಿರುವ ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಬಾರದು’ ಎಂದು ಐಎಂಎ ಜಿಲ್ಲಾ ಶಾಖೆ ಅಧ್ಯಕ್ಷ ಡಾ ಶಿವಪ್ರಸಾದ್ ತಿಳಿಸಿದರು.

‘ಎಂಬಿಬಿಎಸ್‌ ಮುಗಿಸಿದ ಬಳಿಕ ಮತ್ತೆ ಪರೀಕ್ಷೆ ನೀಡುವುದು ಅನ್ಯಾಯ. ಇದರಿಂದ ಶೈಕ್ಷಣಿಕ ಅವಧಿ ಹೆಚ್ಚುತ್ತದೆ. ವೈದ್ಯರು ಆಡಳಿತಶಾಹಿ ಮತ್ತು ವೈದ್ಯೇತರ ಆಡಳಿತಗಾರರ ಅನುಮತಿಯಂತೆ ಕೆಲಸ ಮಾಡಬೇಕಾಗುತ್ತದೆ’ ಎಂದು ಆರೋಪಿಸಿದರು.

ವೈದ್ಯರಾದ ಬಸವರಾಜು, ನಾಗರಾಜು, ದಾಸ್, ಬಶೀರ್, ವಿನಾಯಕ್, ಕಿರಣ್, ವಿದ್ಯಾಲಕ್ಷ್ಮೀ, ವಿಶಾಲಾಕ್ಷಿ, ವಿನಯ್‌ ಸೇರಿದಂತೆ ಹಲವು ಆಸ್ಪತ್ರೆ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT