ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳುಬಿದ್ದ ಕಟ್ಟಡವೀಗ ಗ್ರಂಥಾಲಯ

ಬೇಲೂರು ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮಸ್ಥರಿಂದ ಸೇವಾ ಕಾರ್ಯ
Last Updated 1 ಅಕ್ಟೋಬರ್ 2020, 8:31 IST
ಅಕ್ಷರ ಗಾತ್ರ

ಬೇಲೂರು: ಗ್ರಾಮದಲ್ಲಿ ಪಾಳುಬಿದ್ದಿದ್ದ ಸರ್ಕಾರಿ ಕಟ್ಟಡವನ್ನು ದುರಸ್ತಿಪಡಿಸಿದ ಗ್ರಾಮಸ್ಥರು, ಅದನ್ನು ಗ್ರಂಥಾಲಯನ್ನಾಗಿ ರೂಪಿಸಿದ್ದಾರೆ. ಈಗ ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರ ಜ್ಞಾನಾರ್ಜನೆಯ ತಾಣವಾಗಿ ಮಾರ್ಪಟ್ಟಿದೆ.

ತಾಲ್ಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗೆರೆ ಗ್ರಾಮಸ್ಥರು ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್ ಯುವಕ ಸಂಘದ ಸದಸ್ಯರ ಪ್ರಯತ್ನದ ಫಲವಾಗಿ ಗ್ರಂಥಾಲಯ ರೂಪುಗೊಂಡಿದೆ. ಇತ್ತೀಚೆಗೆ ಚಾಮರಾಜನಗರದ ನಳಂದ ವಿಶ್ವವಿದ್ಯಾಲಯದ ಮುಖ್ಯಸ್ಥ ಬೋಧಿದತ್ತ ಬಂತೇಜಿ ಅವರು ಈ ಗ್ರಂಥಾಲಯಕ್ಕೆ ಚಾಲನೆ ನೀಡಿದ್ದರು.

ಗ್ರಾಮದಲ್ಲಿದ್ದ ಕಟ್ಟಡವೊಂದು ಹತ್ತು ವರ್ಷಗಳಿಂದ ಪಾಳುಬಿದ್ದಿತ್ತು. ಗ್ರಾಮದ ಡಾ.ಅಂಬೇಡ್ಕರ್ ಯುವಕ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಸ್ವಂತ ಹಣ ಖರ್ಚು ಮಾಡಿ, ಕಟ್ಟಡವನ್ನು ದುರಸ್ತಿಪಡಿಸಿದ್ದರು. ಗೋಡೆಗಳಿಗೆ ಬಣ್ಣ ಬಳಿಸಿದ್ದಲ್ಲದೆ, ಓದುಗರು ಕುಳಿತುಕೊಳ್ಳಲು ಹಾಗೂ ಪುಸ್ತಕಗಳನ್ನು ಇಡಲು ಪೀಠೋಪಕರಣಗಳ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಕಥೆ, ಕಾದಂಬರಿ, ಯೋಗ, ಆರೋಗ್ಯ ಸೇರಿದಂತೆ ವಿವಿಧ ವಿಷಯ ಗಳಿಗೆ ಸಂಬಂಧಿಸಿದ ಸುಮಾರು 5,000 ಪುಸ್ತಕಗಳು ಇಲ್ಲಿವೆ. ದಿನಪತ್ರಿಕೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಮತ್ತಷ್ಟು ಪುಸ್ತಕಗಳನ್ನು ಖರೀದಿಸಲು ಸಂಘದ ಸದಸ್ಯರು ನಿರ್ಧರಿಸಿದ್ದಾರೆ. ಇದರ ಮೇಲುಸ್ತುವಾರಿಯನ್ನು ಸಂಘದ ಸದಸ್ಯರೇ ನೋಡಿಕೊಳ್ಳುತ್ತಿದ್ದಾರೆ. ಈ ಗ್ರಂಥಾಲಯವು ಪ್ರತಿದಿನ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ.

‘ನಾವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಸಂದರ್ಭದಲ್ಲಿ ಓದಲು ಚಿಕ್ಕಮಗಳೂರಿಗೆ ಅಥವಾ ಬೇಲೂರಿಗೆ ಹೋಗಬೇಕಿತ್ತು. ಇದರಿಂದ ಹಣದ ಜೊತೆಗೆ ಸಮಯವು ವ್ಯರ್ಥವಾಗುತ್ತಿತ್ತು. ಇದನ್ನು ಮನಗಂಡು ಪಾಳು ಬಿದ್ದ ಕಟ್ಟಡವನ್ನು ದುರಸ್ತಿಗೊಳಿಸಿ ಗ್ರಂಥಾಲಯವನ್ನಾಗಿ ಪರಿವರ್ತಿಸಿದ್ದೇವೆ’ ಎಂದು ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಸದಸ್ಯ ರಘು ತಿಳಿಸಿದರು.

‘ಪ್ರತಿಯೊಂದು ಕೆಲಸಕ್ಕೂ ಸರ್ಕಾರ ಅಥವಾ ಅಧಿಕಾರಿಗಳ ಮೇಲೆಯೇ ಅವಲಂಬಿಸುವುದು ಸರಿಯಲ್ಲ. ಸಮಾಜಕ್ಕೆ ಕೈಲಾದ ಸಹಾಯ ಮಾಡುವ ಉದ್ದೇಶದಿಂದ ಗ್ರಂಥಾಲಯವನ್ನು ತೆರೆಯಲಾಗಿದೆ. ಇದರಿಂದ ಗ್ರಾಮಸ್ಥರ ಹಾಗೂ ಓದುಗರ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT