ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ: ರಾಜ್ಯ ಸರ್ಕಾರ ವಿರುದ್ಧ ಶಾಸಕ ರೇವಣ್ಣ ವಾಗ್ದಾಳಿ

Last Updated 30 ಜುಲೈ 2020, 14:18 IST
ಅಕ್ಷರ ಗಾತ್ರ

ಹಾಸನ: ಕಡಿಮೆ ವಿದ್ಯಾರ್ಥಿಗಳ ನೆಪ ಹೇಳಿ ಜಿಲ್ಲೆಯ ಮೂರು ಸರ್ಕಾರಿ ಪದವಿ ಕಾಲೇಜುಗಳನ್ನು ಸ್ಥಳಾಂತರಿಸುವ ಮೂಲಕ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.

ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಬೇಲೂರು ತಾಲ್ಲೂಕಿನ ಅರೆಹಳ್ಳಿ, ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಕಾಲೇಜುಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹೆತ್ತೂರು, ಹಳ್ಳಿ ಮೈಸೂರು ಕಾಲೇಜಿಗೆ ಹೊಸ ಕಟ್ಟಡ ಕಟ್ಟಲಾಗಿದೆ. ಗಡಿ ಭಾಗದ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಉಪನ್ಯಾಸಕರೇ ಇಲ್ಲದ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೇಗೆ ಬರಲು ಸಾಧ್ಯ ಎಂದು ಗುರುವಾರ ಸುದ್ಧಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಬೇಲೂರಿಗೆ ಮಹಿಳಾ ಕಾಲೇಜು ಮಂಜೂರು ಮಾಡಲಿ. ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 224 ಕ್ಷೇತ್ರಗಳಿಗೂ
ತಾರತಮ್ಯ ಮಾಡದೆ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಮಂಜೂರು
ಮಾಡಲಾಯಿತು. ಈ ಕಾಲೇಜುಗಳನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವುದು ಸರಿಯಲ್ಲ. ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಥಳಾಂತರ ಆದೇಶವನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉನ್ನತ ಶಿಕ್ಷಣ ಸಚಿವ ಸಿ.ಎನ್‌.ಅಶ್ವಥ್‌ ನಾರಾಯಣ ಅವರಿಗೆ ಮನವಿ ಮಾಡಿದರು.

ಒಂದು ವರ್ಷದಿಂದ ಕಾವೇರಿ ಕಣಿವೆ ಭಾಗದ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಬೇಲೂರು ತಾಲ್ಲೂಕಿನ ರಣಘಟ್ಟ ಯೋಜನೆಗೆ ₹ 128 ಕೋಟಿ ಮೀಸಲಿರಿಸಲಾಗಿದೆ. ಆದರೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಆಗಸ್ಟ್‌ ಸಮೀಪಿಸುತ್ತಿದ್ದರೂ ನೀರಾವರಿ ಸಲಹಾ ಸಮಿತಿ ಸಭೆ ಕರೆದಿಲ್ಲ. ಹಾಸನ ವಿಮಾನ ನಿಲ್ದಾಣಕ್ಕೆ ಟೆಂಡರ್‌ ಆಗಿತ್ತು. ಹಣ ಬಿಡುಗಡೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಆರು ಶಾಸಕರು, ಸಂಸದರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು, 12 ದಿನ ಗಡುವು ನೀಡಲಾಗುವುದು. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡದಿದ್ದರೆ ಕಾನೂನು ರೀತಿ ಹೋರಾಟ ಮಾಡಲಾಗುವುದು ಎಂದರು.

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಹೋರಾಟ ಮಾಡಲು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬೆಂಗಳೂರಿನಲ್ಲಿ ಆ.3 ರಂದು ಸಭೆ ಕರೆದಿದ್ದು, ಶಾಸಕರು ಹಾಗೂ ಪ್ರತಿ ತಾಲ್ಲೂಕಿನಿಂದ ಇಬ್ಬರು ಮುಖಂಡರನ್ನು ಆಹ್ವಾನಿಸಿದ್ದಾರೆ. ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಜನರೇ ದಂಗೆ ಎದ್ದರೆ ಏನು ಮಾಡಲು ಆಗುವುದಿಲ್ಲ ಎಂದರು.

ಗ್ರಾಮ ಪಂಚಾಯಿತಿ ಮೀಸಲಾತಿಯಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಪರಿಶಿಷ್ಟ ಪಂಗಡದವರು ಇಲ್ಲದ ಕಡೆ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಪಡಿಸಲಾಗಿದೆ. ಹಾಗಾಗಿ ಅನ್ಯಾಯವಾಗಿರುವ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡುವಂತೆ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

‘ಕುಮಾರಸ್ವಾಮಿ ಅವರು ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ’ ಎಂಬ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ಆರೋಪಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ‘ಬಿಜೆಪಿ, ಕಾಂಗ್ರೆಸ್‌ ಮನೆ ಬಾಗಿಲಿಗೆ ಅಧಿಕಾರಕ್ಕೆ ಹೋಗಲಿಲ್ಲ. ಜೆಡಿಎಸ್‌ ಪಕ್ಷವನ್ನು ಯಾರು ನಿರ್ನಾಮ ಮಾಡಲು ಆಗುವುದಿಲ್ಲ’ ಎಂದು ತಿರುಗೇಟು ನೀಡಿದರು.

ಗೋಷ್ಠಿಯಲ್ಲಿ ಬೇಲೂರು ಶಾಸಕ ಲಿಂಗೇಶ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌, ಮುಖಂಡ ಅಗಿಲೆ ಯೋಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT