ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಹೊಳೆ ಸೇತುವೆ ಬದಿ ಮಣ್ಣು ಕುಸಿತ

ಮೂರು ಗ್ರಾಮಗಳಿಗೆ ಸಂಪರ್ಕ ಕಡಿತವಾಗುವ ಸಾಧ್ಯತೆ: ಆತಂಕ
Last Updated 19 ಜುಲೈ 2021, 3:37 IST
ಅಕ್ಷರ ಗಾತ್ರ

ಬೇಲೂರು: ತಾಲ್ಲೂಕಿನ ಬೆಳ್ಳಾವರ, ಹೊಸಳ್ಳಿ ಮಾರ್ಗವಾಗಿ ಅರೇಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಲ್ಲಿಗನೂರು ಸಮೀಪ ಇರುವ ಸೇತುವೆಯ ಎರಡೂ ಬದಿ ಮಣ್ಣು ಕುಸಿಯತೊಡಗಿದ್ದು ಮೂರು ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳುವ ಆತಂಕ ಗ್ರಾಮಸ್ಥರಲ್ಲಿ ಉಂಟಾಗಿದೆ.

ಮಲ್ಲಿಗನೂರು ಸಮೀಪ ಹರಿಯುತ್ತಿರುವ ದೊಡ್ಡಹೊಳೆಗೆ ಕಳೆದ ಒಂದೂವರೆ ವರ್ಷದ ಹಿಂದೆ ಸುಮಾರು ₹ 70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆಯ ಎರಡೂ ಬದಿಯಲ್ಲಿ ಮಣ್ಣು ತಂದು ಸುರಿಯಲಾಗಿತ್ತು. ಆದರೆ, ಮಳೆಯ ಕಾರಣ ಇದೀಗ ಮಣ್ಣು ಕುಸಿಯತೊಡಗಿದೆ. ಮಲೆನಾಡ ಭಾಗವಾಗಿರುವುದರಿಂದ ಮಳೆ ಹೆಚ್ಚು ಬರುವುದರಿಂದ ಮಣ್ಣು ಕುಸಿಯುವ ಪ್ರಮಾಣ ದಿನೇ ದಿನೇ ಹೆಚ್ಚಾಗಿದ್ದು ಪೂರ್ಣಪ್ರಮಾಣದಲ್ಲಿ ಕುಸಿದರೆ ಹೊಸಹಳ್ಳಿ, ಬೆಳ್ಳಾವರ ಹಾಗೂ ಅರೇಹಳ್ಳಿ ಈ ಮೂರು ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳಲಿದೆ.

ಸೇತುವೆ ಭದ್ರವಾಗಿದ್ದರೂ ಸೇತುವೆಯ ತುದಿಯಲ್ಲಿ ಹಾಕಿರುವ ಮಣ್ಣು ಭದ್ರವಾಗಿ ಇರುವಂತೆ ತಡೆಗೋಡೆ ನಿರ್ಮಿಸುವ ಅಗತ್ಯವಿದೆ. ಇಲ್ಲದಿದ್ದರೆ ಹೊಳೆಯಲ್ಲಿ ನೀರು ಹೆಚ್ಚು ಹರಿದಾಕ್ಷಣ ಮಣ್ಣು ಕುಸಿಯುವ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಇದರೊಂದಿಗೆ ರಸ್ತೆ ಮೇಲಿನ ನೀರು ಹರಿಯುವುದರಿಂದ ಮಣ್ಣು ಹೆಚ್ಚಾಗಿ ಕುಸಿಯಲಿದೆ. ಇದಕ್ಕೆ ಕಲ್ಲಿನ ತಡೆಗೋಡೆ ನಿರ್ಮಾಣವೇ ಸೂಕ್ತ ಎನ್ನುವ ಅಭಿಪ್ರಾಯಗಳು ಜನರಿಂದ ಕೇಳಿಬರುತ್ತಿವೆ.

‘ಸೇತುವೆ ಗುಣಮಟ್ಟದಿಂದ ಕೂಡಿದ್ದರೂ ಸೇತುವೆಯ ಎರಡೂ ಬದಿಯಲ್ಲಿ ಹಾಕಿರುವ ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಿಸಬೇಕಿದೆ. ತಡೆಗೋಡೆ ನಿರ್ಮಿಸದೆ ಇದ್ದರೆ ಮಣ್ಣು ಕುಸಿದು ಸೇತುವೆಗೆ ಹಾನಿಯಾಗುವ ಸಾಧ್ಯತೆಯಿದೆ ಹಾಗೂ ಮೂರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಲಿದೆ’ ಎಂದು ಮಲ್ಲಿಗನೂರು ಗ್ರಾಮದ ಲೋಕೇಶ್ ಪತ್ರಿಕೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT