ಶನಿವಾರ, ಮೇ 28, 2022
26 °C
ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಸೂಚನೆ

ಜನರ ಸಮಸ್ಯೆ ಶೀಘ್ರ ಪರಿಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಗ್ರಾಮ ವಾಸ್ತವ್ಯ ನಡೆಸುವ ಮೂಲಕ ಜನರ ಸಮಸ್ಯೆ ಅರಿತು ಶೀಘ್ರವಾಗಿ ಪರಿಹರಿಸಿ ಎಂದು ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದರು.

ತಹಶೀಲ್ದಾರ್‌ಗಳೊಂದಿಗೆ ಗ್ರಾಮ ವಾಸ್ತವ್ಯ ಕುರಿತು ಸಭೆ ಗುರುವಾರ ನಡೆಸಿ ಮಾತನಾಡಿದ ಅವರು, ಗ್ರಾಮ ವಾಸ್ತವ್ಯ ಕುರಿತು ಸಾರ್ವಜನಿಕರಿಗೆ ಹೆಚ್ಚು ಪ್ರಚಾರ ನಡೆಸಬೇಕು. ಜನಪ್ರತಿನಿಧಿಗಳನ್ನು ಸಂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ತಿಳಿಸಿದರು.

ಬಗರ್ ಹುಕುಂ ಕುರಿತು ಸಭೆಗಳನ್ನು ಪ್ರಾರಂಭ ಮಾಡಿ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಭೇಟಿ ನೀಡುವ ಗ್ರಾಮವನ್ನು ಹೊರತು ಪಡಿಸಿ ಬೇರೆ ಗ್ರಾಮಗಳಿಗೆ ಆಯಾ ತಾಲ್ಲೂಕಿನ ತಹಶೀಲ್ದಾರ್ ತಿಂಗಳಿಗೊಮ್ಮೆ ವಾಸ್ತವ್ಯ ಹೂಡಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು ಎಂದರು.

ಭೂ ದಾಖಲೆಗಳು, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳು, ಪಡಿತರ ವಿತರಣೆ, ಬೆಳೆ ಹಾನಿ, ವಸತಿ, ಸ್ಮಶಾನ ಭೂಮಿ, ಮತ್ತಿತರ ವಿಷಯಗಳ ಕುರಿತು ಅರ್ಜಿಗಳನ್ನು ಪರಿಶೀಲಿಸಿ, ಕೂಡಲೇ ವಿಲೇವಾರಿಗೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಗ್ರಾಮ ವಾಸ್ತವ್ಯದ ವೇಳೆ ಹೂರಡುವಾಗ ಅಧಿಕಾರಿಗಳು ಅಲ್ಲಿರುವಂತಹ ಶಾಲೆ ಅಥವಾ ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜರಾಂ, ತಹಶೀಲ್ದಾರ್ ಶಿವಶಂಕರಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.