ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಹಾಸನಕ್ಕೆ ‘ಎ’ ಗ್ರೇಡ್‌

ಪ್ರಥಮ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿದ ಜಿಲ್ಲೆ
Last Updated 10 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಹಾಸನ: ಕಳೆದ ಬಾರಿ ಪ್ರಥಮ ಸ್ಥಾನದೊಂದಿಗೆ ರಾಜ್ಯದ ಗಮನ ಸೆಳೆದಿದ್ದ ಹಾಸನ ಜಿಲ್ಲೆ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ‘ಎ’ ಗ್ರೇಡ್‌ನೊಂದಿಗೆ 9ನೇ ಸ್ಥಾನ ಪಡೆದಿದೆ.

ಕಳೆದ ವರ್ಷ ಶೇಕಡಾ 89.33 ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿತ್ತು. ಈ ಬಾರಿ ಎಂಟು ಸ್ಥಾನ ಕೆಳಕ್ಕೆ ಕುಸಿದಿದೆ. ಮೊದಲ ಸ್ಥಾನದ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರಿಗೆ ಫಲಿತಾಂಶ ನಿರಾಸೆ ಉಂಟು ಮಾಡಿದೆ.

ಆಲೂರು, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಸಕಲೇಶಪುರ ತಾಲ್ಲೂಕಿನ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪಾಸ್ ಆಗುವ ಮೂಲಕ ‘ಎ’ಗ್ರೇಡ್‌ ಲಭಿಸಿದೆ. ಅರಕಲಗೂಡು, ಬೇಲೂರು ಮತ್ತು ಹಾಸನ ತಾಲ್ಲೂಕಿಗೆ ‘ಬಿ’ ಶ್ರೇಣಿ ನೀಡಲಾಗಿದೆ.

ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ತಲಾ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ , 622 ಅಂಕ ಪಡೆದ ಏಳು ವಿದ್ಯಾರ್ಥಿಗಳು ನಾಲ್ಕನೇ ಸ್ಥಾನ ಹಾಗೂ 621 ಅಂಕದೊಂದಿಗೆ ಇಬ್ಬರು ಐದನೇ ಸ್ಥಾನ ಪಡೆದಿದ್ದಾರೆ. ಈ ಬಾರಿ 522 ಪ್ರೌಢಶಾಲೆಯ 21,010 ವಿದ್ಯಾರ್ಥಿಗಳು 89 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು.

ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳಿ ಶ್ರೀ ಬಸವೇಶ್ವರ ಸ್ವಾಮಿ ಪ್ರೌಢಶಾಲೆಯ ಎಂ.ಎಸ್‌.ದೀಪಕ್‌, ಬೂತನೂರು ಕಾವಲಿನ ಮಲೆನಾಡು ಒಲಂಪಿಯಡ್‌ ಪ್ರೌಢಶಾಲೆಯ ಹರ್ಷ ಎಸ್.ಕೌಂಡಿನ್ಯ, ಹಾಸನದ ರಾಯಲ್ ಅಪೋಲೊ ಇಂಟರ್‌ ನ್ಯಾಷನಲ್‌ ಸ್ಕೂಲ್‌ನ ಎನ್‌. ಶ್ರೀತೇಜ್‌ ಭಟ್‌ , ಯುನೈಟೆಡ್‌ ಪ್ರೌಢಶಾಲೆಯ ಪೂರ್ಣಚಂದ್ರ 625ಕ್ಕೆ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ಹೆಚ್ಚಿಸಿದ್ದಾರೆ.

ಬೇಲೂರು ತಾಲ್ಲೂಕಿನ ಅರೇಹಳ್ಳಿಯ ಅನುಗ್ರಹ ಪ್ರೌಢಶಾಲೆ ಫಾತಿಮಾ ಸೈಮಾ, ಪೂರ್ಣಪ್ರಜ್ಞ ಪ್ರೌಢಶಾಲೆಯ ಡಿ. ಅನುಷಾ, ಎ.ಎಸ್‌.ಸಾತ್ವಿಕ್‌, ಹಿಮಾನ್‌ಶುಲ್ ಮತ್ತು ಎ. ಹಾಸನದ ರಾಯಲ್‌ ಅಪೊಲೊ ಇಂಟರ್‌ನ್ಯಾಷನಲ್‌ ಸ್ಕೂಲ್‌ ಕೆ.ಎಸ್‌.ಹನಿಕಾ, ಚನ್ನರಾಯಪಟ್ಟಣದ ನಾಗಶ್ರೀ ಆಂಗ್ಲ ಮಾಧ್ಯಮ ಶಾಲೆಯ ಎಂ.ವಿ.ಕಿಶನ್, ಹಾಸನದ ಚಿಕ್ಕಹೊನ್ನೇನಹಳ್ಳಿಯ ವಿಜಯ ಶಾಲೆಯ ಎಸ್‌.ವೈ.ಸಾಹಿತ್ಯ ಅವರು 622 ಅಂಕದೊಂದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಆಲೂರು ತಾಲ್ಲೂಕಿನ ಬೆತೆಸ್ತ ಆಂಗ್ಲ ಮಾಧ್ಯಮ ಶಾಲೆಯ ಕೆ.ಕೌಶಿಕ್, ಹಾಸನದ ಆರ್.ಕೆ.ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಎಚ್.ಜಿ.ಯಶಸ್‌ ತಲಾ 621 ಅಂಕದೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಶೇಕಡಾ 75ಕ್ಕೂ ಹೆಚ್ಚು ಫಲಿತಾಂಶಕ್ಕೆ ‘ಎ’ಗ್ರೇಡ್‌, ಶೇಕಡಾ 60 ರಿಂದ ಶೇ. 75ರೊಳಗಿನ ಫಲಿತಾಂಶವನ್ನು ಬಿ ಮತ್ತು ಶೇಕಡಾ 60ಕ್ಕೂ ಕಡಿಮೆ ಇದ್ದ ಫಲಿತಾಂಶವನ್ನು ‘ಸಿ’ ಎಂದು ಪರಿಗಣಿಸಲಾಗಿದೆ.

ಹಾಸನದ ವಿದ್ಯಾನಗರ ಸರ್ಕಾರಿ ಪ್ರೌಢಶಾಲೆಗೆ ಉತ್ತಮ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 31 ವಿದ್ಯಾರ್ಥಿಗಳಲ್ಲಿ ಇಬ್ಬರು ಡಿಸ್ಟಿಂಕ್ಷನ್‌ , ಪ್ರಥಮ ದರ್ಜೆ ಇಬ್ಬರು, 16 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕ ಎನ್. ಜಿ. ಶಶಿಧರ್ ಅಭಿನಂದಿಸಿದ್ದಾರೆ.

ನಗರದ ಎಸ್.ಆರ್.ಎಸ್ ಪ್ರಜ್ಞಾ ವಿದ್ಯಾಶಾಲೆಗೆ ಶೇಕಡಾ 100 ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯನ್ನು ಹಾಗೂ 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ರುಚಿತಾ-610, ಹೊಯ್ಸಳ-605 ಹಾಗೂ ಭಾನುಪ್ರಿಯ ವಿ.ಪಿ-604 ಅಂಕ ಪಡೆದು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT