ಭಾನುವಾರ, ಸೆಪ್ಟೆಂಬರ್ 26, 2021
23 °C
ಹೇಮರೆಡ್ಡಿ ಮಲ್ಲಮ್ಮ, ಬಸವಣ್ಣ, ಶಂಕರಾಚಾರ್ಯ, ಕೆಂಪೇಗೌಡ ಜಯಂತಿ ಕಾರ್ಯಕ್ರಮ

ಸಮಾಜಕ್ಕೆ ಮಹನೀಯರ ಕೊಡುಗೆ ಅಪಾರ: ಶಾಸಕ ಪ್ರೀತಂ ಜೆ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮಹನೀಯರ ಜೀವನ ಶೈಲಿ, ಆದರ್ಶ, ಆಧ್ಯಾತ್ಮಿಕ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಪ್ರೀತಂ ಜೆ ಗೌಡ ಕರೆ ನೀಡಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಜಗಜ್ಯೋತಿ ಬಸವಣ್ಣ, ಶಂಕರಾಚಾರ್ಯ, ಭಗೀರಥ, ನಾಡ ಪ್ರಭು ಕೆಂಪೇಗೌಡ, ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹನೀಯರು ಯಾವುದೇ ನಿರೀಕ್ಷೆ ಇಲ್ಲದೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಗಳು ಇನ್ನೂ ಜೀವಂತವಾಗಿವೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಪ್ರತಿಯೊಬ್ಬರು ಸಾಗಿ ಸಜ್ಜನ ವ್ಯಕ್ತಿಗಳಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್. ಗಿರೀಶ್, ಉತ್ತಮ ಸಾಧನೆ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದರಿಂದ ಜೀವನ ಸಾರ್ಥಕವಾಗುತ್ತದೆ. ಯಾವ ಕೆಲಸಗಳು ಹೂವಿನ ಹಾದಿಯಾಗಿಲ್ಲ. ಮುಳ್ಳಿನ ಹಾದಿಯಲ್ಲಿಯೇ ನಡೆದು ಯಶಸ್ಸು ಕಾಣಬೇಕು. ಮಹನೀಯರ ತತ್ವಾದರ್ಶಗಳು ಜೀವನದಲ್ಲಿ ದಾರಿ ದೀಪವಾಗಲಿವೆ. ಇಂತಹವರಿಂದ ಸಾಕಷ್ಟು ಮಂದಿ ಪ್ರೆರೇಪಿತರಾಗಿ ಅನೇಕ ಸಾಧನೆ ಮಾಡಿದ್ದಾರೆ ಎಂದು ನುಡಿದರು.

ಮಕ್ಕಳಿಗೆ ಮಹನೀಯರ ಬಗ್ಗೆ ಅರಿವು ಮೂಡಿಸಿದರೆ ಮುಂದಿನ ದಿನಗಳಲ್ಲಿ ಯಶಸ್ಸು ಸಾಧಿಸಲು ಸಹಕಾರಿ ಆಗುತ್ತದೆ. ಕೆಂಪೇಗೌಡರ ನೆನಪಿಗಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರು ಅಡಿ ಎತ್ತರದ ಪ್ರತಿಮೆ ಸಹ ನಿರ್ಮಾಣವಾಗುತ್ತಿದೆ ಎಂದರು.

ವಿಶೇಷ ಉಪನ್ಯಾಸಕ ಡಾ. ಸತ್ಯನಾರಾಯಣ ಮಾತನಾಡಿ, ಬಸವಣ್ಣ ರಚಿಸಿರುವ ವಚನಗಳನ್ನು ಅಧ್ಯಯನದಲ್ಲಿ ತೊಡಗಿಕೊಂಡು ಸಮಾಜ ಸೇವೆಗೆ ಮುಂದಾಗಬೇಕು. ರಾಜಕೀಯ, ಸಾಹಿತ್ಯಿಕ ಚಿಂತನೆಗಳನ್ನು ಬದಿಗಿಟ್ಟು, ದುಡಿದು ತಿನ್ನುವ ಸಂಸ್ಕೃತಿ ಕಲಿಸಿದವರು ಮೇರು ಪುರುಷರು. ಭಾರತೀಯ ಸಂಸ್ಕೃತಿ, ಸಂಸ್ಕಾರಗಳಿಗೆ ಪುರಾತನ ಇತಿಹಾಸವಿದ್ದು, ಅದನ್ನು ಆಚಾರ್ಯರು, ವಚನಕಾರರು ಉಳಿಸಿ, ಬೆಳೆಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಿ.ಎನ್. ನಂದಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಅಖಿಲ ಭಾರತ ವೀರಶೈವ ಮಹಾ ಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು