ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗೀಹಳ್ಳಿ: ಕಂಬದ ನರಸಿಂಹಸ್ವಾಮಿ ರಂಗದ ಹಬ್ಬ

ಧಾರ್ಮಿಕ ಕಾರ್ಯಕ್ರಮ, ರಂಗ ಕುಣಿತ ಆಕರ್ಷಣೆ
Last Updated 20 ಮಾರ್ಚ್ 2022, 3:58 IST
ಅಕ್ಷರ ಗಾತ್ರ

ಹಿರೀಸಾವೆ: ನರಸಿಂಹಸ್ವಾಮಿಯ ಪುನರ್ಜನ್ಮದ ಕ್ಷೇತ್ರ ಎಂಬ ನಂಬಿಕೆ ಇರುವ ಹೋಬಳಿಯ ಬೆಳಗೀಹಳ್ಳಿಯಲ್ಲಿ ಕಂಬದ ನರಸಿಂಹಸ್ವಾಮಿಯ ರಂಗದ ಹಬ್ಬವನ್ನು ಒಂದು ವಾರ ಭಕ್ತಿಭಾವದಿಂದ ಆಚರಿಸಲಾಗುತ್ತದೆ.

ಶಿವರಾತ್ರಿ ಹಬ್ಬದ ನಂತರ ಹುಣ್ಣಿಮೆಯ ಮುಂದಿನ ಶನಿವಾರ ರಾತ್ರಿ ಬಾಳೆ ಕಂಬ ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ, ಊರ ಮಧ್ಯದ ರಂಗಮಂಟಪಕ್ಕೆ ಕಳಸ ಹಾಕುತ್ತಾರೆ. ದೇವರ ಮೆರವಣಿಗೆ ಸಾಗುವ ಬೀದಿಗಳು ಮತ್ತು ರಂಗ ಮಂಟಪದ ಸುತ್ತ ಪಾದರಕ್ಷೆ ಹಾಕಿಕೊಂಡು ಓಡಾಡುವಂತಿಲ್ಲ. ಗ್ರಾಮದಲ್ಲಿ ಮಾಂಸಾಹಾರ ಮಾಡುವುದಿಲ್ಲ. ಹಬ್ಬ ಮುಗಿಯುವರೆಗೆ ಗ್ರಾಮಸ್ಥರು ಮಾಂಸಾಹಾರ ಸೇವಿಸುವುದಿಲ್ಲ.

ಪ್ರತಿ ನಿತ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಂಗದ ಕುಣಿತ ಪ್ರಮುಖ ಆಕರ್ಷಣೆ.

ಮಾರ್ಚ್‌ 25ರಂದು ಜಾಗರಣೆ ಪ್ರಯುಕ್ತ ದಮ್ಮನಿಂಗಳ, ಹಡೇನಹಳ್ಳಿ, ಎಚ್.ಚಿಕ್ಕೋನಹಳ್ಳಿ, ಹೊನ್ನೇನಹಳ್ಳಿ ಹಿರೀಸಾವೆ ಮತ್ತು ತುರುವೇಕೆರೆ ತಾಲ್ಲೂಕಿನ ಹೊಡಿಕೆಘಟ್ಟ ಸೇರಿದಂತೆ ಹಲವು ಗ್ರಾಮಗಳ ಜನರು ರಂಗ ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ.

26ರಂದು ಹಬ್ಬದ ಪ್ರಯುಕ್ತ ಕೆರೆಯ ಪಕ್ಕದಲ್ಲಿರುವ ಅಶ್ವತ್ಥ ವೃಕ್ಷದ ಬಳಿ ಗಂಗಾ ಪೂಜೆ ನೆರವೇರಿಸಿ, ಮಂಡೆ ಮತ್ತು ಬಾಯಿ ಬೀಗದ ಹರಕೆ ಸಲ್ಲಿಸುತ್ತಾರೆ. ರಾತ್ರಿ 8 ಗಂಟೆಗೆ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ನಂತರ ಮೂಡ್ಲಿ ಗಿರಿಯಪ್ಪನ ಹರಿಸೇವೆ ನಡೆಯುತ್ತದೆ.

ಭಕ್ತರು ಮತ್ತು ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನದ ಆವರಣದಲ್ಲಿ ಸಾಮೂಹಿಕವಾಗಿ ಅಡುಗೆ ತಯಾರಿಸಿ, 101 ಎಡೆ ಅನ್ನವನ್ನು ದೇವರಿಗೆ ಅರ್ಪಿಸಲಾಗುತ್ತದೆ. ದೇವರ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಮಧ್ಯರಾತ್ರಿ ಅನ್ನದಾನ ಮಾಡುವುದು ಹಬ್ಬದ ವಿಶೇಷ.

ಹಬ್ಬದ ಹಿನ್ನೆಲೆ

ಮಂಡ್ಯ ಜಿಲ್ಲೆಯ ದೊಡ್ಡಕ್ಯಾತನ ಹಳ್ಳಿಯ ಅರ್ಚಕರು ಗೋವು ಗಳನ್ನು ಈ ಸ್ಥಳದಲ್ಲಿ ಮೇಯಿಸು ತ್ತಿದ್ದರು. ಒಂದು ಬಿಳಿ ಹಸು ಸಂಜೆ ಸಮಯದಲ್ಲಿ ದನಗಳಿಂದ ದೂರ ಹೋಗಿ ಹುತ್ತದ ಮೇಲೆ ನಿಂತು, ಹಾಲನ್ನು ಅದರೊಳಕ್ಕೆ ಸುರಿಸುತ್ತಿತ್ತು. ಈ ದೃಶ್ಯವನ್ನು ನೋಡಿದ ದನ ಕಾಯುವವನು ಮನೆಯವರಿಗೆ ತಿಳಿಸಿದ.

ಇದೇ ರೀತಿಯ ಕನಸು ಅದೇ ದಿನ ಹಸುವಿನ ಮಾಲೀಕರಿಗೆ ಬಿತ್ತು. ಮರುದಿನ ಈ ಜಾಗಕ್ಕೆ ಆಗಮಿಸಿ, ಸಂಜೆಯಿಂದ ಹುತ್ತದ ಸುತ್ತ ಬಿದ್ದಿದ್ದ ತರಗನ್ನು (ಮರದ ಒಣಗಿದ ಎಲೆಗಳು) ಸ್ವಚ್ಛಗೊಳಿಸಿ, ಬೆಳಗಿನ ಜಾವ ಸಣ್ಣ ದೇವಸ್ಥಾನ ನಿರ್ಮಾಣ ಮಾಡಲಾಯಿತು. ಬೆಳಗಿನ ಬೆಳಕಿಗೆ ಬಂದ ಗ್ರಾಮವೇ ‘ಬೆಳಗೀಹಳ್ಳಿ’ ಮತ್ತು ಶಾಸನಗಳ ಪ್ರಕಾರ ಜೈನ ಧರ್ಮದ ಗ್ರಾಮ ಎಂಬ ಐತಿಹ್ಯವಿದೆ.

* ಗ್ರಾಮಸ್ಥರೆಲ್ಲ ಒಟ್ಟಿಗೆ ಸೇರಿ, ಸೌಹಾರ್ದದಿಂದ ಒಂದು ವಾರ ಹಬ್ಬ ಆಚರಿಸುತ್ತಾರೆ. ಹಲವು ವರ್ಷಗಳಿಂದ ಈ ಆಚರಣೆ ನಡೆಯುತ್ತಿದೆ.

-ಗೋವಿಂದು, ಶಿಕ್ಷಕ, ಬೆಳಗೀಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT