ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾಧ್ಯಮ ಶಾಲೆ ಮೇಲ್ದರ್ಜೆಗೇರಿಸಿ- ಮೋಹನ್ ಆಳ್ವ ಸಲಹೆ

Last Updated 30 ಮಾರ್ಚ್ 2022, 16:15 IST
ಅಕ್ಷರ ಗಾತ್ರ

ಹಾಸನ: ‘ಪ್ರಸ್ತುತ ಕನ್ನಡ ಭಾಷೆಗೆ ಹೊಸ ಸವಾಲುಗಳು ಎದುರಾಗಿದ್ದು,ಇಂತಹ ಸಮಯದಲ್ಲಿ ಪ್ರತಿಯೊಬ್ಬರು ಕನ್ನಡ ಭಾಷೆ ಉಳಿಸಲು ಕಂಕಣ ಬದ್ಧರಾಗಬೇಕು’ ಎಂದು ಮೂಡುಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ್ ಆಳ್ವ ಕರೆ ನೀಡಿದರು.

ನಗರದ ಹೊರವಲಯದ ಬೂವನಹಳ್ಳಿಯಲ್ಲಿ ನಡೆಯುತ್ತಿರುವ ಜಿಲ್ಲಾ 20ನೇಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನ ಆಯೋಜಿಸಿದ್ದ ‘ಕನ್ನಡ ಭಾಷೆಮತ್ತು ಪ್ರಚಲಿತ ಸವಾಲುಗಳು’ ಎಂಬ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕನ್ನಡ ಭಾಷೆಗೆ ಸಾಕಷ್ಟು ಕುತ್ತು ಬಂದಿದೆ. ಕನ್ನಡವನ್ನುಸವಕಲು ನಾಣ್ಯವನ್ನಾಗಿ ಮಾಡದೆ ಸದಾ ಚಲಾವಣೆಯಲ್ಲಿರುವಂತೆ ಮಾಡುವಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಹೇಳಿದರು.

‘ಸರ್ಕಾರಗಳು ಕನ್ನಡ ಮಾಧ್ಯಮಗಳನ್ನು ಮುನ್ನಡೆಸುವ ರೀತಿಯನ್ನುನೋಡಿದರೆ ಈ ಕಾಲಕ್ಕೆ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿಲ್ಲ.ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳ ಫಲಿತಾಂಶ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಫಲಿತಾಂಶಕ್ಕಿಂತ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ಏನು ಎಂಬುದನ್ನು ಶಿಕ್ಷಣ ಇಲಾಖೆ ಚಿಂತಿಸಬೇಕಿದೆ’ ಎಂದು ಸಲಹೆ ನೀಡಿದರು.

‘ಕನ್ನಡ ಮಾಧ್ಯಮ ಶಾಲೆಯನ್ನು ಕಾಲಕಾಲಕ್ಕೆ ಮೇಲ್ದರ್ಜೆಗೇರಿಸಬೇಕಿದೆ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಕನ್ನಡ ಮಾಧ್ಯಮಶಾಲೆಗಳನ್ನು ಉನ್ನತ ದರ್ಜೆಗೆ ಕೊಂಡೊಯ್ಯುವ ಉದ್ದೇಶದಿಂದರಾಜ್ಯದಾದ್ಯಂತ ಮೊರಾರ್ಜಿ ವಸತಿ ಶಾಲೆ ತೆರೆದರು. ಆದರೆ, ಮುಂದೆ ಬಂದಮುಖ್ಯಮಂತ್ರಿಗಳು ಯಾವುದೇ ಕೆಲಸ ಮಾಡದೆ ಮೊರಾರ್ಜಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಮಾಡಿದರು. ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಬಗ್ಗೆ ಅನುಕಂಪ ತೋರದೆ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯಬೇಕು. ಹೀಗಾದರೆಮಾತ್ರ ಶಾಸ್ತ್ರೀಯ ಕನ್ನಡ ಉಳಿಸಲು ಸಾಧ್ಯ’ ಎಂದು ಹೇಳಿದರು.

‘ಸಾಮಾಜಿಕ ಮಾಧ್ಯಮಗಳು ಹಾಗೂ ಭಾಷೆಯ ಮಹತ್ವ’ ಕುರಿತು ವಿಷಯಮಂಡಿಸಿದ ಕನ್ನಡ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ, ‘ಸಾಮಾಜಿಕಮಾಧ್ಯಮ ಒಂದು ಅದ್ಭುತವಾದ ಮಾಧ್ಯಮ. ಇದರಲ್ಲಿ ಸಂಪಾದಕ, ಉಪಸಂಪಾದಕ ಇರುವುದಿಲ್ಲ. ಹೀಗಾಗಿ ತಮ್ಮ ಅನಿಸಿಕೆಗಳಿಗೆ ಕತ್ತರಿ ಹಾಕದೆಜನರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದು. ಹಿಂದೆ ಒಂದು ಸುದ್ದಿಯನ್ನು ಸಾರ್ವಜನಿಕರಿಗೆ ತಿಳಿಸಲು ಸುಮಾರು 6 ತಿಂಗಳ ಕಾಲ ಬೇಕಿತ್ತು. ಇಂದು ಕೇವಲ 2 ಸೆಕೆಂಡ್‌ಗಳಲ್ಲಿ ಜನರನ್ನು ತಲುಪಬಹುದು. ಇದಕ್ಕೆ ಸಾಮಾಜಿಕ ಮಾಧ್ಯಮ ಕಾರಣ’ ಎಂದು ಹೇಳಿದರು.

‘ಗಡಿನಾಡು ಕನ್ನಡ ಸ್ಥಿತಿಗತಿ’ ಕುರಿತು ವಿಷಯ ಮಂಡಿಸಿದ ನಿವೃತ್ತಪ್ರಾಧ್ಯಾಪಕ ಡಾ. ಶ್ರೀನಾಥ್ ಕಾಸರಗೋಡು, ‘ಕಾಸರಗೋಡು ಕೇರಳಕ್ಕೆಸೇರಿದ್ದರೂ ಅಲ್ಲಿನ ಕನ್ನಡಿಗರು ತಮ್ಮತನವನ್ನು ಕೈಬಿಡಲು ಸಿದ್ಧರಿಲ್ಲ. ಕೇರಳದಲ್ಲಿ ಕನ್ನಡಿಗರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡಲಾಗುತ್ತಿದೆ. ಸರ್ಕಾರಿ ಆದೇಶಗಳು ಮಲೆಯಾಳಿ ಭಾಷೆಯಲ್ಲಿಇರುವುದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕಾಸರಗೂಡು ಕನ್ನಡಿಗರಿಗೆ ಕರ್ನಾಟಕ ಸರ್ಕಾರ ನೀಡುತ್ತಿರುವಸೌಲಭ್ಯಗಳನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಎನ್.ನಂದಿನಿ ಆಶಯ ನುಡಿಗಳನ್ನಾಡಿದರು. ಸಮ್ಮೇಳನಾಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಎಲ್. ಮಲ್ಲೇಶ್‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT