ಗುರುವಾರ , ಜೂನ್ 30, 2022
20 °C
ಮಾಹಿತಿ ನೀಡಿ, ಕ್ರಮ ವಹಿಸಲು ಅಧಿಕಾರಿಗಳಿಗೆ ಡಿ.ಸಿ ಸೂಚನೆ

ಆದ್ಯತಾ ಗುಂಪುಗಳಿಗೆ ಶೀಘ್ರ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಅಂಗವಿಕಲರು, ಬೀದಿ ಬದಿ ವ್ಯಾಪಾರಿಗಳು, ಸರ್ಕಾರ ಗುರುತಿಸಲ್ಪಟ್ಟಿರುವ ಆದ್ಯತಾ ಗುಂಪುಗಳ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಶೀಘ್ರ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಸಭಾಂಗಣದಲ್ಲಿ ಮಂಗಳವಾರ ತಹಶೀಲ್ದಾರ್‌ಗಳು ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪುಗಳ ಫಲಾನುಭವಿಗಳು ಬೇರೆ ಇಲಾಖೆ, ಸಂಸ್ಥೆಗಳ ವ್ಯಾಪ್ತಿಗೆ ಬರುವುದರಿಂದ ತಹಶೀಲ್ದಾರ್ ಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಅವರ ಜೊತೆ ಸಹಕರಿಸಿ, ಮಾಹಿತಿ ನೀಡಿ, ಲಸಿಕೆ ನೀಡುವ ಕೆಲಸ ಮಾಡಬೇಕು ಎಂದು  ಹೇಳಿದರು.

ಫಲಾನುಭವಿಗಳು ತಮ್ಮ ಗುರುತಿನ ಚೀಟಿ ತೋರಿಸಿ ಸಮೀಪದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಬಹುದು. ಒಂದು ವೇಳೆ ಗುರುತಿನ ಚೀಟಿ ಇಲ್ಲದಿದ್ದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು, ನಿಗದಿತ ನಮೂನೆಯಲ್ಲಿ ಸಹಿ ಪಡೆದು, ಅದನ್ನು ಸಲ್ಲಿಸಿ ಪಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಇಲಾಖೆ ಅಧಿಕಾರಿಗಳ ಮೇಲಿದೆ ಎಂದು ತಿಳಿಸಿದರು.

ಆಟೊ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಬ್ಯಾಡ್ಜ್ ಪರಿಶೀಲಿಸಿ, ಲಸಿಕೆ ನೀಡಬೇಕು. ಬ್ಯಾಡ್ಜ್‌  ಇಲ್ಲದಿದ್ದಲ್ಲಿ ವಾಹನ ಪರವಾನಗಿ ಪರಿಶೀಲಿಸಿ ಲಸಿಕೆ ನೀಡಬಹುದು. ಫಲಾನುಭವಿಗಳು ಇಲಾಖೆ ನೀಡಿರುವ ಗುರುತಿನ ಚೀಟಿ ಜೆರಾಕ್ಸ್ ಪ್ರತಿ ತರುವಂತೆ ಕಟ್ಟುನಿಟ್ಟಾಗಿ ತಿಳಿಸುವಂತೆ ಅವರು ನಿರ್ದೇಶನ ನೀಡಿದರು.

ಶೇಕಡಾ 40ಕ್ಕಿಂತ ಹೆಚ್ಚು ಅಂಗವಿಕಲತೆ ಇರುವವರನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಸೇರಿದ್ದು ಎಂದರು.

ಸರ್ಕಾರದಿಂದ ಅಕ್ಕಸಾಲಿಗ, ಟೇಲರ್‌ಗಳು, ಮೆಕಾನಿಕ್‌ಗಳು, ಅಗಸರು, ಕ್ಷೌರಿಕರು, ಕುಂಬಾರರು, ಮನೆ ಕೆಲಸದವರು, ಕಮ್ಮಾರರು ಸೇರಿದಂತೆ 11 ವಲಯಗಳಲ್ಲಿ ಕೆಲಸಗಾರರಿಗೆ ₹2 ಸಾವಿರ ಪ್ಯಾಕೆಜ್ ಘೋಷಣೆ ಮಾಡಿದೆ. ಫಲನುಭವಿಗಳು ಸೇವಾ ಸಿಂಧುನಲ್ಲಿ ಅರ್ಜಿ ಸಲ್ಲಿಸಲು ಉದ್ಯೋಗ ಪ್ರಮಾಣ ಪತ್ರ ನೀಡಿ, ಆ ನಂತರ ಪಡೆಯಬಹುದು. ಈ ಸೌಲಭ್ಯ ಎಲ್ಲಾ ಫಲಾನುಭವಿಗಳಿಗೂ ಸಿಗುವಂತಾಗಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಆರ್.ಸಿ.ಎಚ್ ಅಧಿಕಾರಿ ಕಾಂತರಾಜು, ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್‌.ರಾಮಕೃಷ್ಣ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲೇಶ್, ತಹಶೀಲ್ದಾರರು, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು