ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರು ಸ್ಥಾನ ಗೆಲ್ಲುತ್ತೇವೆ: ಎಚ್‌.ಡಿ. ರೇವಣ್ಣ

ಶಾಸಕರ ಜೊತೆಗೆ ಸಭೆ: ಏಜೆಂಟರ ಗುರುತಿನ ಚೀಟಿಗಳಿಗೆ ದೇಗುಲದಲ್ಲಿ ಪೂಜೆ
Published 2 ಜೂನ್ 2024, 14:37 IST
Last Updated 2 ಜೂನ್ 2024, 14:37 IST
ಅಕ್ಷರ ಗಾತ್ರ

ಹೊಳೆನರಸೀಪುರ: ‘ನಮ್ಮ ದೇಶ ಉಳಿಯಬೇಕಾದರೆ ಮೋದಿಯವರು ಪ್ರಧಾನಮಂತ್ರಿ ಆಗಬೇಕು. ಲಕ್ಷ್ಮೀನರಸಿಂಹ ಸ್ವಾಮಿ ಇರುವವರೆಗೂ ನಮಗೇನು ತೊಂದರೆಯಿಲ್ಲ. ಮೂರು ಕ್ಷೇತ್ರ ಗೆಲ್ಲುತ್ತೇವೆ’ ಎಂದು ಶಾಸಕ ಎಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಭಾನುವಾರ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

‘ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಶಾಸಕರು ಜೊತೆಗೂಡಿ ಖುದ್ದಾಗಿ ಪ್ರಚಾರ ಮಾಡಿದ್ದೇವೆ. ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರು ಹೆಚ್ಚು ಒತ್ತು ಕೊಟ್ಟಿದ್ದಾರೆ. 1,600 ಪ್ರೌಢಶಾಲೆ, 600 ಪಿಯು ಕಾಲೇಜು, 250 ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಿದ್ದಾರೆ. ಜತೆಗೆ ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ₹7 ಸಾವಿರ ಕೋಟಿ ಕೊಟಿದ್ದಾರೆ. 4,800 ಶಿಕ್ಷಕರು, 1,600 ಪಿಯು ಕಾಲೇಜಿನ ಉಪನ್ಯಾಸಕರನ್ನು ಕುಮಾರಸ್ವಾಮಿ ಯಡಿಯೂರಪ್ಪ ಇದ್ದಾಗ ನೇಮಕ ಮಾಡಿದ್ದಾರೆ’ ಎಂದು ಹೇಳಿದರು.

‘ಈಗ ಜೆಡಿಎಸ್-ಬಿಜೆಪಿ ಸೇರಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿ ವಿವೇಕಾನಂದ ಗೆದ್ದೇ ಗೆಲ್ಲುತ್ತಾರೆ’ ಎಂದರು.

ಚುನಾವಣೋತ್ತರ ಸಮೀಕ್ಷೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಇವತ್ತು ಏನು ಹೇಳಲ್ಲ. ಜೆಡಿಎಸ್ ಎರಡರಿಂದ ಮೂರು ಗೆಲವು ಸಾಧಿಸುತ್ತದೆ ಎಂದು ಹೇಳುತ್ತಿದ್ದಾರೆ. ದೇವರಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಬೇರೆ ಯಾವುದೇ ಪ್ರಶ್ನೆಗಳಿಗೆ ಅವಕಾಶವಾಗದಂತೆ ಕಾರಿನಲ್ಲಿ ತೆರಳಿದರು.

ಪಾರದರ್ಶನ ಎಣಿಕೆಗೆ ಒತ್ತಾಯ: ಪಾರದರ್ಶಕವಾಗಿ ಮತ ಎಣಿಕೆ ನಡೆಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮದವರನ್ನು ಒಳಗೆ ಇಟ್ಟುಕೊಳ್ಳಬೇಕು. ಈ ಬಗ್ಗೆ ಚುನಾವಣಾ ಆಯೋಗ ಎಲ್ಲ ಜಿಲ್ಲಾಧಿಕಾರಿಗಳಿಗೂ ನಿರ್ದೇಶನ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ತಾಲ್ಲೂಕಿನ ಹರದನಹಳ್ಳಿಯ ತಮ್ಮ ನಿವಾಸದಲ್ಲಿ ಶಾಸಕರಾದ ಸಿ.ಎನ್‌. ಬಾಲಕೃಷ್ಣ, ಎಚ್.ಪಿ. ಸ್ವರೂಪ್ ಪ್ರಕಾಶ್ ಹಾಗೂ ಕಾರ್ಯಕರ್ತರ ಜೊತೆಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ನಾನು, ಬಾಲಣ್ಣ, ಸ್ವರೂಪ್ ಎಲ್ಲ ಸೇರಿ ಸಭೆ ಮಾಡಿದ್ದೇವೆ. ನಾಡಿದ್ದು ಬೆಳಿಗ್ಗೆ ಆರು ಗಂಟೆಗೆ ಮತ ಎಣಿಕೆಗೆ ಹೋಗುತ್ತಾರೆ. ಈ ವೇಳೆ ಎಲ್ಲರೂ ಇರುತ್ತಾರೆ ಎಂದು ತಿಳಿಸಿದರು.

ಹಳೇಕೋಟೆ ಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಶಾಸಕ ಎಚ್.ಡಿ.ರೇವಣ್ಣ ಹಾಗೂ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಉಪಸ್ಥಿತಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ನೀಡಿದ ಮತ ಎಣಿಕೆ ಕೇಂದ್ರದ ಏಜೆಂಟರ ಗುರುತಿನ ಚೀಟಿಗಳಿಗೆ ಅರ್ಚಕರು ಪೂಜೆ ಸಲ್ಲಿಸಿದರು. ನಂತರ ಶಾಸಕರು ತೀರ್ಥ ಪ್ರಸಾದ ಸ್ವೀಕರಿಸಿ ಲಕೋಟೆಯೊಂದಿಗೆ ತೆರಳಿದರು.

ಭಾನುವಾರ ಮುಂಜಾನೆ ಹರದನಹಳ್ಳಿಯಲ್ಲಿ ಇರುವ ಮನೆದೇವರು ದೇವೇಶ್ವರ ದೇವಾಲಯ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ರಘುಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT