ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ತಂತಿ ಹರಿದು ಬಿದ್ದು ಮಹಿಳೆ ಸಾವು

Published 27 ಸೆಪ್ಟೆಂಬರ್ 2023, 13:06 IST
Last Updated 27 ಸೆಪ್ಟೆಂಬರ್ 2023, 13:06 IST
ಅಕ್ಷರ ಗಾತ್ರ

ಹಾಸನ: ತಾಲ್ಲೂಕಿನ ವರ್ತಿಕೆರೆ ಗ್ರಾಮದಲ್ಲಿ ಭತ್ತದ ಗದ್ದೆಗೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ವಿದ್ಯುತ್‌ ತಂತಿ ಹರಿದು ಬಿದ್ದು, ವಿದ್ಯುತ್ ಪ್ರವಹಿಸಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶೈಲಜಾ (55) ಮೃತಪಟ್ಟ ಮಹಿಳೆ. ಮಂಗಳವಾರ ಮಧ್ಯಾಹ್ನ ಭತ್ತದ ಗದ್ದೆಗೆ ಔಷಧಿ ಹೊಡೆಯುತ್ತಿದ್ದಾಗ ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್‍ ತಂತಿ ಹರಿದು ಬಿದ್ದಿದೆ. ಜಮೀನಿನ ಮೇಲೆ ಹಾದು ಹೋಗಿರುವ ಮೂರು ಎಳೆಯ ವಿದ್ಯುತ್ ತಂತಿ ಹಳೆಯದಾಗಿದ್ದು, ಇದನ್ನು ಬದಲಾಯಿಸುವಂತೆ ಸೆಸ್ಕ್‌ ಅಧಿಕಾರಿಗಳಿಗೆ ತಿಳಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಲೇ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ದೂರಿದರು.

ಶೈಲಜಾ ರವರ ಸಾವಿಗೆ ಸೆಸ್ಕ್‌ ಹೂವಿನಹಳ್ಳಿಕಾವಲು ಶಾಖೆಯ ಎಂಜಿನಿಯರ್ ಲಕ್ಷ್ಮೇಗೌಡ ಮತ್ತು ಲೈನ್‌ಮೆನ್‍ಗಳಾದ ಸೋಮಶೇಖರ ಮತ್ತು ನಟರಾಜ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ಮೃತ ಮಹಿಳೆಯ ಪುತ್ರ ಹರೀಶ್‌, ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸ್ವರೂಪ್‌ ಪ್ರಕಾಶ್‌, ಗ್ರಾಮಸ್ಥರ ಅಹವಾಲು ಆಲಿಸಿ, ಸೆಸ್ಕ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜೂಜಾಟ: ₹26,850 ವಶ

ಹಾಸನ: ಇಸ್ಪೀಟ್ ಜೂಜಾಟ ಆಡುತ್ತಿದ್ದ ಐವರನ್ನು ಬಂಧಿಸಿರುವ ಸಕಲೇಶಪುರ ಗ್ರಾಮಾಂತರ ಪೊಲೀಸರು, ₹26,850 ನಗದು ವಶಕ್ಕೆ ಪಡೆದಿದ್ದಾರೆ.

ಕಾಮನಹಳ್ಳಿ ಗ್ರಾಮದ ವೀರೇಂದ್ರ ಎಂಬುವವರ ಮನೆಯ ಮುಂಭಾಗದ ಖಾಲಿ ಜಾಗದಲ್ಲಿ ಜೂಜಾಟ ಆಡುತ್ತಿದ್ದ ಗುಂಪಿನ ಮೇಲೆ ಸಕಲೇಶಪುರ ಗ್ರಾಮಾಂತರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಸದಾಶಿವ ತಿಪ್ಪರಡ್ಡಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಮುಕುಂದ, ಚಂದ್ರಶೇಖರ್, ಶಿವಣ್ಣಗೌಡ, ಚಂದ್ರಶೇಖರ್ ಕೆ.ಆರ್., ಪರಮೇಶ್ ಎಂಬುವವರನ್ನು ಬಂಧಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂವರ ಬಂಧನ: ₹2,100 ವಶ

ಹಾಸನ: ತಾಲ್ಲೂಕಿನ ಹಂಚಿಹಳ್ಳಿ ಗ್ರಾಮದ ಕೆರೆಯ ಹಿಂಭಾಗದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ ಮೂವರನ್ನು ಬಂಧಿಸಿರುವ ಶಾಂತಿಗ್ರಾಮ ಪೊಲೀಸರು, ₹2,100 ವಶಕ್ಕೆ ಪಡೆದಿದ್ದಾರೆ.

ಶಾಂತಿಗ್ರಾಮ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಮಧು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ಸ್ವಾಮೀಗೌಡ, ಸುರೇಶ, ವಿನಯ ಎಂಬುವವರನ್ನು ಬಂಧಿಸಿದ್ದಾರೆ. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಮಾಂಸ ಮಾರಾಟ: ಇಬ್ಬರ ಬಂಧನ

ಹಾಸನ: ಬೇಲೂರಿನ ನೆಹರು ನಗರದ ಎಪಿಎಂಸಿ ಮುಂಭಾಗ ರಸ್ತೆಯಲ್ಲಿ ಕಾರಿನಲ್ಲಿ ಇಟ್ಟುಕೊಂಡು ಗೋಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬೇಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೇಲೂರು ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಪ್ರವೀಣ್‍ಕುಮಾರ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು, ಸಲ್ಮಾನ್‍ಖಾನ್, ಜಾಕೀರ್‌ ಅಹಮದ್ ಎಂಬುವವರನ್ನು ಬಂಧಿಸಿದ್ದಾರೆ.

ಕಾರಿನ ಡಿಕ್ಕಿಯಲ್ಲಿಟ್ಟು ಮಾರಾಟ ಮಾಡುತ್ತಿದ್ದ 40 ಕೆ.ಜಿ. ಗೋಮಾಂಸ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‍ಲೈನ್ ₹ 1.56 ಲಕ್ಷ ವಂಚನೆ

ಹಾಸನ: ಅರಕಲಗೂಡಿನ ಸಿಮೆಂಟ್‌ ವ್ಯಾಪಾರಿಯೊಬ್ಬರಿಗೆ ₹1.56 ಲಕ್ಷ ಆನ್‌ಲೈನ್‌ ವಂಚನೆ ಮಾಡಲಾಗಿದೆ.

ಪ್ರದೀಪ್ ಕುಮಾರ್ ಅರಕಲಗೂಡಿನಲ್ಲಿ ಸಿಮೆಂಟ್ ಅಂಗಡಿ ಇಟ್ಟುಕೊಂಡಿದ್ದಾರೆ. ಗೂಗಲ್‌ನಲ್ಲಿ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಬಗ್ಗೆ ಹುಡುಕುತ್ತಿದ್ದಾಗ, ರೋಹಿತ್ ಅಗರವಾಲ್, ಚೆಟ್ಟಿನಾಡ್ ಸಿಮೆಂಟ್, ಮುಂಬೈ ಎಂಬುವವರ ಮೊಬೈಲ್‌ ಸಂಖ್ಯೆ ಸಿಕ್ಕಿದೆ. ಅದಕ್ಕೆ ಕರೆ ಮಾಡಿದ ಪ್ರದೀಪ್‌ಕುಮಾರ್‌ ಸಿಮೆಂಟ್‌ ಬಗ್ಗೆ ವಿಚಾರಿಸಿದ್ದಾರೆ.

ಆ ಕಡೆಯಿಂದ ಮಾತನಾಡಿದ ಅಪರಿಚಿತ ವ್ಯಕ್ತಿ ತಾನು ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಮ್ಯಾನೇಜರ್ ಎಂದು ತಿಳಿಸಿದ್ದು, ಸಿಮೆಂಟ್ ಕಳುಹಿಸುವುದಾಗಿ ವಾಟ್ಸ್‌ಆ್ಯಪ್‌ಗೆ ಇನ್‌ವಾಯ್ಸ್ ಬಿಲ್ ಕಳುಹಿಸಿದ್ದಾನೆ. ಅದನ್ನು ನಂಬಿದ ಪ್ರದೀಪ್‌ಕುಮಾರ್‌, ಬಿಲ್‌ನಲ್ಲಿದ್ದ ಖಾತೆಗೆ ₹ 1.56 ಲಕ್ಷ ಹಣ ಹಾಕಿದ್ದಾರೆ.

ಸಿಮೆಂಟ್‌ ಬರದೇ ಇದ್ದುದರಿಂದ ಪ್ರದೀಪ್‌ಕುಮಾರ್ ಕರೆ ಮಾಡಿ ವಿಚಾರಿಸಿದ್ದು, ಮರುದಿನ ಕಳುಹಿಸುವುದಾಗಿ ಅಪರಿಚಿತ ವ್ಯಕ್ತಿ ತಿಳಿಸಿದ್ದಾನೆ. ಅದಾಗ್ಯೂ ಸಿಮೆಂಟ್‌ ಬರದೇ ಇದ್ದುದರಿಂದ ಮತ್ತೆ ಪ್ರದೀಪ್‌ಕುಮಾರ್ ಕರೆ ಮಾಡಿದ್ದಾರೆ. ಸಿಮೆಂಟ್ ಕಳುಹಿಸುವುದಿಲ್ಲ. ನಿಮ್ಮ ಹಣ ವಾಪಸ್ ಹಾಕಬೇಕೆಂದರೆ ಪುನಃ ಹಣವನ್ನು ಹಾಕುವಂತೆ ಅಪರಿಚಿತ ವ್ಯಕ್ತಿ ತಿಳಿಸಿದ್ದಾನೆ. ಸಿಮೆಂಟ್ ಕಂಪನಿಯ ಮ್ಯಾನೇಜರ್ ಎಂದು ನಂಬಿಸಿ, ಆನ್‍ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರದೀಪ್‌ಕುಮಾರ್ ಅವರು ನಗರದ ಸೆನ್‌ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT