ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಲೇಶಪುರ | 'ಡೆಂಗಿ ತಡೆಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ'

ಗ್ರಾ.ಪಂಅಧ್ಯಕ್ಷರು, ಪಿಡಿಒಗಳ ಸಭೆ: ಶಾಸಕ ಸಿಮೆಂಟ್ ಮಂಜು
Published 10 ಜುಲೈ 2024, 15:24 IST
Last Updated 10 ಜುಲೈ 2024, 15:24 IST
ಅಕ್ಷರ ಗಾತ್ರ

ಸಕಲೇಶಪುರ: ಡೆಂಗಿ ತಡೆಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳ ಬೇಕು ಎಂದು ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಡೆಂಗಿ ನಿಯಂತ್ರಣ ಕುರಿತ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದರು. ಹ್ಯಾಂಡ್ ಬಿಲ್ ಹಂಚಿದರೆ ರೋಗ ತಡೆ ಸಾಧ್ಯವಿಲ್ಲ. ರೋಗ ಹರಡಬಹುದಾದ ಸ್ಥಳಗಳ ಪತ್ತೆ ಮಾಡಿ ಸ್ವಚ್ಛಗೊಳಿಸಿದರೆ ಸಾಧ್ಯವಾದಷ್ಟು ರೋಗ ತಡೆಗಟ್ಟಬಹುದು. ರೋಗ ಹತೋಟಿಗೆ ಬರುವವರೆಗೆ ಕಚೇರಿ ಬಿಟ್ಟು ಹೊರಗೆ ಕೆಲಸ ಮಾಡಬೇಕು. ತಮ್ಮ ತಮ್ಮ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಯಾವುದೇ ಸಾವು ನೋವುಗಳಾದರೆ, ಸಂಬಂದ ಪಟ್ಟ ಗ್ರಾ.ಪಂ. ಅಧಿಕಾರಿಗಳ ತಲೆ ದಂಡ ನಿಶ್ಚಿತ ಎಂದರು.

ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕೋಳಿ ಮಾಂಸದ ಅಂಗಡಿಗಳ ಮಾಲೀಕರು ಎಲ್ಲಿ ಬೇಕೆಂದರಲ್ಲಿ ಮಾಂಸದ ತ್ಯಾಜ್ಯಗಳನ್ನು ಬಿಸಾಡುತ್ತಿದ್ದು, ಇದರಿಂದ ಸಹ ಡೆಂಗಿ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾಂಸದ ತ್ಯಾಜ್ಯವನ್ನು ಎಲ್ಲಿ ಬೇಕೆಂದರಲ್ಲಿ ಬಿಸಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಬಾಳ್ಳುಪೇಟೆ ಗ್ರಾ.ಪಂ. ಕಸವಿಲೇವಾರಿ ಘಟಕ ಗಬ್ಬೆದ್ದು ನಾರುತ್ತಿದ್ದು, ಇಲ್ಲಿಗೆ ಹೋಗುವ ಪ್ರತಿಯೊಬ್ಬರಿಗೂ ಡೆಂಗಿ ರೋಗ ಬರುತ್ತಿದೆ.  ತಾಲ್ಲೂಕಿನ ಹಲವಾರು ಗ್ರಾ.ಪಂ. ಕೇಂದ್ರಗಳಲ್ಲಿ ಇರುವ ಕಸ ವಿಲೇವಾರಿ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಗ್ರಾ.ಪಂಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳು ಇರುವುದಿಲ್ಲ, ಕೂಡಲೆ ಇದನ್ನು ತಾ.ಪಂ. ಅಧಿಕಾರಿಗಳ ಗಮನಕ್ಕೆ ತಂದು ಕಸವಿಲೇವಾರಿ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಬಿರಡಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಸ್.ಡಿ. ಸತೀಶ್ ಮಾತನಾಡಿ, ಪಟ್ಟಣದಲ್ಲಿ ತ್ಯಾಜ್ಯ ರಾಶಿ ಸೃಷ್ಟಿಯಾಗಿದ್ದರೆ, ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬಸ್ ನಿಲ್ದಾಣದ ಶೌಚದ ನೀರು ಬಿಡಲಾಗುತ್ತಿದೆ. ಇದಲ್ಲದೆ ಹಲವೆಡೆ ಶುಚಿತ್ವ ಇಲ್ಲವಾಗಿದೆ. ಇದರಿಂದಾಗಿ ತಾಲ್ಲೂಕಿನಲ್ಲಿ ಡೆಂಗಿ ಹತೋಟಿಗೆ ಬಂದಿಲ್ಲ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್ ಮಾತನಾಡಿ, ತಾಲ್ಲೂಕಿನಲ್ಲಿರುವ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಸಂಗ್ರಹಣೆ ಕೇಂದ್ರಗಳಿದ್ದು, ಜ್ವರದ ಪ್ರಕರಣಗಳಲ್ಲಿ ವಿಳಂಬ ಮಾಡದೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಉಪವಿಭಾಗಾಧಿಕಾರಿ ಡಾ. ಎಂ.ಕೆ. ಶ್ರುತಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ (ಆಡಳಿತ) ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಆರ್‌. ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಎಚ್‌.ಎ. ಅದಿತ್ಯ, ಹರೀಶ್, ಪಿಡಿಒ, ಅಧ್ಯಕ್ಷರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT