ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರಿಗೆ ಹರಿದು ಬಂತು ಯಗಚಿ ನೀರು: ತಾತ್ಕಾಲಿಕವಾಗಿ ನೀಗಿದ ನೀರಿನ ಬವಣೆ

ನೀರು ಪೋಲಾಗದಂತೆ ತಡೆಯದಿದ್ದರೆ ಅಭಾವ ಸೃಷ್ಟಿ: ಪಟ್ಟಣ ಪಂಚಾಯಿತಿ ಎಚ್ಚರಿಕೆ
Published 30 ಏಪ್ರಿಲ್ 2024, 6:54 IST
Last Updated 30 ಏಪ್ರಿಲ್ 2024, 6:54 IST
ಅಕ್ಷರ ಗಾತ್ರ

ಆಲೂರು: ಪಟ್ಟಣದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಪಟ್ಟಣಕ್ಕೆ ಯಗಚಿ ನದಿ ನೀರು ಹರಿದು ಬಂದಿದ್ದು, ತಾತ್ಕಾಲಿಕವಾಗಿ ನೀರಿನ ಬವಣೆ ನೀಗಿದಂತಾಗಿದೆ.

ಕುಡಿಯುವ ನೀರಿಗೆ ಅಭಾವ ಎದುರಿಸುತ್ತಿದ್ದ ಜನಸಾಮಾನ್ಯರು ತಾತ್ಕಾಲಿಕವಾಗಿ ನಿಟ್ಟುಸಿರು ಬಿಟ್ಟಿದ್ದು, ನಿವಾಸಿಗಳು ನೀರು ಪೋಲಾಗದಂತೆ ಬಳಸಿಕೊಂಡರೆ ಮಾತ್ರ ನೀರಿನ ಅಭಾವ ನೀಗಿಸಲು ಸಾಧ್ಯ. ಇಲ್ಲದಿದ್ದರೆ ನಾಲ್ಕಾರು ದಿನಗಳ ನಂತರ ಯಥಾಸ್ಥಿತಿ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀಡಿದ್ದಾರೆ.

ಮೈಸೂರಿನ ಪ್ರಾದೇಶಿಕ ಆಯುಕ್ತರು ಏ. 22 ರಂದು ನೀಡಿದ ನಿರ್ದೇಶನದಂತಗೆ ಏ.23 ರಂದು ಯಗಚಿ ನದಿಯಿಂದ ನೀರು ಬಿಡಲಾಗಿದೆ. ಆ ನೀರು, ನದಿಯಲ್ಲಿದ್ದ ಗುಂಡಿಗಳನ್ನು ತುಂಬಿಕೊಂಡು 34 ಕಿ.ಮೀ. ದೂರದ ಹುಣಸವಳ್ಳಿ ಚೆಕ್ ಡ್ಯಾಂ ತಲುಪಲು ಒಂದು ವಾರ ಬೇಕಾಯಿತು.

ಭಾನುವಾರ ಸಂಜೆ ಹುಣಸವಳ್ಳಿ ಚೆಕ್ ಡ್ಯಾಂ ತಲುಪಿದ ನೀರನ್ನು ಸೋಮವಾರ ಬೆಳಿಗ್ಗೆಯಿಂದ ಶುದ್ಧೀಕರಿಸಿ ಪೈಪ್‌ಲೈನ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರು ಹನಿ ನೀರನ್ನೂ ಪೋಲು ಮಾಡದೇ ಬಳಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.  

ವಿಶೇಷವೆಂದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಯಾವುದೇ ಕುಟುಂಬಗಳಲ್ಲಿ ಸಾರ್ವಜನಿಕವಾಗಿ ಪಡೆಯುವ ನೀರಿಗೆ ನಲ್ಲಿ ಅಳವಡಿಸಿಲ್ಲ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ನೀರು ಪೋಲಾಗುತ್ತಿರುವುದಕ್ಕೆ ಪಟ್ಟಣ ಪಂಚಾಯಿತಿ ನೇರ ಹೊಣೆಯಾಗಬೇಕಾಗುತ್ತದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣ ಪಂಚಾಯಿತಿಯಿಂದ ಪ್ರತಿಯೊಂದು ಸಂಪರ್ಕಕ್ಕೆ ಮೀಟರ್ ಅಳವಡಿಸಬೇಕು. ಅಥವಾ ನೀರು ಪೋಲಾಗುತ್ತಿರುವ ಬಳಕೆದಾರರ ಮನೆ ಬಳಿ ಇರುವ ಪೈಪ್‌ನಲ್ಲಿ ನೀರು ಹರಿಯದಂತೆ ನಿಲ್ಲಿಸಿದರೆ ಮಾತ್ರ ನೀರು ಪೋಲಾಗುವುದನ್ನು ತಡೆಗಟ್ಟಬಹುದಾಗಿದೆ. ಈ ಬಗ್ಗೆ ಹಲವು ಮಾಸಿಕ ಸಭೆಗಳಲ್ಲಿ ವಿಷಯ ಪ್ರಸ್ತಾಪವಾದರೂ ಕ್ರಮ ಕೈಗೊಳ್ಳದಿರುವುದು ಹಾಸ್ಯಾಸ್ಪದ ಎಂದು ಸಂಘಟನೆಗಳ ಮುಖಂಡರು ಹೇಳುತ್ತಾರೆ.

ಮೇ 8 ರವರೆಗೆ ಮಾತ್ರ ಯಗಚಿ ನದಿಯಿಂದ ನೀರು ಹರಿದು ಬರುತ್ತದೆ. ಅಷ್ಟರ ವೇಳೆಗೆ ಮಳೆಯಾಗಿ ಕೆರೆ, ಕಟ್ಟೆಗಳು ತುಂಬಿದರೆ ಮಾತ್ರ ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ. ಇಲ್ಲದಿದ್ದರೆ ದೇವರೇ ಗತಿ ಎನ್ನುವಂತಾಗಿದೆ.

ಸೋಮವಾರದಿಂದ ಪೈಪ್‌ಲೈನ್‌ ಮೂಲಕ ನಿವಾಸಿಗಳಿಗೆ ಮನೆ ಬಳಕೆಗೆ ನೀರು ಬಿಡಲಾಗುತ್ತಿದೆ. ನೀರು ಪೋಲಾಗದಂತೆ ತಡೆಯಲು ನಲ್ಲಿ ಅಳವಡಿಸುವುದು ಪ್ರತಿ ನಿವಾಸಿ ಜವಾಬ್ದಾರಿ
ಕವಿತಾ ಪಟ್ಟಣ ಪಂಚಾಯಿತಿ ಎಂಜಿನಿಯರ್‌
ಪ್ರತಿ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ನಲ್ಲಿ ಅಳವಡಿಸದಿದ್ದರೆ ನೀರಿನ ಸಂಪರ್ಕ ಬಂದ್ ಮಾಡಲಾಗುವುದು. ನೀರು ಪೋಲಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರೆ ಅವರ ವಿವರ ಗೌಪ್ಯವಾಗಿ ಇಡಲಾಗುವುದು.
ಸ್ಟೀಪನ್ ಪ್ರಕಾಶ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಪ್ರತಿಯೊಂದಕ್ಕೂ ಸರ್ಕಾರವನ್ನು ದೂಷಿಸುವುದು ನಾಗರಿಕತೆಯಲ್ಲ. ಬಿಸಿಲ ಧಗೆ ಮುಂದುವರಿದರೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗುತ್ತದೆ. ನಾವು ಮೊದಲು ನಲ್ಲಿ ಅಳವಡಿಸಲು ಮುಂದಾಗಬೇಕು.
ಖಾಲಿದ್ ಪಾಷ ಆಶಾ ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT