ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಕ್ಕೆ 900 ವರ್ಷ: 16ರಂದು ಕಾರ್ಯಕ್ರಮ

ಹೊಯ್ಸಳ ಉತ್ಸವ, 900ರ ಸಂಭ್ರಮ ಕಾರ್ಯಕ್ರಮ ಸೇರಿ 9 ದಿನಗಳ ಆಚರಣೆ
Last Updated 14 ಏಪ್ರಿಲ್ 2017, 8:42 IST
ಅಕ್ಷರ ಗಾತ್ರ

ಬೇಲೂರು: ಇಲ್ಲಿನ ವಿಶ್ವವಿಖ್ಯಾತ ಚನ್ನಕೇಶವಸ್ವಾಮಿ ದೇವಾಲಯಕ್ಕೆ 900ನೇ ವರ್ಷಪೂರ್ತಿಯ ಪ್ರತಿಷ್ಠಾಪನ ದಿನದ ಪ್ರಯುಕ್ತ ಏಪ್ರಿಲ್‌ 16ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಟಿ.ದಾಮೋದರ್‌ ತಿಳಿಸಿದರು.

‘ಬೇಲೂರು ದೇವಾಲಯ 900ರ ಸಂಭ್ರಮ’ ಆಚರಣೆಯ ಸಂಬಂಧ ನಡೆದ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬೇಲೂರು ಚನ್ನಕೇಶವ ದೇವಾಲಯವನ್ನು 1117ರ ಮಾರ್ಚ್‌ 10ರಂದು ಪ್ರತಿಷ್ಠಾಪನೆ ಮಾಡಲಾಗಿದೆ.

ಇದೇ 2017ರ ಮಾರ್ಚ್‌ 10ಕ್ಕೆ ಬೇಲೂರು ದೇಗುಲಕ್ಕೆ 900 ವರ್ಷ ಪೂರ್ಣಗೊಂಡಿತು. ಹಿಂದೂ ಪಂಚಾಂಗದ ಪ್ರಕಾರ ಏಪ್ರಿಲ್‌ 3ರ ಪಂಚಮಿಯಂದು 900 ವರ್ಷ ಪೂರ್ಣಗೊಳ್ಳುತ್ತದೆ. ಆದರೆ, ಅಂದು ದೇವಾಲಯದ ರಥೋತ್ಸವಾದಿಗಳು ಆರಂಭಗೊಂಡಿದ್ದರಿಂದ ಧಾರ್ಮಿಕ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಈ ಕಾರಣ ಏಪ್ರಿಲ್‌ 16ರಂದು ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 7.30ಕ್ಕೆ ಸುಪ್ರಭಾತ ಸೇವೆ, ಅಂತರಂಗ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. 9ಕ್ಕೆ ಕಳಾಭಿವೃದ್ಧಿಹೋಮ, ವಾಸ್ತುಹೋಮ, ಶಾಂತಿಹೋಮ, ಪ್ರಾಯಶ್ಚಿತ ಹೋಮ, ಪೂರ್ಣಾಹುತಿ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಚನ್ನಕೇಶವನ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಂದಿರಾರಾಧನೆ, ವಾಸ್ತುಬಲಿ, ರಕ್ಷೆ ಮತ್ತು ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ನಡೆಯಲಿದೆ.

ಸಂಜೆ 6ಕ್ಕೆ ಅಡ್ಡೆಗಾರರ ಸಂಘದಿಂದ ಅಷ್ಟ ಉತ್ಸವಬೀದಿಗಳಲ್ಲಿ ಅಡ್ಡೆ ಶೇಷವಾಹನೋತ್ಸವ ನಡೆಯಲಿದ್ದು ಸಂಜೆ 7ರಿಂದ ದೇಗುಲದ ಪ್ರಾಂಗಣದಲ್ಲಿ ಭರತನಾಟ್ಯ ನಡೆಯಲಿದೆ.

ಅಂದು ದೇಗುಲಕ್ಕೆ ಪುಷ್ಪಾಲಂಕಾರ, ದೀಪಾಲಂಕಾರ ಮಾಡಲಾಗುವುದು. ದೇವರಿಗೆ ಚಿನ್ನದ ಆಭರಣಗಳನ್ನು ತೊಡಿಸಲಾಗುವುದು ಎಂದು ಅವರು ತಿಳಿಸಿದರು.

ಅದ್ಧೂರಿ ಕಾರ್ಯಕ್ರಮ:  ಬೇಲೂರು ದೇವಾಲಯ 900ರ ಸಂಭ್ರಮ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಹೊಯ್ಸಳ ಉತ್ಸವ ಮತ್ತು 900ರ ಸಂಭ್ರಮ ಕಾರ್ಯಕ್ರಮವನ್ನು ಒಟ್ಟಾಗಿ 9 ದಿನಗಳ ಕಾಲ ಆಚರಿಸಲಾಗುತ್ತದೆ. ಭರತನಾಟ್ಯ ಸ್ಪರ್ಧೆ, ಶಿಲ್ಪ ರಚನಾ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಈ ಸಂಬಂಧ ಜಿಲ್ಲಾಮಟ್ಟದ ಸಭೆ ಶೀಘ್ರದಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು. ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿ ಭಟ್ಟರ್‌, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಆರ್‌.ವೆಂಕಟೇಗೌಡ, ಎಂ.ಜೆ.ನಿಶಾಂತ, ಯು.ಟಿ.ಕೇಶವಮೂರ್ತಿ, ಎಚ್‌.ಸಿ.ಸಂಕಲ್ಪ, ಕಾರ್ಯನಿರ್ವಾಹಕ ಅಧಿಕಾರಿ ಆರ್‌.ವಿದ್ಯುಲ್ಲತಾ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT