ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮವಸ್ತು ಸಂಗ್ರಹಾಲಯ’ ಅನಾವರಣಕ್ಕೆ ಸಿದ್ಧತೆ: 10 ಸಾವಿರ ಜಾನಪದ ಪರಿಕರ ಸಂಗ್ರಹ

ಜಾನಪದ ವಿವಿ: ‘ಗ್ರಾಮವಸ್ತು ಸಂಗ್ರಹಾಲಯ’ ಅನಾವರಣಕ್ಕೆ ಸಿದ್ಧತೆ
ಎಂ.ವಿ.ಗಾಡದ
Published 3 ಜನವರಿ 2024, 5:26 IST
Last Updated 3 ಜನವರಿ 2024, 5:26 IST
ಅಕ್ಷರ ಗಾತ್ರ

ಶಿಗ್ಗಾವಿ: ಗ್ರಾಮೀಣ ಪ್ರದೇಶದಲ್ಲಿ ಪರಂಪರಾಗತವಾಗಿ ಬಳಸಿ, ಅಳಿದುಳಿದ ಪ್ರಾಚೀನ ವಸ್ತುಗಳು ಎಲ್ಲವನ್ನೂ ಪೇರಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸ್ಥಾಪಿಸಿರುವ ‘ಗ್ರಾಮವಸ್ತು ಸಂಗ್ರಹಾಲಯ’ ಶೀಘ್ರವೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.

ಈವರೆಗೆ 10 ಸಾವಿರ ಗ್ರಾಮ ವಸ್ತುಗಳನ್ನು ಸಂಗ್ರಹಿಸಿರುವ ವಿಶ್ವವಿದ್ಯಾಲಯವು ಕೃಷಿ ಮತ್ತು ನಿತ್ಯದ ಬಳಕೆ ಸಾಮಗ್ರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಪ್ರಾದೇಶಿಕತೆ ಪ್ರತಿಬಿಂಬಿಸುವ ‍ಪ್ರಯತ್ನ ನಡೆಸಿದೆ.

‘ದೇವರ ಆರಾಧನೆ, ಆಲಂಕಾರಿಕ ವಸ್ತುಗಳು, ಗ್ರಾಮೀಣ ಆಟಿಕೆಗಳು, ಕಲೆ, ಮಾಪನ, ವೈದ್ಯಕೀಯ ಹಾಗೂ ಇತರ ಕಸುಬುಗಳಿಗೆ ಬಳಸುವ ವಸ್ತುಗಳನ್ನು ಒಪ್ಪವಾಗಿ ಜೋಡಿಸಿ, ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಮವಸ್ತು ಸಂಗ್ರಹಾಲಯ ಶೀಘ್ರವೇ ಅನಾವರಣವಾಗಲಿದೆ’ ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ತಾಯಿ ಬಳಸುತ್ತಿದ್ದ 40 ವರ್ಷಗಳ ಹಿಂದಿನ ವರ್ಣರಂಜಿತ ಕೌದಿ ನೀಡಿದ್ದಾರೆ. ಅದು 10X15 ಅಡಿ ಅಳತೆ ಹೊಂದಿದೆ. ಅಂದವಾದ ಕೈ ಹೊಲಿಗೆ ಕುಸರಿಯಿಂದ ತಯಾರಿಸಲಾಗಿದೆ’ ಎಂದರು.

ಗ್ರಾಮಗಳಲ್ಲಿ ಓಡಾಡಿ ಕೃಷಿಗೆ ಸಂಬಂಧಿಸಿದ ಅಂಗಡ, ಹಗ್ಗ ತಯಾರಿಸುವ ಅಟ್ಟಮ್ಯಾಟಿ, ಬೆಲ್ಲ ತಯಾರಿಸುವ ಆಲೆಮನೆ ಕತ್ತಿ, ಬಿತ್ತನೆಗೆ ಬಳಸುವ ಎಡೆಕುಂಟೆ, ನೆಲಬಾವಿ ನೀರು ಎತ್ತುವ ಏತರಾಟೆ, ಕಪ್ಲಿರಾಟೆ, ಕಂದ್ಲಿ, ದನಗಳ ಮೈ ಸ್ವಚ್ಛತೆಗೆ ಬಳಕೆ ಮಾಡುವ ಕತ್ತಿ, ದನಗಳ ಮೈ ಉಜ್ಜುವ ಕಲ್ಲಿ, ಕುಡಗೋಲು, ಕೂರಿಗೆ ತಾಳ, ನೀರೆತ್ತುವ ಬುಟ್ಟಿ, ಚಕ್ಕಡಿ ಗಾಲಿ, ಚಕ್ಕಡಿ ಗುಂಭ, ಜಂತಿಕುಂಟೆ ಸೇರಿ ಎಲ್ಲವನ್ನೂ ಸಂಗ್ರಹಿಸಿಡಲಾಗಿದೆ.

ಗ್ರಾಮವಸ್ತು ಸಂಗ್ರಹಾಲಯದ ಸಮಗ್ರ ಅಭಿವೃದ್ಧಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹ 1.17 ಕೋಟಿ ಅನುದಾನ ಬರಬೇಕಿದೆ. ಬೇಗನೇ ಬಿಡುಗಡೆ ಆಗುವ ನಿರೀಕ್ಷೆಯಿದೆ.
–ಪ್ರೊ. ಟಿ.ಎಂ.ಭಾಸ್ಕರ್ ಕುಲಪತಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT