ಬುಧವಾರ, ಜುಲೈ 6, 2022
22 °C
ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ: ಎರಡು ವರ್ಷದ ಬಡ್ತಿ ವೇತನ ನೀಡಲು ಆಗ್ರಹ

ವೇತನ ಸಿಗದೆ ‘108’ ನೌಕರರ ಪರದಾಟ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಹಗಲಿರುಳೆನ್ನದೆ ದಿನದ 24 ಗಂಟೆ ತುರ್ತು ಆರೋಗ್ಯ ಸೇವೆ ನೀಡುವ ‘ಆರೋಗ್ಯ ಕವಚ’ (108) ನೌಕರರಿಗೆ ಎರಡು ತಿಂಗಳಿಂದ ವೇತನ ಸಿಗದೆ ಅಕ್ಷರಶಃ ಪರದಾಡುತ್ತಿದ್ದಾರೆ. 

ಡಿಸೆಂಬರ್‌, ಜನವರಿ ಮತ್ತು ಫೆಬ್ರುವರಿ ಈ ಮೂರು ತಿಂಗಳ ಸಂಬಳ ನೀಡಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಉಪನಿರ್ದೇಶಕರಿಗೆ ‘ಕರ್ನಾಟಕ ರಾಜ್ಯ ಆರೋಗ್ಯ ಕವಚ ನೌಕರರ ಸಂಘ’ದಿಂದ ಈಚೆಗೆ ಮನವಿ ಸಲ್ಲಿಸಿದ್ದರು. ಆದರೆ, ಪ್ರಯೋಜನವಾಗದ ಕಾರಣ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು. 

ಮೂಗಿಗೆ ತುಪ್ಪ ಸವರುವ ಕೆಲಸ:

ಕೂಡಲೇ ವೇತನ ನೀಡದಿದ್ದರೆ ಮಾರ್ಚ್‌ 25ರ ನಂತರ ರಾಜ್ಯದಾದ್ಯಂತ ಸೇವೆ ಸ್ಥಗಿತಗೊಳಿಸುವ ನಿರ್ಧಾರವನ್ನು ನೌಕರರ ಸಂಘ ಕೈಗೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಡಿಸೆಂಬರ್‌ ತಿಂಗಳ ವೇತನವನ್ನು ಮಾತ್ರ ಮಾರ್ಚ್‌ 20ರಂದು ಬಿಡುಗಡೆ ಮಾಡಿ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.

ಬಾಕಿ ಎರಡು ತಿಂಗಳ (ಜನವರಿ, ಫೆಬ್ರುವರಿ) ವೇತನವನ್ನು ಮಾರ್ಚ್‌ ಅಂತ್ಯಕ್ಕೆ ನೀಡುವ ಭರವಸೆಯನ್ನು ಆರೋಗ್ಯ ಇಲಾಖೆ ಉಪನಿರ್ದೇಶಕರು ನೀಡಿದ್ದಾರೆ. ಭರವಸೆ ಹುಸಿಯಾದರೆ, ಮಾರ್ಚ್‌ ತಿಂಗಳದ್ದು ಸೇರಿ ಮತ್ತೆ 3 ತಿಂಗಳ ವೇತನ ಬಾಕಿ ಉಳಿಯುತ್ತದೆ ಎಂದು ನೌಕರರು ಸಮಸ್ಯೆ ತೋಡಿಕೊಂಡರು. 

ಪರಿತಪಿಸುತ್ತಿರುವ 3500 ನೌಕರರು: 

‘ರಾಜ್ಯದಲ್ಲಿ ‘ಆರೋಗ್ಯ ಕವಚ’ ಯೋಜನೆಯಡಿ, 711 ಆಂಬುಲೆನ್ಸ್‌ಗಳಲ್ಲಿ ಚಾಲಕರು ಮತ್ತು ತುರ್ತು ವೈದ್ಯಕೀಯ ಚಿಕಿತ್ಸಕರು ಸೇರಿದಂತೆ ಸುಮಾರು 3500 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 22 ಆಂಬುಲೆನ್ಸ್‌ಗಳಲ್ಲಿ 85 ನೌಕರರು ಕೆಲಸ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ವೇತನ ಸಿಗದ ಕಾರಣ ನೌಕರರು ಹತಾಶರಾಗಿದ್ದಾರೆ’ ಎಂದು ಆರೋಗ್ಯ ಕವಚ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಹನುಮಂತಪ್ಪ ಎಂ.ಬಿ. ಬೇಸರ ವ್ಯಕ್ತಪಡಿಸಿದರು.

ಬಡ್ತಿ ವೇತನ ನೀಡಿ:

‘ಆರೋಗ್ಯ ಕವಚ’ದ ಹೊಣೆ ಹೊತ್ತಿರುವ ‘ಜಿವಿಕೆ’ ಸಂಸ್ಥೆಯಿಂದ ಸಮರ್ಪಕ ಬಿಲ್‌ಗಳು ಸಲ್ಲಿಕೆಯಾಗಿಲ್ಲ ಎಂಬ ಹಿನ್ನೆಲೆಯಲ್ಲಿ ನಮಗೆ ಸಿಗಬೇಕಾದ ವೇತನ ಮತ್ತು ಸೌಲಭ್ಯಗಳನ್ನು ಆರೋಗ್ಯ ಇಲಾಖೆ ತಡೆ ಹಿಡಿಯುತ್ತಿದೆ. ‘ಗಂಡ–ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು’ ಎಂಬಂತಾಗಿದೆ ನಮ್ಮ ಪರಿಸ್ಥಿತಿ. 2020 ಮತ್ತು 2021ನೇ ಸಾಲಿನ ಬಡ್ತಿ ವೇತನವನ್ನು (ಇನ್‌ಕ್ರಿಮೆಂಟ್‌ ಮತ್ತು ಅರಿಯರ್ಸ್‌) ಕೂಡಲೇ ಬಿಡುಗಡೆ ಮಾಡಬೇಕು ಎಂದು ನೌಕರರು ಅಲವತ್ತುಕೊಂಡರು. 

**

ಹೊಟ್ಟೆಪಾಡಿಗೆ ದುಡಿಯುತ್ತಿರುವ ನಮಗೆ ಸಕಾಲದಲ್ಲಿ ವೇತನ ಸಿಗುತ್ತಿಲ್ಲ. ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ, ಜೀವನ ನಿರ್ವಹಣೆಯೇ ಕಷ್ಟವಾಗಿದೆ
– ಸುಧಾ, ಶ್ವೇತಾ, ‘ಆರೋಗ್ಯ ಕವಚ’ ನೌಕರರು

**

2 ತಿಂಗಳ ವೇತನ, 2 ವರ್ಷಗಳ ಬಡ್ತಿ ವೇತನ ಹಾಗೂ ಕೋವಿಡ್‌ ಸೇವಾ ಭತ್ಯೆ ಈ ಮೂರು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು
– ಹನುಮಂತಪ್ಪ ಎಂ.ಬಿ., ರಾಜ್ಯ ಜಂಟಿ ಕಾರ್ಯದರ್ಶಿ, ಆರೋಗ್ಯ ಕವಚ ನೌಕರರ ಸಂಘ\

**

ಕೋವಿಡ್‌ ಸೇವಾಭತ್ಯೆ ಸಿಕ್ಕಿಲ್ಲ

‘ಕೋವಿಡ್‌ ಸಂದರ್ಭ ನಮ್ಮ ಕುಟುಂಬವನ್ನು ಲೆಕ್ಕಿಸದೇ, ಜೀವದ ಹಂಗು ತೊರೆದು ‘ಕೋವಿಡ್‌ ವಾರಿಯರ್‌’ಗಳಾಗಿ ಕೆಲಸ ಮಾಡಿದ್ದೇವೆ. ಆದರೆ, ‘ಆರೋಗ್ಯ ಕವಚ’ದ ಸಿಬ್ಬಂದಿಗೆ ಇದುವರೆಗೂ ಒಂದು ರೂಪಾಯಿ ಕೋವಿಡ್‌ ಸೇವಾ ಭತ್ಯೆಯನ್ನು ನೀಡಿಲ್ಲ’ ಎಂದು 108 ಆಂಬುಲೆನ್ಸ್‌ ಚಾಲಕ ತೌಫಿಕ್‌ ಪಠಾಣ್‌ ಸಮಸ್ಯೆ ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು