ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ವಿದ್ಯಾರ್ಥಿಗಳಿಗೆ 5 ಚಿನ್ನದ ಪದಕ

ಜಾನಪದ ವಿವಿ ಘಟಿಕೋತ್ಸವ ಡಿ.1ರಂದು: ಕುಲಪತಿ ಪ್ರೊ.ಭಾಸ್ಕರ್‌ ಮಾಹಿತಿ
Last Updated 28 ನವೆಂಬರ್ 2022, 14:38 IST
ಅಕ್ಷರ ಗಾತ್ರ

ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 6 ಮತ್ತು 7ನೇ ಘಟಿಕೋತ್ಸವವು ಡಿ.1ರಂದು ನಡೆಯಲಿದ್ದು, ಮೂವರು ವಿದ್ಯಾರ್ಥಿಗಳಿಗೆ ಒಟ್ಟು ಐದು ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್‌ ತಿಳಿಸಿದರು.

2019–20ನೇ ಸಾಲಿನ ಜನಪದ ಸಾಹಿತ್ಯ ವಿಭಾಗದಲ್ಲಿ ಶಿವಪ್ಪ ಲಮಾಣಿ ಮತ್ತು2020–21ನೇ ಸಾಲಿನ ಜನಪದ ಸಾಹಿತ್ಯ ವಿಭಾಗದಲ್ಲಿ ಉದಯಕುಮಾರ ಎಸ್‌.ಚವ್ಹಾಣ ಇವರಿಬ್ಬರು ಮೊದಲ ರ‍್ಯಾಂಕ್‌ ಗಳಿಸಿದ್ದು,ಡಾ.ಎಚ್‌.ಎಲ್‌.ನಾಗೇಗೌಡ ಸ್ಮರಣಾರ್ಥ ಚಿನ್ನದ ಪದಕ, ಕೆ.ಆರ್‌.ಲಿಂಗಪ್ಪ ಸ್ಮರಣಾರ್ಥ ಚಿನ್ನದ ಪದಕ, ಗೊ.ರು.ಚನ್ನಬಸಪ್ಪ ನಗದು ಬಹುಮಾನ ನೀಡಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

2020–21ನೇ ಸಾಲಿನ ಸಮಾಜಶಾಸ್ತ್ರ ವಿಭಾಗದಲ್ಲಿ ಸುಮಂಗಲಾ ಯಲಿಗಾರ ಮೊದಲ ರ್‍ಯಾಂಕ್‌ ಪಡೆದಿದ್ದು, ವಿನೋದ ಅನಂತ ಬಾಂದೇಕರ ಸ್ಮರಣಾರ್ಥ ಚಿನ್ನದ ಪದಕ ಮತ್ತು ಘಟಿಕೋತ್ಸವ ಪ್ರಮಾಣ ಪತ್ರ ಪಡೆಯಲಿದ್ದಾರೆ ಎಂದು ಹೇಳಿದರು.

ಹೊಸ ಕೋರ್ಸ್:ಗೋಟಗೋಡಿ ಜಾನಪದ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಯೋಗ, ಕನ್ನಡ ಮತ್ತು ಜಾನಪದ, ಜಾನಪದ ಕೌಶಲ, ಸಿದ್ಧಿ ಬುಡಕಟ್ಟು ಅಧ್ಯಯನ ಎಂಬ ಪಿಜಿ ಕೋರ್ಸ್‍ಗಳನ್ನು ಆರಂಭಿಸಲಾಗಿದೆ.ಪಿ.ಎಚ್.ಡಿ ವಿದ್ಯಾರ್ಥಿಗಳು 75, ಪದವಿ ವಿದ್ಯಾರ್ಥಿಗಳು 400 ಹಾಗೂ ಸರ್ಟಿಫಿಕೇಟ್ ಕೋಸ್ ವಿದ್ಯಾರ್ಥಿಗಳು ಸೇರಿ ಒಂದು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಉದ್ಯೋಗಾವಕಾಶ:ಈ ವಿಶ್ವವಿದ್ಯಾಲಯದಲ್ಲಿ ಓದಿದವರಿಗೆ ಎಲ್ಲ ರಂಗ ಹಾಗೂ ಎಲ್ಲ ವಿಭಾಗಗಳಲ್ಲಿ ಉದ್ಯೋಗ ಒದಗಿಸಲು ಕಡ್ಡಾಯಗೊಳಿಸುವಂತೆ ಚಿಂತನೆ ನಡೆಸಲಾಗಿದೆ. ಮುಖ್ಯಮಂತ್ರಿಗಳ ಗಮನಕ್ಕೂ ಸಹ ತರಲಾಗಿದೆ. 31 ಜಿಲ್ಲೆಗಳಿಗೆ ಸಂಬಂಧಪಟ್ಟ ‘ಗ್ರಾಮ ಚರಿತ್ರೆ ಕೋಶ’ ಸಿದ್ಧವಾಗುತ್ತಿದ್ದು, 8 ಜಿಲ್ಲೆಗಳ ಕಾರ್ಯ ಬಾಕಿಯಿದೆ. ಇಂಗ್ಲಿಷ್‌ಗೆ ತರ್ಜುಮೆ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದರು.

ಅನುದಾನಕ್ಕೆ ಬೇಡಿಕೆ:ಕಲಾ ಗ್ರಾಮಕ್ಕೆ ₹200 ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ₹10 ಕೋಟಿ ಅನುದಾನಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗ್ರಂಥಾಲಯಕ್ಕೆ ₹4 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸಿಎಂ ಭರವಸೆ ನೀಡಿದ್ದಾರೆ. ₹4 ಕೋಟಿ ಅನುದಾನದಲ್ಲಿ ಕಲಾಭವನ ಕಾಮಗಾರಿ ಪೂರ್ಣಗೊಂಡಿದೆ. ಒಳಾಂಗಣದ ಅಲಂಕೃತ ಕಾಮಗಾರಿಗೆ ₹2 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ₹3 ಕೋಟಿ ವೆಚ್ಚದಲ್ಲಿ ಜಾನಪದ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ನೇಮಕಾತಿ:ಕುಲಪತಿಗಳು ಹಾಗೂ ಸಹಾಯಕ ರಿಜಿಸ್ಟ್ರಾರ್ ಹೊರತುಪಡಿಸಿದಂತೆ ಉಳಿದಂತೆ 50ಕ್ಕೂ ಅಧಿಕ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಂ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದ ಆದೇಶ ಬಂದ ನಂತರ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದರು.

ಮಾಧ್ಯಮಗೋಷ್ಠಿಯಲ್ಲಿ ಜಾನಪದ ವಿವಿ ಕುಲಸಚಿವ (ಆಡಳಿತ) ಸಿ.ಟಿ.ಗುರುಪ್ರಸಾದ, ಸಹಾಯಕ ರಿಜಿಸ್ಟ್ರಾರ್ ಶಹನವಾಜ ಮುದಕವಿ ಇದ್ದರು.

***

‘ವಿವಿ ಜಾಗ ಒತ್ತುವರಿ: ಹದ್ದುಬಸ್ತಿಗೆ ಪತ್ರ’

ಜಾನಪದ ವಿಶ್ವವಿದ್ಯಾಲಯದ 122.19 ಎಕರೆ ಪ್ರದೇಶದಲ್ಲಿ 52 ಎಕರೆ ಮಾತ್ರ ಸುರಕ್ಷಿತವಾಗಿದೆ. ಉಳಿದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ದಾಖಲೆ ಹಾಗೂ ಪಹಣಿಯಲ್ಲಿ ವಿವಿ ಹೆಸರಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ ಹಾಗೂ ಈಗಾಗಲೇ ಶೀಲವಂತ ಸೋಮಾಪುರ, ಹುಲಸೋಗಿಗೆ ನಾನು ಭೇಟಿ ನೀಡಿದ್ದೇನೆ. ಒತ್ತುವರಿ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ವಿವಿ ಜಾಗವನ್ನು ಹದ್ದು ಬಸ್ತು ಮಾಡಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್‌ ತಿಳಿಸಿದರು.

ಸ್ನಾತಕೋತ್ತರ ಕೇಂದ್ರಗಳಾಗಿ ಪರಿವರ್ತನೆ:

ವಿವಿ ವ್ಯಾಪ್ತಿಯ ಬೀದರ್‌, ಜೋಯಿಡಾ, ಮಲೆಮಹದೇಶ್ವರ ಬೆಟ್ಟ, ಮೈಸೂರು, ಮಂಡ್ಯ ಪ್ರಾದೇಶಿಕ ಕೇಂದ್ರಗಳನ್ನು ಸ್ನಾತಕೋತ್ತರ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಈ ವರ್ಷದಿಂದ ಪಿಜಿ ಕೋರ್ಸ್ ಅಧ್ಯಯನ ಆರಂಭಿಸಲಾಗಿದೆ ಎಂದರು.

**

4 ವರ್ಷಗಳಿಂದ ವಿವಿಯ ಲೆಕ್ಕಪರಿಶೋಧನೆ ನಡೆದಿಲ್ಲ. ಆಡಿಟ್‌ ನಂತರ ಹಣ ದುರುಪಯೋಗವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು
– ಪ್ರೊ.ಟಿ.ಎಂ.ಭಾಸ್ಕರ್‌, ಕುಲಪತಿ, ಜಾನಪದ ವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT