ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಸೌಲಭ್ಯ ವಂಚಿತ ಲಿಂಗದೇವರಕೊಪ್ಪ

ಲಿಂಗದೇವರಕೊಪ್ಪ: ಶಿಥಿಲಾವಸ್ಥೆಯಲ್ಲಿ ಪ್ರವಾಸಿ ಮಂದಿರ
Published 7 ಫೆಬ್ರುವರಿ 2024, 4:30 IST
Last Updated 7 ಫೆಬ್ರುವರಿ 2024, 4:30 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಮೂಲ ಸೌಲಭ್ಯ ವಂಚಿತ ಸರ್ಕಾರಿ ಶಾಲೆ, ಹಾಳಕೊಂಪ್ಪೆಯಂತಾದ ಪ್ರವಾಸಿ ಮಂದಿರ ಹೀಗೆ ಮೂಲ ಸೌಲಭ್ಯಗಳಿಂದ ವಂಚಿತ ಸರ್ಕಾರಿ ಕಟ್ಟಡಗಳು ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ತಾಲ್ಲೂಕಿನ ಕುಂಚೂರು ಗ್ರಾಮ ಪಂಚಾಯ್ತಿಗೆ ಒಳಪಟ್ಟ ಲಿಂಗದೇವರಕೊಪ್ಪ ಗ್ರಾಮದಲ್ಲಿವೆ.

ಗ್ರಾಮದಲ್ಲಿ ಒಂದು ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಿದ್ದು, ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 60 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಪ್ರಧಾನ ಗುರುಮಾತೆ ಸೇರಿದಂತೆ ಒಟ್ಟು ನಾಲ್ವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಿಂಗದೇವರಕೊಪ್ಪದ ಸರ್ಕಾರಿ ಶಾಲೆ ಹಳೆಯ ಕಟ್ಟಡವಾಗಿದ್ದು, ಮಳೆಗಾಲದಲ್ಲಿ ಶಾಲೆಯ ನಾಲ್ಕು ಕೊಠಡಿಗಳು ಸೋರುತ್ತವೆ. ಅಲ್ಲಲ್ಲಿ ಹಂಚುಗಳು ಒಡೆದು ಹೋಗಿವೆ. ಕೆಲವೊಂದು ಕೊಠಡಿಗಳಿಗೆ ಅಳವಡಿಸಲಾಗಿರುವ ತಗಡಿನ ಚಾವಣಿಗಳು ಸರಿಯಾಗಿ ಹಾಕದ ಕಾರಣ ತಗಡುಗಳಿಂದ ಮಳೆ ನೀರು ಶಾಲೆಯೊಳಗೆ ಬರುತ್ತವೆ. ಇದರಿಂದಾಗಿ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಬಿಸಿಯೂಟದ ಕೊಠಡಿಯೂ ಮಳೆಗಾಲದಲ್ಲಿ ಸೋರುತ್ತಿದ್ದು, ದಿನಸಿ ಸಾಮಗ್ರಿ ಶೇಖರಣ ದುಸ್ತರವಾಗಿದೆ.

‘ಲಿಂಗದೇವರಕೊಪ್ಪದ ಸರ್ಕಾರಿ ಶಾಲೆಯ ಕಟ್ಟಡ ಹಳೆಯದಾಗಿದ್ದು, ಸಂಪೂರ್ಣ ಶಿಥಿಲಾವಸ್ಥೆಗೊಂಡಿದೆ. ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಸೋರುತ್ತವೆ. ಇಲ್ಲಿ ಹೊಸ ಕೊಠಡಿಗಳನ್ನು ನಿರ್ಮಿಸುವುದು ಅವಶ್ಯವಿದೆ. ಶಾಲೆಯ ದುರಸ್ತಿಗೆ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇದುವರೆಗೂ ದುರಸ್ತಿ ಕಾರ್ಯ ಆಗಿಲ್ಲ. ಶಾಲಾ ಮಕ್ಕಳಿಗೆ ಸೂಕ್ತ ಶೌಚಾಲಯಗಳ ಅವಶ್ಯವಿದೆ. ಆಟದ ಮೈದಾನದ ಕೊರತೆಯಿದೆ. ಶಾಲೆಗೆ ಕಾಂಪೌಂಡ ಬೇಕಾಗಿದೆ’ ಎನ್ನುತ್ತಾರೆ ಶಾಲಾ ಅಭಿವೃದ್ಧಿ ಸಮತಿ ಅಧ್ಯಕ್ಷ ಹನುಮಂತಪ್ಪ ಕಾಡಪ್ಪನವರ.

ಹಾಳುಕೊಂಪೆಯಾದ ಪ್ರವಾಸಿ ಮಂದಿರ: ಗ್ರಾಮದಲ್ಲಿರುವ ಪ್ರವಾಸಿ ಮಂದಿರ ಹಲವಾರು ವರ್ಷಗಳಿಂದ ಸೂಕ್ತ ನಿರ್ವಹಣೆಯಿಲ್ಲದೆ ಹಾಳುಕೊಂಪೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರವಾಸಿ ಮಂದಿರ ಬಳಕೆಯಿಲ್ಲದೆ ಸರ್ಕಾರಿ ಕಟ್ಟಡ ಹಾಳಾಗಿದೆ. ಇಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲದೆ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಪ್ರವಾಸಿಮಂದಿರ ಮುಖ್ಯ ಗೇಟುಗಳು ಹಾಳಾಗಿವೆ. ಕಾವಲುಗಾರರು ಇಲ್ಲದಿರುುದರಿಂದ ರಾತ್ರಿ ವೇಳೆ ಕಿಡಿಗೇಡಿಗಳು ಮದ್ಯಪಾನದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ.

ಪ್ರವಾಸಿಮಂದಿರಕ್ಕೆ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆಯಿಲ್ಲದೆ ಯಾರೂ ಪ್ರವಾಸಿಗರಾಗಲಿ, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಉಳಿದುಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಟ್ಟಡದ ಕಿಟಕಿ, ಬಾಗಿಲು ಹಾಳಾಗಿವೆ. ಗ್ರಾಮದ ಹಲವಾರು ಸಣ್ಣಪುಟ್ಟ ಅಂಗಡಿಯವರು ನಿತ್ಯ ಶೇಖರಣೆಯಾದ ಕಸವನ್ನು ತಂದು ಪ್ರವಾಸಿಮಂದಿರ ಅಂಗಳಕ್ಕೆ ತಂದು ಹಾಕುತ್ತಾರೆ. ಇನ್ನಾದರೂ ಲೋಕೋಪಯೋಗಿ ಇಲಾಖೆಯವರು ಎಚ್ಚೆತ್ತುಕೊಂಡು ಇಲ್ಲಿನ ಪ್ರವಾಸಿಮಂದಿರವನ್ನು ಸುಸ್ಥಿತಿಯಲ್ಲಿರುವಂತೆ ಹಾಗೂ ಸಾರ್ವಜನಿಕರಿಗೆ ಬಳಕೆಗೆ ಯೋಗ್ಯವಾಗಿರುವಂತೆ ನೋಡಿಕೊಳ್ಳಬೇಕು ಎಂಬುದು ಗ್ರಾಮಸ್ಥರು ಆಶಯವಾಗಿದೆ.

ಲಿಂಗದೇವರಕೊಪ್ಪದಲ್ಲಿ ರಟ್ಟೀಹಳ್ಳಿ, ಹಿರೇಕೆರೂರ, ರಾಣೆಬೆನ್ನೂರ, ಬ್ಯಾಡಗಿ ನಾಲ್ಕು ಕಡೆಗಳಿಂದ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಹೀಗಾಗಿ ವಾಹನ ದಟ್ಟಣೆ ಹೆಚ್ಚಾಗಿ ಪದೆ ಪದೇ ಅಪಘಾತಗಳು ಸಂಭವಿಸುತ್ತವೆ. ಒಂದು ಸರ್ಕಲ್ ನಿರ್ಮಿಸುವುದು ಅವಶ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕಾರಣ ಪಾಳುಬಿದ್ದ ಪ್ರವಾಸಿಮಂದಿರ ಕಟ್ಟಡವನ್ನು ಪುನಶ್ಚೇತನಗೊಳಿಸಬೇಕು. ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಮುಖ್ಯ ರಸ್ತೆಗೆ ಹೊಂದಿಕೊಂಡು ಇರುವುದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ರಸ್ತೆ ಹಮ್ಸ್ ಅಳವಡಿಸಬೇಕು ಎನ್ನುತ್ತಾರೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಕನ್ನಪ್ಪ ಮೇಗಳಮನಿ.

ರಟ್ಟೀಹಳ್ಳಿ ತಾಲ್ಲೂಕಿನ ಲಿಂಗದೇವರಕೊಪ್ಪದ ಸರ್ಕಾರಿ ಕನ್ನಡ ಶಾಲೆಯ ನೋಟ
ರಟ್ಟೀಹಳ್ಳಿ ತಾಲ್ಲೂಕಿನ ಲಿಂಗದೇವರಕೊಪ್ಪದ ಸರ್ಕಾರಿ ಕನ್ನಡ ಶಾಲೆಯ ನೋಟ
ಶಾಲಾ ಕಟ್ಟಡಗಳು ಹಾಳಾಗಿರುವುದು
ಶಾಲಾ ಕಟ್ಟಡಗಳು ಹಾಳಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT