ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಕ್ರಮ: ಸಚಿವ ಶಿವರಾಮ ಹೆಬ್ಬಾರ್‌

74ನೇ ಗಣರಾಜ್ಯೋತ್ಸವ ದಿನಾಚರಣೆ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಹೇಳಿಕೆ
Last Updated 26 ಜನವರಿ 2023, 12:42 IST
ಅಕ್ಷರ ಗಾತ್ರ

ಹಾವೇರಿ: ‘ಸಮಾಜದ ಶ್ರೇಯೋಭಿವೃದ್ಧಿಯೇ ನಮ್ಮ ಸಂವಿಧಾನದ ಅಂತಿಮ ಆಶಯವಾಗಿದೆ. ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆ ವ್ಯಕ್ತಿಯ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ’ ಎಂದು ಕಾರ್ಮಿಕ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್‌ ಹೇಳಿದರು.

ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 74ನೇ ಭಾರತ ಗಣರಾಜ್ಯೋತ್ಸವ ರಾಷ್ಟ್ರದ್ವಜಾರೋಹಣ ನೆರವೇರಿಸಿ ಸಾರ್ವಜನಿಕ ಸಂದೇಶ ನೀಡಿದ ಅವರು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿರುವ ಭಾರತ ಸಂವಿಧಾನದ ಆಶಯದಂತೆ ನಡೆದುಕೊಳ್ಳಲು ನಮ್ಮ ಸರ್ಕಾರ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ನಾವೆಲ್ಲರೂ ಅಭಿವೃದ್ಧಿಯೊಂದಿಗೆ, ಜಾತ್ಯತೀತ, ಧರ್ಮಾತೀತ, ಭ್ರಾತೃತ್ವ ನೆಲೆಯಲ್ಲಿ ತಾಯ್ನಾಡಾದ ಕರ್ನಾಟಕ ರಾಜ್ಯವನ್ನು ಹಾಗೂ ಭಾರತ ದೇಶವನ್ನು ಸಶಕ್ತ, ಸದೃಢವಾಗಿ ರೂಪಿಸಲು ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಮಹಾಪರ್ವವೇ ಜರುಗಿದೆ. ಕೊಟ್ಟ ಮಾತಿನಂತೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ತರಗತಿಗಳು ಆರಂಭಗೊಂಡಿವೆ. ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ತ್ವರಿತವಾಗಿ ಸಾಗಿದೆ. ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಮೆಗಾ ಡೇರಿಗೆ ಚಾಲನೆ ನೀಡಲಾಗಿದೆ. ಟ್ರೆಟ್ರಾಪ್ಯಾಕ್ ಘಟಕ ಹಾಗೂ ಜವಳಿ ಪಾರ್ಕ್ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಹಾವೇರಿ ವಿಶಿಷ್ಟ ವಿಶ್ವವಿದ್ಯಾಲಯ ಆರಂಭಕ್ಕೆ ಹಸಿರು ನಿಶಾನೆ ತೋರಿದೆ. ಗಾಂಧಿ ಭವನ, ವಿಜ್ಞಾನ ಭವನ, ನೀರಾವರಿ ಯೋಜನೆಗಳು ಉದ್ಘಾಟನೆಗೆ ಸಿದ್ಧಗೊಂಡಿವೆ. ಪ್ರಸಕ್ತ ಸಾಲಿನಿಂದ ಯಶಸ್ವಿನಿ ಯೋಜನೆ ಪುನಃ ಆರಂಭಿಸಲಾಗಿದ್ದು, ಜಿಲ್ಲೆಯಲ್ಲಿ 79,839 ಜನ ನೋಂದಾಯಿಸಿಕೊಂಡಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ 726 ಗ್ರಾಮಗಳಿಗೆ ಮನೆ ಮನೆಗೆ ನೀರು ಪೂರೈಸಲು ₹651.43 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.

452 ಗ್ರಾಮಗಳಿಗೆ ನೀರು:

ತಡಸ, ಆಣೂರು, ಹಂಸಭಾವಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ 452 ಗ್ರಾಮಗಳಿಗೆ ₹1425 ಕೋಟಿ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಆರಂಭಿಸಬೇಕಾಗಿದೆ. ವೃದ್ಧಾಪ್ಯವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ಯೋಜನೆ, ಮೈತ್ರಿ, ಮನಸ್ವಿನಿ ಒಳಗೊಂಡಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಜಿಲ್ಲೆಯ 2,40,324 ಫಲಾನುಭವಿಗಳಿಗೆ ಮಾಶಾಸನ ಮಂಜೂರು ಮಾಡಲಾಗಿದ್ದು, ಈ ವರ್ಷ ₹302.12 ಕೋಟಿ ಮಾಸಾಶನ ಮೊತ್ತ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸನ್ಮಾನ:

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಗಮನಸೆಳೆದ ಮಕ್ಕಳ ನೃತ್ಯ

ಮುನ್ಸಿಪಲ್ ಹೈಸ್ಕೂಲ್, ಜೆ.ಪಿ ರೋಟರಿ, ಎಲ್.ಇ.ಎಂ.ಎಸ್ ಹಾಗೂ ಸೆಂಟ್‍ಆ್ಯನ್ಸ್ ಪೌಢಶಾಲೆಯ ಸುಮಾರು ಇನ್ನೂರು ಮಕ್ಕಳು ವಿವಿಧ ದೇಶ ಭಕ್ತಿಗೀತೆಗಳಿಗೆ ನಾಲ್ಕು ತಂಡಗಳಾಗಿ ಆಕರ್ಷಕ ನೃತ್ಯ ಮಾಡಿದರು. ತ್ರಿವರ್ಣ ಧ್ವಜ ಹಿಡಿದ ಮಕ್ಕಳು ದೇಶಭಕ್ತಿಯ ಸಂದೇಶವನ್ನು ಸಾರಿದರು. ಗಾಳಿಯಲ್ಲಿ ಬಲೂನು ಹಾರಿಬಿಟ್ಟು ಮಕ್ಕಳು ಸಂಭ್ರಮಿಸಿದರು. ಪ್ರೇಕ್ಷಕರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸ್, ಹೋಮ್‌ ಗಾರ್ಡ್ಸ್‌, ಅಬಕಾರಿ, ಎನ್‍.ಎಸ್‍.ಎಸ್, ಎನ್.ಸಿ.ಸಿ, ಸ್ಕೌಟ್ & ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಹದಿನಾಲ್ಕು ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು.

ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಗುಣಾರೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಸನ್ಮಾನಿತರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT