ಗುರುವಾರ , ಜುಲೈ 16, 2020
24 °C
ಒಬ್ಬ ರೈತನಿಗೆ ಗರಿಷ್ಠ 5 ಎಕರೆಗೆ ಮಾತ್ರ ಬಿತ್ತನೆ ಬೀಜ; ಕೃಷಿ ಇಲಾಖೆಯಿಂದ ಸುತ್ತೋಲೆ

ಹಾವೇರಿ | ಬಿತ್ತನೆ ಬೀಜ ಕೊರತೆ: ರೈತರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಸಕಾಲದಲ್ಲಿ ಸಿಗದೆ ರೈತರು ಪರದಾಡುತ್ತಿದ್ದಾರೆ. 

ಕೃಷಿ ಚಟುವಟಿಕೆಗೆ ಜಮೀನನ್ನು ಹದಗೊಳಿಸಿರುವ ರೈತರು ಪ್ರಮಾಣೀಕೃತ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪಡೆಯಲು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಬರುತ್ತಿದ್ದಾರೆ. ಆದರೆ, ಅಲ್ಲಿ ಸಕಾಲದಲ್ಲಿ ಬಿತ್ತನೆ ಬೀಜ ಸಿಗುತ್ತಿಲ್ಲ ಮತ್ತು ಕೇಳಿದಷ್ಟು ಪ್ರಮಾಣ ಕೊಡುತ್ತಿಲ್ಲ ಎಂದು ರೈತರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿವೆ. 

5 ಎಕರೆಗೆ ಮಾತ್ರ ಬಿತ್ತನೆ ಬೀಜ: ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಸಮಯದಲ್ಲಿ ಒಂದು ಬೆಳೆಯ ಬಿತ್ತನೆ ಬೀಜವನ್ನು ಗರಿಷ್ಠ 3 ಎಕರೆ ಅಥವಾ ಅವರ ವಾಸ್ತವಿಕ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ವಿತರಿಸಬೇಕು. ಇನ್ನು ಉಳಿದ ಪ್ರದೇಶಕ್ಕೆ ಬೇರೆ ಬೆಳೆಯ ಬಿತ್ತನೆ ಬೀಜವನ್ನು ವಿತರಿಸಬೇಕು. ಒಬ್ಬ ರೈತನಿಗೆ ಒಟ್ಟಾರೆ 5 ಎಕರೆವರೆಗೆ ಬಿತ್ತನೆ ಬೀಜ ವಿತರಿಸಬಹುದು ಎಂದು ಕೃಷಿ ಇಲಾಖೆ ಸುತ್ತೋಲೆ ಹೊರಡಿಸಿದೆ. 

ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಏಕಬೆಳೆ ಪದ್ಧತಿಯನ್ನು ಪ್ರೋತ್ಸಾಹಿಸುವ ಬದಲು ಬಹುಬೆಳೆ, ಅಂತರ‌ ಬೆಳೆ ಹಾಗೂ ಮಿಶ್ರಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ತಿಳಿವಳಿಕೆ ನೀಡಬೇಕು. ಇದರಿಂದ ರೈತರ ಆದಾಯ ಹೆಚ್ಚಿಸಲು ಅನುಕೂಲವಾಗುವುದು ಎಂದು ಕೃಷಿ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. 

ಕಡಿಮೆಯಾದ ಬಿತ್ತನೆ ಬೀಜ ವಿತರಣೆ ಗುರಿ: ಹಾವೇರಿ ತಾಲ್ಲೂಕಿನಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜದ ವಿತರಣೆಯ ಗುರಿಯು ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಗೋವಿನ ಜೋಳ 1600 ಕ್ವಿಂಟಲ್‌ (ಕಳೆದ ವರ್ಷ 2325 ಕ್ವಿ.), ಭತ್ತ 180 ಕ್ವಿ.(220 ಕ್ವಿ.), ಜೋಳ 4 ಕ್ವಿ. (6 ಕ್ವಿ), ತೊಗರಿ 110 ಕ್ವಿ. (150 ಕ್ವಿ), ಹೆಸರು 26 ಕ್ವಿ (45 ಕ್ವಿ), ಶೇಂಗಾ 975 ಕ್ವಿ (1450 ಕ್ವಿ), ಸೋಯಾ ಅವರೆ 1550 ಕ್ವಿ. (2000 ಕ್ವಿ). 

ಹಾವೇರಿ ತಾಲ್ಲೂಕಿನಲ್ಲಿ ಹಿಂದಿನ ವರ್ಷ 6196 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆ ಗುರಿ ಹೊಂದಲಾಗಿತ್ತು. ಈ ಬಾರಿ 4445 ಕ್ವಿಂಟಲ್‌ ವಿತರಣೆ ಗುರಿ ಹೊಂದಲಾಗಿದೆ. ಅಂದರೆ ಈ ಬಾರಿ 1751 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆ ಕಡಿಮೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈ ಬಾರಿ 16,065 ಕ್ವಿಂಟಲ್‌ ಬಿತ್ತನೆ ಬೀಜ ವಿತರಿಸುವ ಗುರಿ ಹೊಂದಲಾಗಿದೆ.

‘ಬಿತ್ತನೆ ಬೀಜವನ್ನು ಈಗಾಗಲೇ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತಿದ್ದೇವೆ. ತಾಲ್ಲೂಕಿನ ಮೂರು ಹೋಬಳಿಯ ಕೃಷಿ ಅಧಿಕಾರಿಗಳ ಬೇಡಿಕೆ ಅನುಸಾರ ಸೋಯಾ ಅವರೆ, ಶೇಂಗಾ ಮತ್ತು ಗೋವಿನಜೋಳವನ್ನು ತಲಾ ಒಂದು ಸಾವಿರ ಕ್ವಿಂಟಲ್‌ ಹಾಗೂ 300 ಕ್ವಿಂಟಲ್‌ ತೊಗರಿ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಹಾಗಾಗಿ ಸದರಿ ಸಂಸ್ಥೆಯವರಿಗೆ ಬಿತ್ತನೆ ಬೀಜ ಸರಬರಾಜು ಮಾಡಲು ಸೂಚಿಸಬೇಕು ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಕೋರಿದ್ದೇವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ರಮೇಶ ಕುಡುಪಲಿ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು