ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ ವಿಶ್ವವಿದ್ಯಾಲಯ | ಹಸ್ತಾಂತರವಾಗದ ಮಾಲೀಕತ್ವ; ಅಭಿವೃದ್ಧಿಗೆ ಅಡ್ಡಿ

ಮೂಲ ಸೌಕರ್ಯ ವಂಚಿತ ವಿ.ವಿ
Published 5 ಜುಲೈ 2024, 4:43 IST
Last Updated 5 ಜುಲೈ 2024, 4:43 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹಾವೇರಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಎರಡು ವರ್ಷವಾಗುತ್ತಿದ್ದು, ಕೆರಿಮತ್ತಿಹಳ್ಳಿಯಲ್ಲಿರುವ 42 ಎಕರೆ ಪ್ರದೇಶದ ಮಾಲೀಕತ್ವ ಹಸ್ತಾಂತರವಾಗದಿದ್ದರಿಂದ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಉಂಟಾಗಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿದ್ದ ಹಾವೇರಿ ಜಿಲ್ಲೆಯ 42 ಸಂಯೋಜಿತ ಕಾಲೇಜುಗಳನ್ನು ಬೇರ್ಪಡಿಸಿ 2022ರಲ್ಲಿ ‘ಹಾವೇರಿ ವಿಶ್ವವಿದ್ಯಾಲಯ’ ಸ್ಥಾಪಿಸಲಾಗಿದೆ. ನಗರದಿಂದ 8 ಕಿ.ಮೀ ದೂರದಲ್ಲಿರುವ ಕೆರಿಮತ್ತಿಹಳ್ಳಿ ಬಳಿಯ ಕಟ್ಟಡದಲ್ಲಿ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಿದ್ದು, ಸದ್ಯ ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸರ್ಕಾರ ಒದಗಿಸಿದ್ದ ಅಲ್ಪ ಸೌಕರ್ಯಗಳನ್ನು ಬಳಸಿಕೊಂಡು ತಕ್ಕಮಟ್ಟಿಗೆ ತರಗತಿಗಳು ಹಾಗೂ ಆಡಳಿತ ಪ್ರಕ್ರಿಯೆ ನಡೆಯುತ್ತಿದೆ. ಕೆರಿಮತ್ತಿಹಳ್ಳಿಯಲ್ಲಿರುವ 42 ಎಕರೆ ಪ್ರದೇಶವು ಸದ್ಯ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಾಲೀಕತ್ವದಲ್ಲಿವೆ. ಈ ಮಾಲೀಕತ್ವವನ್ನು ಹಾವೇರಿ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಲಾಗಿದೆ. ಪ್ರಸ್ತಾವ ಸಲ್ಲಿಸಿ ಎರಡು ತಿಂಗಳಾದರೂ ಮಾಲೀಕತ್ವ ಹಸ್ತಾಂತರವಾಗಿಲ್ಲ. ಇದರಿಂದಾಗಿ, ವಿಶ್ವವಿದ್ಯಾಲಯದ ಅಭಿವೃದ್ಧಿ ಕೆಲಸಗಳಿಗೆ ಯೋಜನೆ ರೂಪಿಸಲು ಕಾನೂನು ತೊಡಕುಗಳು ಎದುರಾಗಿವೆ.

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ನಮ್ಮ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದಕ್ಕೂ ಮುನ್ನ ನಮ್ಮ ವಿಶ್ವವಿದ್ಯಾಲಯದ ಹೆಸರಿಗೆ ಮಾಲೀಕತ್ವ ಹಸ್ತಾಂತರ ಆಗಬೇಕು’ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಎಚ್‌. ಜಂಗಮಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಲೀಕತ್ವ ಹಸ್ತಾಂತರಕ್ಕೆ ಸಂಬಂಧಪಟ್ಟ ದಾಖಲೆಗಳ ಸಮೇತ ಎರಡು ತಿಂಗಳ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ಲೋಕಸಭಾ ಚುನಾವಣೆ ನಿಮಿತ್ತ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ಪುನಃ ಪ್ರಕ್ರಿಯೆ ಆರಂಭವಾಗಿದ್ದು, ಸದ್ಯದಲ್ಲೇ ಮಾಲೀಕತ್ವ ಹಸ್ತಾಂತರವಾಗುವ ವಿಶ್ವಾಸವಿದೆ’ ಎಂದು ಹೇಳಿದರು.

'ತರಗತಿ ಕೊಠಡಿಗಳ ಸುಧಾರಣೆ, ಆಧುನಿಕ ಸೌಲಭ್ಯ, ಮೈದಾನ ಅಭಿವೃದ್ಧಿ ಹಾಗೂ ಇತರೆ ಕೆಲಸಗಳನ್ನು ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಮೊದಲಿಗೆ, ವಿಶ್ವವಿದ್ಯಾಲಯದ ಹೆಸರಿಗೆ 42 ಎಕರೆ ನೋಂದಣಿಯಾಗಬೇಕು. ನಂತರವೇ ಎಲ್ಲ ಯೋಜನೆ ಜಾರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

6 ವಿಭಾಗದಲ್ಲಿ ವಿದ್ಯಾರ್ಥಿಗಳ ವ್ಯಾಸಂಗ: ‘ಕನ್ನಡ, ಇಂಗ್ಲಿಷ್, ಸಮಾಜ ವಿಜ್ಞಾನ, ಸಮಾಜ ಕಾರ್ಯ, ವಾಣಿಜ್ಯ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಗಳು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿವೆ. 18 ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇದ್ದು, ಅತಿಥಿ ಪ್ರಾಧ್ಯಾಪಕರ ಮೂಲಕ ತರಗತಿಗಳು ನಡೆಯುತ್ತಿವೆ’ ಎಂದು ಸುರೇಶ ಹೇಳಿದರು.

ಪ್ರವೇಶ ಶುಲ್ಕ ಇಳಿಕೆ ಬಗ್ಗೆ ಚಿಂತನೆ: ‘ಧಾರವಾಡ ವಿಶ್ವವಿದ್ಯಾಲಯದ ಮಾದರಿಯಲ್ಲಿಯೇ 2 ವರ್ಷ ಶುಲ್ಕ ನಿಗದಿಪಡಿಸುವಂತೆ ಸರ್ಕಾರ ಹೇಳಿತ್ತು. ಹೀಗಾಗಿ, ವಿದ್ಯಾರ್ಥಿಗಳಿಂದ ಅದೇ ಶುಲ್ಕ ಪಡೆಯಲಾಗುತ್ತಿತ್ತು. ಎರಡು ವರ್ಷ ಮುಗಿಯುತ್ತ ಬಂದಿದ್ದು, ಸೌಕರ್ಯಕ್ಕೆ ತಕ್ಕಂತೆ ಶುಲ್ಕ ಇಳಿಕೆ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸುರೇಶ ತಿಳಿಸಿದರು.

‘ವಿದ್ಯಾರ್ಥಿಗಳ ಓಡಾಟಕ್ಕೆ ಬಸ್ಸಿನ ಅನುಕೂಲವೂ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸಲಾಗುವುದು’ ಎಂದರು.

‘5 ಹೊಸ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭ’

‘2024–25ನೇ ಶೈಕ್ಷಣಿಕ ವರ್ಷದಿಂದ ಹೊಸದಾಗಿ ಎಂಬಿಎ ಎಂಸಿಎ ಎಂ.ಎ ಸಾರ್ವಜನಿಕ ಆಡಳಿತ ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ ಎಂ.ಎಸ್ಸಿ ಎನರ್ಜಿ ಟೆಕ್ನಾಲಜಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲಾಗುತ್ತಿದೆ’ ಎಂದು ಸುರೇಶ ಹೇಳಿದರು. ‘ವಿಶ್ವವಿದ್ಯಾಲಯದ ಅಧೀನದಲ್ಲಿ 42 ಕಾಲೇಜುಗಳಿವೆ. ನಿಗದಿತ ವೇಳಾಪಟ್ಟಿ ಅನ್ವಯ ಪರೀಕ್ಷೆ ಆಯೋಜನೆ ಮೌಲ್ಯಮಾಪನ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗುತ್ತಿದೆ’ ಎಂದರು.

ವಿಶ್ವವಿದ್ಯಾಲಯ ಆರಂಭವಾದ ಮೊದಲ ವರ್ಷವೇ ಲಭ್ಯವಿರುವ ಸೌಲಭ್ಯ ಬಳಸಿಕೊಂಡು ನಿಗದಿತ ಸಮಯದಲ್ಲಿ ಪರೀಕ್ಷೆ ನಡೆಸಿ ಮೌಲ್ಯಮಾಪನವನ್ನೂ ಮುಗಿಸಿ ಫಲಿತಾಂಶ ನೀಡಲಾಗಿದೆ
–ಡಾ. ವಿಜಯಲಕ್ಷ್ಮಿ ತಿರ್ಲಾಪುರ ಕುಲಸಚಿವರು (ಮೌಲ್ಯಮಾಪನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT