ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಸಿ.ಎಂ. ಆಗಿರೋವರೆಗೂ ನಾನು ಮಂತ್ರಿ ಆಗಲ್ಲ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
Last Updated 18 ಜನವರಿ 2021, 13:52 IST
ಅಕ್ಷರ ಗಾತ್ರ

ಹಾವೇರಿ: ‘ನಾನು ಸಚಿವ ಸ್ಥಾನ ಕೇಳಿಲ್ಲ. ನನಗೆ ಕೋಡೋದು ಬೇಡ ಅಂತಾನೇ ಹೇಳಿದ್ದೇನೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರೋವರೆಗೂ ನಾನು ಮಂತ್ರಿಯಾಗಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಡಕ್‌ ಆಗಿ ನುಡಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನನ್ನದೇ ಆದ ನೀತಿ ಮತ್ತು ತತ್ವಗಳಿವೆ. ಮುಂದೆ ಮಂತ್ರಿ ಆದ ಮೇಲೆ, ಯಾಕೆ ಯಡಿಯೂರಪ್ಪನವರ ನಾಯಕತ್ವದಲ್ಲಿ ಮಂತ್ರಿ ಆಗಲಿಲ್ಲ ಅಂತ ಹೇಳುತ್ತೇನೆ. ಸಂಪುಟ ವಿಸ್ತರಣೆಯಲ್ಲಿ ಜಿಲ್ಲಾವಾರು ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ ಕೆಲವರಿಗೆ ಅಸಮಾಧಾನವಾಗಿದೆ. ಈ ಸಮಸ್ಯೆ ಬಗೆಹರಿಸುವುದು ಮುಖ್ಯಮಂತ್ರಿಯವರ ಕೆಲಸ. ದೆಹಲಿಯತ್ತ ಕೈ ತೋರಿಸಬಾರದು’ ಎಂದು ಟೀಕಿಸಿದರು.

‘ನಾಯಕತ್ವ ಬದಲಾವಣೆ ಬಗ್ಗೆ ಯಡಿಯೂರಪ್ಪನವರೇ ಸಿದ್ದರಾಮಯ್ಯ ಅವರಿಗೆ ಹೇಳಿರಬಹುದು. ಅವರಿಬ್ಬರೂ ಆತ್ಮೀಯರಿದ್ದಾರೆ. ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾರ್ಜ್‌, ಜಮೀರ್‌ ಅಹಮದ್‌ ಅವರೊಂದಿಗೂ ಸಿ.ಎಂ.ಗೆ ಒಳ್ಳೆಯ ಸಂಬಂಧವಿದೆ. ಪರಸ್ಪರ ಮಾತನಾಡಿಕೊಂಡಿರಬಹುದು. ಯಾವಾಗ ಏನಾದರೂ ಆಗಬಹುದು. ಯಾವುದು ಶಾಶ್ವತವಲ್ಲ’ ಎಂದು ಹೇಳಿದರು.

ಮಾಧ್ಯಮದವರಿಗೆ ಪಾಠ:

‘ಅಮಿತ್‌ ಶಾ ಅವರು ಮುಂದಿನ ಎರಡೂವರೆ ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುತ್ತೆ. 2023ಕ್ಕೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಆದರೆ, ನೀವು ಮಾಧ್ಯಮದವರು ತಮಗೆ ಹೇಗೆ ಬೇಕೋ ಹಾಗೆ ತಿರುಚಿ ಹೇಳ್ತೀರಿ. ‘ರಾಜಹುಲಿ’ ಪ್ರೀತಿ ಇದ್ದವರು ಸೂರ್ಯ –ಚಂದ್ರ ಇರೋವರೆಗೂ ಅವರೇ ಸಿ.ಎಂ. ಆಗಿರುತ್ತಾರೆ ಎಂದು ಹೇಳುತ್ತೀರಿ. ‘ಒರ್ಜಿನಲ್‌ ಸ್ಟೇಟ್‌ಮೆಂಟ್‌’ ಅನ್ನು ಪ್ರಸಾರ ಮಾಡಿ’ ಎಂದು ಮಾಧ್ಯಮದವರಿಗೆ ಕುಟುಕಿದರು.

ಸಿ.ಡಿ. ಬಗ್ಗೆ ನಾನು ಎಲ್ಲೂ ಹೇಳಿಲ್ಲ. ಡಿ.ಕೆ.ಶಿವಕುಮಾರ್‌ ಮತ್ತು ಸಿ.ಪಿ.ಯೋಗೇಶ್ವರ ಹೇಳಿದ್ದಾರೆ. ಗೌಡ್ರೆ ನೀವು ನೋಡೋಂಥದ್ದಲ್ಲ ಅಂತಲೂ ಹೇಳಿದ್ದಾರೆ. ಬಸವಣ್ಣ ಮತ್ತು ಶರಣರ ವಚನವನ್ನು ಮಾತ್ರ ನಾನು ವೀಕ್ಷಿಸುತ್ತೇನೆ ಎಂದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ‘ಬಿಜೆಪಿಗೆ ಸೇರಿರುವ 17 ವಲಸಿಗರು ಮೋದಿ ಗಾಳಿ ಇರೋವರೆಗೂ ಭಾರತ್‌ ಮಾತಾಕಿ ಜೈ ಅನ್ನುತ್ತಾರೆ. ಹವಾ ಕಡಿಮೆ ಆದ್ರೆ ಸೋನಿಯಾ ಮಾತಾಕಿ ಜೈ ಅಂತಾರೆ ಎಂದರು.

ಉಪದ್ಯಾಪಿ ಠಾಕ್ರೆ:

‘ಅವ ಉದ್ಧವ್‌ ಠಾಕ್ರೆ ಅಲ್ಲ, ಉಪದ್ಯಾಪಿ ಠಾಕ್ರೆ ಆಗಿದ್ದಾನೆ. ಭಾಳ್‌ ಠಾಕ್ರೆ ಅವರ ಮರ್ಯಾದೆ ಕಳೆಯುತ್ತಿದ್ದಾನೆ. ಮಹಾರಾಷ್ಟ್ರ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡೋದು ಬಿಟ್ಟು, ಇಂಥ ರಾಜಕೀಯ ಸ್ಟಂಟ್‌ ಮಾಡುತ್ತಿದ್ದಾನೆ. ಭಾಷಾ ಪ್ರಚೋದನೆ ಮಾಡುವ ಮೂಲಕ ಲಾಭ ಮಾಡಿಕೊಳ್ಳುವ ಹುನ್ನಾರ ಅವರದ್ದು’ ಎಂದು ಏಕವಚನದಲ್ಲಿ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT