ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರದ ದಾಖಲೆ ಬಿಡುಗಡೆ ಮಾಡಿದ ಬೊಮ್ಮಾಯಿ

ಯುಪಿಎ– ಎನ್‌ಡಿಎ ಪರಿಹಾರದಲ್ಲಿ ಅಜಗಜಾಂತರ ವ್ಯತ್ಯಾಸ
Published 28 ಏಪ್ರಿಲ್ 2024, 13:14 IST
Last Updated 28 ಏಪ್ರಿಲ್ 2024, 13:14 IST
ಅಕ್ಷರ ಗಾತ್ರ

ಹಾವೇರಿ: ‌‘ಕೇಂದ್ರ ಸರ್ಕಾರ ನೀಡಿರುವ ₹3,454 ಕೋಟಿ ಬರ ಪರಿಹಾರದ ಮೊತ್ತಕ್ಕೆ ಸಮನಾಗಿ ರಾಜ್ಯ ಸರ್ಕಾರವೂ ತನ್ನ ಖಜಾನೆಯಿಂದ ರೈತರಿಗೆ ಬರ ಪರಿಹಾರವನ್ನು ತಕ್ಷಣವೇ ನೀಡಬೇಕು’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. 

ಕಾಂಗ್ರೆಸ್‌ ಸರ್ಕಾರಕ್ಕೆ ಬದ್ಧತೆ ಇದ್ದರೆ, ಖಜಾನೆಯಲ್ಲಿ ದುಡ್ಡಿದ್ದರೆ, ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ತನ್ನ ಪಾಲಿನ ಹಣವನ್ನೂ ಸಂಕಷ್ಟದಲ್ಲಿರುವ ಅನ್ನದಾತರ ಖಾತೆಗೆ ತಕ್ಷಣ ಹಾಕಬೇಕು. ಬರ ಪರಿಹಾರದ ಬಗ್ಗೆ ಕಾಂಗ್ರೆಸ್ ಸರ್ಕಾರ ಹಿಂದೆಂದೂ ಕಾಣದ ರಾಜಕಾರಣ ಮಾಡುತ್ತಿದೆ. ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ವಿಳಂಬವಾಯಿತು ಎಂದು ಬೊಬ್ಬೆ ಹಾಕುತ್ತಿದ್ದಾರೆ. ಯುಪಿಎ ಅವಧಿಯಲ್ಲಿ 20 ತಿಂಗಳ ನಂತರ ರಾಜ್ಯಕ್ಕೆ ಬರ ಪರಿಹಾರ ಕೊಟ್ಟಿದ್ದರು. ಆಗ ಪ್ರತಿಭಟನೆ ಮಾಡದ ಕಾಂಗ್ರೆಸ್‌ನವರು ಇಂದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ದಾಖಲೆ ಬಿಡುಗಡೆ:

ಯುಪಿಎ ಹಾಗೂ ಎನ್‌ಡಿಎ ಅವಧಿಯಲ್ಲಿ ರಾಜ್ಯಕ್ಕೆ ಬಿಡುಗಡೆಯಾದ ಪರಿಹಾರದ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ 2004 ರಿಂದ 2014ರವರೆಗೆ ಹತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಬರ ಪರಿಹಾರಕ್ಕೆ ₹19,579 ಕೋಟಿ ಮನವಿ ಸಲ್ಲಿಸಲಾಗಿತ್ತು. ಆದರೆ ಬಿಡುಗಡೆ ಮಾಡಿದ್ದು ಕೇವಲ ₹1,954 ಕೋಟಿ ಮಾತ್ರ. ಅಂದರೆ ಶೇ 10ರಷ್ಟು ಬರ ಪರಿಹಾರ ಎಂದು ಹೇಳಿದರು. 

ಎನ್‌ಡಿಎ ಸರ್ಕಾರದ ಅವಧಿಯಲ್ಲಿ 2014-24ರವರೆಗೆ ರಾಜ್ಯ ಸರ್ಕಾರದಿಂದ ₹36,588 ಕೋಟಿ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ₹9,639 ಕೋಟಿ (ಶೇ 26ರಷ್ಟು) ಬಿಡುಗಡೆ ಮಾಡಿದೆ. ಯುಪಿಎ ಸರ್ಕಾರ ಮತ್ತು ಎನ್‌ಡಿಎ ಸರ್ಕಾರ ಕರ್ನಾಟಕಕ್ಕೆ ನೀಡಿದ ಪರಿಹಾರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿದರೆ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್‌ನವರು ಇದ್ದಾರೆ ಎಂದು ಕುಟುಕಿದರು. 

ದುಪ್ಪಟ್ಟು ಪರಿಹಾರ:

ಯಡಿಯೂರಪ್ಪ ಮತ್ತು ನಾನು ಸಿಎಂ ಆಗಿದ್ದ  ಅವಧಿಯಲ್ಲಿ ಪ್ರವಾಹ ಬಂದಾಗ ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರವಾಗಿ ₹10 ಸಾವಿರ ಬಿಡುಗಡೆ ಮಾಡಿದ್ದೆವು. ಪೂರ್ಣ ಪ್ರಮಾಣದ ಮನೆ ಬಿದ್ದರೆ ₹5 ಲಕ್ಷ, ಭಾಗಶಃ ಬಿದ್ದರೆ ₹3 ಲಕ್ಷ, ಹಾಗೂ ಅಲ್ಪ ಪ್ರಮಾಣದ ಹಾನಿಗೆ ₹50 ಸಾವಿರ ಪರಿಹಾರ ನೀಡಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ತನ್ನ ಖಜಾನೆಯಿಂದ ನಯಾಪೈಸೆ ಪರಿಹಾರ ನೀಡಿಲ್ಲ. ಹೀಗಾಗಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಈ ನಾಟಕ ಹೂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಮೋದಿ ಫೋಬಿಯಾ:

ನಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದು ಕಾಂಗ್ರೆಸ್‌ಗೆ ಫ್ಯಾಷನ್ ಆಗಿದೆ. ಕಾಂಗ್ರೆಸ್‌ಗೆ ಮೋದಿ ಫೋಬಿಯಾ ಶುರುವಾಗಿದೆ‌. ಮೋದಿ ಟೀಕಿಸಿದರೆ ಮತ ಗಳಿಕೆಯಾಗುತ್ತದೆ ಎಂದುಕೊಂಡಿದ್ದಾರೆ. ಆದರೆ, ಟೀಕಿಸಿದಷ್ಟೂ ಮೋದಿಯವರ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT