ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಳ್ಳನ್ನೇ ಸತ್ಯವನ್ನಾಗಿಸುವ ಬಿಜೆಪಿ ನಾಯಕರು’

ಮಾಜಿ ಸಚಿವ ರುದ್ರಪ್ಪ ಲಮಾಣಿ ಆರೋಪ
Last Updated 5 ಜನವರಿ 2021, 14:06 IST
ಅಕ್ಷರ ಗಾತ್ರ

ಹಾವೇರಿ: ‘ಪದೇ ಪದೇ ಸುಳ್ಳು ಹೇಳುವ ಮೂಲಕ ಬಿಜೆಪಿ ನಾಯಕರು ಸುಳ್ಳನ್ನೇ ಸತ್ಯವನ್ನಾಗಿಸುತ್ತಾರೆ’ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಆರೋಪ ಮಾಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 36 ಗ್ರಾಮ ಪಂಚಾಯ್ತಿಗಳಲ್ಲಿ 29ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಶಾಸಕ ನೆಹರು ಓಲೇಕಾರ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ’ ಎಂದು ಹೇಳಿದರು.

ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಒಟ್ಟು 36 ಗ್ರಾಮ ಪಂಚಾಯ್ತಿಗಳಲ್ಲಿ ಹಾವೇರಿ ತಾಲ್ಲೂಕಿನ 13 ಮತ್ತು ಸವಣೂರ ತಾಲ್ಲೂಕಿನ 6 ಸೇರಿದಂತೆ ಒಟ್ಟು 19 ಗ್ರಾಮ ಪಂಚಾಯ್ತಿಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ ಎಂದರು.

ಆಮಿಷಕ್ಕೆ ಬಲಿಯಾಗಬೇಡಿ:

ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಬಿಜೆಪಿ ತೋರುವ ಆಮಿಷಕ್ಕೆ ಬಲಿಯಾಗಬಾರದು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಪಾರದರ್ಶಕವಾಗಿ ನಡೆಯುವ ವಿಶ್ವಾಸವಿದೆ. ಮೀಸಲಾತಿ ಪ್ರಕಟವಾದ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದರು.

ಮೆಡಿಕಲ್‌ ಕಾಲೇಜು:

ಮೆಡಿಕಲ್‌ ಕಾಲೇಜಿನ ಜಾಗದ ಬಗ್ಗೆ ಗೊಂದಲ ಉಂಟಾಗಿರುವುದು ಗಮನಕ್ಕೆ ಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲೇ ಜಾಗ ಗುರುತಿಸಲಾಗಿತ್ತು. ಆದರೆ ಕಾರಣಾಂತರದಿಂದ ಅನುದಾನ ಬಿಡುಗಡೆಯಾಗಲಿಲ್ಲ. ಒಟ್ಟಿನಲ್ಲಿ ಜಾಗದ ಸಮಸ್ಯೆ ಶೀಘ್ರ ಇತ್ಯರ್ಥವಾಗಿ, ಈ ವರ್ಷವೇ ತರಗತಿಗಳು ಪ್ರಾರಂಭವಾಗಲಿ ಎಂದು ಒತ್ತಾಯಿಸಿದರು.

ಪಕ್ಷ ಸಂಘಟನೆಗೆ ಒತ್ತು:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಜ.11ರಂದು ಬೆಳಗಾವಿ ವಿಭಾಗ ಮಟ್ಟದ ಸಮ್ಮೇಳನ ನಡೆಯಲಿದೆ. ಇಲ್ಲಿ ಬ್ಲಾಕ್‌ ಅಧ್ಯಕ್ಷರುಗಳ ಜತೆ ಚರ್ಚೆ ನಡೆಯಲಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 25ರಿಂದ 50 ಮಂದಿಯನ್ನೊಳಗೊಂಡ ಸದಸ್ಯರ ಸಮಿತಿ ರಚಿಸಿ, ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಎಂ.ಎಂ.ಹಿರೇಮಠ ತಿಳಿಸಿದರು.

ದಪ್ಪ ಚರ್ಮದ ಸರ್ಕಾರ: ಟೀಕೆ

‘ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಯ ಮಗನನ್ನು ಕೇಳುವ ಪರಿಸ್ಥಿತಿ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಂತಾದವರು ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಚಿಕೆಗೇಡಿತನದ ಸಂಗತಿ. ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಕ್ಕೆ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಇದು ದಪ್ಪ ಚರ್ಮದ ಸರ್ಕಾರ’ ಎಂದು ರುದ್ರಪ್ಪ ಲಮಾಣಿ ಮತ್ತು ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ ವಾಗ್ದಾಳಿ ನಡೆಸಿದರು.

‘ಶಾಸಕರ ವಿರುದ್ಧ ಮಾನಹಾನಿ ಪ್ರಕರಣ’

‘ನಾನು ಹೆಣ್ಣು ಮಕ್ಕಳ ಮಾರಾಟದಲ್ಲಿ ತೊಡಗಿದ್ದೆ ಎಂದು ಶಾಸಕ ನೆಹರು ಓಲೇಕಾರ ಆರೋಪ ಮಾಡುವ ಮೂಲಕ ನನ್ನ ಚಾರಿತ್ರ್ಯಹರಣ ಮಾಡಲು ಯತ್ನಿಸಿದ್ದು ನೋವಿನ ಸಂಗತಿ. ಅವರ ಬಳಿ ದಾಖಲೆಯಿದ್ದರೆ ಬಿಡುಗಡೆ ಮಾಡಲಿ. ಶಾಸಕರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಕಾನೂನು ತಜ್ಞರ ಜತೆ ಚಿಂತನೆ ನಡೆಸಿದ್ದೇನೆ’ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಶಾಸಕ ನೆಹರು ಓಲೇಕಾರ ಮತ್ತು ಅವರ ಮಕ್ಕಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣಗಳಿವೆ. ಪಕ್ಷದ ಪ್ರಚಾರಕ್ಕೆ ಬಂದ ಯಾರದೋ ಪತ್ನಿಯನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು, ಮಕ್ಕಳನ್ನು ಮತ್ತು ಪತಿಯನ್ನು ಬೇರೆ ಕಡೆ ಇಟ್ಟಿದ್ದರು. ನಂತರ ಆಕೆ ಮೃತಪಟ್ಟಳು. ಬೇರೆಯವರ ಬಾಳು ಮುರಿಯುವಂಥ ಚರಿತ್ರೆ ನಮಗಿಲ್ಲ ಎಂದು ಹೇಳಿದರು.

‘ಡ್ರಗ್ಸ್‌ ಪ್ರಕರಣದಲ್ಲಿ ನನ್ನ ಮಗ ದರ್ಶನ್‌ಗೆ ಈಗಾಗಲೇ ಜಾಮೀನು ಸಿಕ್ಕಿದೆ. ಆರೋಪಿಗಳ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ, ಅವರಿಗೆ ಆಶ್ರಯ ನೀಡಿದ್ದಾರೆ ಎಂಬುದನ್ನು ಬಿಟ್ಟರೆ, ಮಗ ಪಾಲ್ಗೊಂಡಿರುವ ಬಗ್ಗೆ ನಿಖರವಾದ ಸಾಕ್ಷ್ಯಾಧಾರಗಳಿಲ್ಲ. ಆದರೆ, ಶಾಸಕ ನೆಹರು ಓಲೇಕಾರ ಅವರು ನಮಗಿಂತ ಮುಂಚಿತವಾಗಿಯೇ ಸುದ್ದಿ ತಿಳಿದುಕೊಂಡು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಯಾವ ರೀತಿ ಮೊದಲೇ ತಯಾರಿ ಮಾಡಿಕೊಂಡಿದ್ದರೋ ಗೊತ್ತಿಲ್ಲ. ಬೇಜವಾಬ್ದಾರಿಯುತ ಹೇಳಿಕೆಗಳನ್ನು ಶಾಸಕರು ನಿಲ್ಲಿಸಬೇಕು’ ಎಂದು ಖಾರವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT