ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಹಿಂದೂ ವಿರೋಧಿ ನೀತಿ: ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪ

ಮಂಡ್ಯದಲ್ಲಿ ಹನುಮಧ್ವಜ ತೆರವು
Published 30 ಜನವರಿ 2024, 4:54 IST
Last Updated 30 ಜನವರಿ 2024, 4:54 IST
ಅಕ್ಷರ ಗಾತ್ರ

ಹಾವೇರಿ: ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮಧ್ವಜವನ್ನು ತೆರವು ಮಾಡಿರುವ ಕಾಂಗ್ರೆಸ್‌ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ಒಂದು ಕೋಮಿನ ತುಷ್ಠೀಕರಣಕ್ಕೆ ಏನು ಬೇಕಾದರೂ ಮಾಡಲು ಮುಂದಾಗುತ್ತಿದೆ. ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅನುಮತಿಯೊಂದಿಗೆ ಹನುಮ ಧ್ವಜವನ್ನು ಹಾರಿಸಲಾಗಿತ್ತು. ಸರ್ಕಾರ, ಸ್ಥಳೀಯ ಶಾಸಕರ ಪ್ರಚೋದನೆಯಿಂದ ಪೊಲೀಸರೇ ನಿಂತು ಅದನ್ನು ಇಳಿಸಿದ್ದಾರೆ. ರಾಜ್ಯ ಸರ್ಕಾರವು ನಿರಂತರವಾಗಿ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ದಬ್ಬಾಳಿಕೆ ನಡೆಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ನಾವು ಅಧಿಕಾರಕ್ಕೆ ಬಂದರೆ ಭಜರಂಗದಳ ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಈಗ ಹನುಮಧ್ವಜಕ್ಕೆ ಕೈಹಾಕಿದ್ದು, ನಿಷೇಧದ ಮೊದಲ ಹೆಜ್ಜೆಯಾಗಿದೆ. ಮಂಡ್ಯದ ಹನುಮಪ್ಪನಿಗೆ ಕೈಹಚ್ಚಿದ್ದಾರೆ ಎಂದರೆ ಇಂಡಿಯಾ ಹನುಮಪ್ಪನಿಗೇ ಕೈಹಾಕಿದಂತೆ. ಒಂದು ಕೋಮನ್ನು ತುಷ್ಠೀಕರಣ ಮಾಡಲು ಕಾಂಗ್ರೆಸ್‌ ಯಾವ ಮಟ್ಟಕ್ಕೆ ಇಳಿದಿದೆ ಎನ್ನಲು ಇದು ಉದಾಹರಣೆ’ ಎಂದು ಕಿಡಿಕಾರಿದರು. 

ಉಗ್ರ ಹೋರಾಟದ ಎಚ್ಚರಿಕೆ:

‘ಅಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದರೆ ಪೊಲೀಸರಿಗೆ ಸಿದ್ದರಾಮಯ್ಯ ಮೆಡಲ್‌ ಕೊಡುತ್ತಿದ್ದರು. ಶೋಷಿತರು, ಹಿಂದುಳಿದವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಭೋದಿಸುತ್ತಾರೆ. ಇದು ಅವರ ಸಂಸ್ಕೃತಿಯನ್ನು ತಿಳಿಸುತ್ತದೆ. ನಡವಳಿಕೆ ಬದಲಾವಣೆ ಬದಲಿಸಿಕೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. 

ಬಿಜೆಪಿ ಜಿಲ್ಲಾ ಘಟದ ಅಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಮಂಡ್ಯದಲ್ಲಿ ಹನುಮಧ್ವಜ ತೆರವುಗೊಳಿಸಿರುವ ಸರ್ಕಾರದ ಕ್ರಮ ಖಂಡನೀಯ. ಹಿಂದೂಗಳು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ದೇಶ ಪಾಕಿಸ್ತಾನವಾಗುತ್ತದೆ. ಸರ್ಕಾರದ ದುರಾಡಳಿತದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಹಿಂದೂಗಳ ಭಾವನೆ ಕೆರಳಿಸುವ ಕೆಲಸ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಕೆ.ಶಿವಲಿಂಗಪ್ಪ, ಮಂಜುನಾಥ ಮಡಿವಾಳರ, ನರಹರಿ ಕಟ್ಟಿ, ನಿರಂಜನ ಹೇರೂರ, ನಂಜುಂಡೇಶ್ ಕಳ್ಳೇರ, ಶಶಿಧರ ಹೊಸಳ್ಳಿ, ಸುರೇಶ ಹೊಸಮನಿ, ರುದ್ರೇಶ ಚಿನ್ನಣ್ಣನವರ, ಭಾರತಿ ಜಂಬಗಿ, ಲಲಿತಾ ಗುಂಡೇನಹಳ್ಳಿ ಇದ್ದರು.

ಮಂಡ್ಯದಲ್ಲಿ ಹನುಮಧ್ವಜ ಇಳಿಸಿದ್ದಕ್ಕೆ ಸರ್ಕಾರ ಕ್ಷಮೆ ಕೇಳಬೇಕು. ಲಂಕೆಯನ್ನು ಹನುಮಂತ ಸುಟ್ಟ ರೀತಿಯಲ್ಲಿ ಈ ಘಟನೆಯು ದೇಶದಲ್ಲಿ ಕಾಂಗ್ರೆಸ್‌ ಅನ್ನು ದೂಳೀಪಟ ಮಾಡಲಿದೆ
- ಬಿ.ಸಿ.ಪಾಟೀಲ ಮಾಜಿ ಸಚಿವ
ಸಿಎಂ ಸಿದ್ದರಾಮಯ್ಯ ತುಘಲಕ್ ದರ್ಬಾರ್‌ ನಡೆಸುತ್ತಿದ್ದಾರೆ. ಅವರು ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿಯಾಗಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ
-ವಿರುಪಾಕ್ಷಪ್ಪ ಬಳ್ಳಾರಿ ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT