ಶನಿವಾರ, ಮೇ 15, 2021
25 °C
ಬ್ಯಾಡಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಶಿಕ್ಷಣಕ್ಕೆ ಒತ್ತು

ಗ್ರಾಮೀಣ ವಿದ್ಯಾರ್ಥಿಗಳ ದಾರಿದೀಪ

ಪ್ರಮೀಳಾ ಹುನಗುಂದ Updated:

ಅಕ್ಷರ ಗಾತ್ರ : | |

Prajavani

ಬ್ಯಾಡಗಿ: ಖಾಸಗಿ ಕಾಲೇಜುಗಳಿಗೆ ದುಬಾರಿ ಶುಲ್ಕ ನೀಡಲು ಸಾಧ್ಯವಾಗದೆ ವ್ಯಾಸಂಗದಿಂದ ವಂಚಿತರಾಗುವ ಬಡ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. 

ಈ ಕಾಲೇಜು 2007ರಲ್ಲಿ ಆರಂಭಗೊಂಡಿತು. ಕಟ್ಟಡ ಕೊರತೆಯಿಂದ ಎಸ್.‌ಜೆ.ಜೆ.ಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೊದಲು ಶುಭಾರಂಭ ಮಾಡಿತು. ಈಗ ಕಾಲೇಜು ಸ್ವಂತ ಭವ್ಯ ಕಟ್ಟಡ ಹೊಂದಿದೆ. ಗ್ರಂಥಾಲಯ ಹಾಗೂ ಕಂಪ್ಯೂಟರ್ ಲ್ಯಾಬ್‌ ಸೌಲಭ್ಯವಿದ್ದು, ಗಣಕಯಂತ್ರದ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

ಒಟ್ಟು 378 ವಿದ್ಯಾರ್ಥಿಗಳು ಬಿ.ಎ ಹಾಗೂ ಬಿ.ಕಾಂ.ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರಾಚಾರ್ಯರಾದ ಪಿ.ಕೆ. ಬಿನ್ನಾಳ ಅವರ ನೇತೃತ್ವದಲ್ಲಿ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆ. 

ಈ ಕಾಲೇಜು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸದಾ ಮುಂದಿದೆ. ಎನ್.‌ಎಸ್.‌ಎಸ್ ವಿಭಾಗದಲ್ಲಿ ಲಕ್ಷ್ಮೀ ಜಾದವ ಮತ್ತು ರಮೇಶ ದಾಮೋದರ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ, ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಪ್ರಾಚಾರ್ಯೆ ಪಿ.ಕೆ.ಬಿನ್ನಾಳ ಹೇಳಿದರು.

2021–22 ಸಾಲಿನ ನ್ಯಾಕ್ 2ನೇ ಹಂತದ ಪ್ರಕ್ರಿಯೆಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಕಾಲೇಜಿನಲ್ಲಿ ಉಚಿತವಾದ ವೆಬ್ ಗ್ರಂಥಾಲಯ ಸೇವೆಯನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳಿಗೆ ಬೇಕಾಗುವ ಮಾಹಿತಿಯನ್ನು ಮುದ್ರಿತ ರೂಪದಲ್ಲಿ ಹಾಗೂ ಆನ್‌ಲೈನ್ ಸಂಪನ್ಮೂಲಗಳ ಮುಖಾಂತರ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ.

‘ಪ್ರತ್ಯೇಕ ವಾಚನಾಲಯ ಹೊಂದಿದ್ದು, ಬಿಡುವಿನ ವೇಳೆಯಲ್ಲಿ ದಿನಪತ್ರಿಕೆ, ನಿಯತಕಾಲಿಕೆ ಹಾಗೂ ಉದ್ಯೋಗ ಮಾರ್ಗದರ್ಶನ, ಸಂದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿಯನ್ನು ಆನ್‌ಲೈನ್ ಮುಖಾಂತರ ನೀಡಲಾಗುತ್ತಿದೆ’ ಎಂದು ಸಹಾಯಕ ಗ್ರಂಥಪಾಲಕ ಡಾ.ಎನ್‌.ಎನ್ ಅರಬಗೊಂಡ ಹೇಳಿದರು.

ವಿದ್ಯಾರ್ಥಿಗಳ ಜ್ಞಾನ ವಿಕಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯುವ ರೆಡ್ ಕ್ರಾಸ್ ವತಿಯಿಂದ ವಿಶ್ವ ಅಂಧತ್ವ ನಿವಾರಣಾ ಕಾರ್ಯಕ್ರಮ, ಸ್ವಾಮಿ ವಿವೇಕಾನಂದರ ಸಪ್ತಾಹದ ಅಂಗವಾಗಿ ಆಶುಭಾಷಣ ಸ್ವರ್ಧೆಯನ್ನು ಏರ್ಪಡಿಸಿ ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವಲ್ಲಿ ನಿರತವಾಗಿದೆ.

ನೇತ್ರದಾನ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಫೈಯರ್ ಕ್ಯಾಂಪ್ ಏರ್ಪಡಿಸಿ ಬೆಂಕಿಯನ್ನು ನಂದಿಸುವ ಕುರಿತು ಜಾಗೃತಿ ಮೂಡಿಸಲಾಗಿದೆ.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾವೇರಿ ವತಿಯಿಂದ ಪ್ರೇರಣಾ ತರಬೇತಿ ಶಿಬಿರದಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್‌, ವಾಲಿಬಾಲ್ ಪಂದ್ಯಾವಳಿಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಉನ್ನತ ವ್ಯಾಸಗ ಮತ್ತು ಉದ್ಯೋಗವಕಾಶಗಳ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿ ಕೌಶಲಾಭಿವೃದ್ದಿ, ಉದ್ಯಮಶೀಲತೆ ಕುರಿತು ಒಂದು ದಿನದ ಯುವ ಕೌಶಲ ತರಬೇತಿ ಏರ್ಪಡಿಸಿ ತರಬೇತಿಯನ್ನು ನೀಡಲಾಗಿದೆ ಎಂದು ಡಾ.ಎನ್‌.ಎನ್ ಅರಬಗೊಂಡ ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.