ಭಾನುವಾರ, ಜುಲೈ 25, 2021
22 °C
ಕೋಡ ಗ್ರಾಮದ ಚಂದ್ರಗೌಡ ಕೋವಿಡ್‌ಗೆ ಬಲಿ

ಹಿರೇಕೆರೂರ: ತಂದೆ ಕಳೆದುಕೊಂಡು ತಬ್ಬಲಿಯಾದ ಮಕ್ಕಳು, ತವರು ಮನೆ ಸೇರಿದ ಮಡದಿ

ಕೆ.ಎಚ್.ನಾಯಕ Updated:

ಅಕ್ಷರ ಗಾತ್ರ : | |

Prajavani

ಹಿರೇಕೆರೂರ: ಬೆಂಗಳೂರಿನಲ್ಲಿ ಆಟೊ ಓಡಿಸುತ್ತಿದ್ದ ಪತಿ ಚಂದ್ರಗೌಡ ಅವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಸ್ವಗ್ರಾಮ ಕೋಡದಲ್ಲಿ ರಸ್ತೆ ವಿಸ್ತರಣೆಗೆ ಮನೆ ಹಾನಿಯಾಗಿದೆ. ಇಬ್ಬರು ಹೆಣ್ಣು ಮಕ್ಕಳು ತಂದೆ ಇಲ್ಲದೇ ತಬ್ಬಲಿಯಾಗಿವೆ. ನಿಲ್ಲಲು ನೆಲೆ ಇಲ್ಲದೇ ನಮ್ಮ ಬದುಕು ದುಸ್ತರವಾಗಿದೆ ಎಂದು ಪವಿತ್ರಾ ಕಣ್ಣೀರಿಟ್ಟರು. 

ತಾಲ್ಲೂಕಿನ ಕೋಡ ಗ್ರಾಮದಿಂದ ಬೆಂಗಳೂರಿಗೆ ಬಂದು ಆಟೊ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಗೌಡ ಹಂಚಿನಮನಿ ಮೇ 1ರಂದು ಕೋವಿಡ್‌ಗೆ ಬಲಿಯಾಗಿದ್ದಾರೆ. ಅವರ ಪತ್ನಿ ಪವಿತ್ರಾ ಅವರು ವಾಸಕ್ಕೆ ಮನೆ ಇಲ್ಲದೇ ಹರಿಹರ ತಾಲ್ಲೂಕು ಮೂಗಿನಗೊಂದಿ ಗ್ರಾಮದ ತವರು ಮನೆ ಸೇರಿದ್ದಾರೆ.

'ಸ್ವಗ್ರಾಮದಲ್ಲಿ ಮನೆ ನಿರ್ಮಿಸುವ ತಯಾರಿ ನಡೆಸಿದ್ದ ಪತಿ ಚಂದ್ರಗೌಡ ಅವರು ಬೆಂಗಳೂರಿನಲ್ಲಿ ಸಾಲ ಮಾಡಿ ಆಟೊ ಖರೀದಿಸಿ ಓಡಿಸುತ್ತಿದ್ದರು. ಕೋವಿಡ್‌ ಸೋಂಕು ದೃಢಪಟ್ಟ ಮೇಲೆ ಅವರನ್ನು 3 ದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4ನೇ ದಿನ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಆಟೊ ಖರೀದಿಸಿದ ಸಾಲಕ್ಕಾಗಿ ಫೈನಾನ್ಸ್‌ ಕಂಪನಿಯವರಿಗೆ ಆಟೊ ವಾಪಸ್‌ ಕೊಟ್ಟಿದ್ದೇವೆ. ಈಗ ಮನೆ ಇಲ್ಲ, ಕೆಲಸವಿಲ್ಲ, ಮುಂದಿನ ದಾರಿ ಕಾಣದಂತಾಗಿದೆʼ ಎಂದು ಪವಿತ್ರಾ ಕಣ್ಣೀರಿಟ್ಟರು.

9 ವರ್ಷದ ದಾಂಪತ್ಯದಲ್ಲಿ ನಿತ್ಯ ಕಷ್ಟಪಟ್ಟು ದುಡಿದು ಮನೆ ನಿರ್ವಹಣೆ ಮಾಡುತ್ತಿದ್ದರು. ಮನೆ ನಿರ್ಮಿಸುವ ಕನಸು ಕಂಡಿದ್ದರು. ಅದು ನನಸಾಗಲೇ ಇಲ್ಲ, 4 ವರ್ಷದ ಮಗಳು ಮೋಹಿತಾ ಹಾಗೂ 7 ತಿಂಗಳ ಹಸುಗೂಸು ಕೀರ್ತನಾ ಜತೆಗೆ ತವರುಮನೆ ಸೇರಿದ್ದೇನೆ. ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಇನ್ನೂ ಮಂಜೂರಾಗಿಲ್ಲ ಎಂದು ತಿಳಿಸಿದರು.

‘ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡ ಮಗಳ ಜೀವನ ಕಷ್ಟದಲ್ಲಿದೆ. ಇಬ್ಬರು ಸಣ್ಣ ಮಕ್ಕಳನ್ನು ಸಾಕಬೇಕಿದೆ. ಸರ್ಕಾರ ಯಾವುದಾದರೂ ಕೆಲಸ ನೀಡಿ ನೆರವಿಗೆ ಬರಬೇಕು’ ಎಂದು ಪವಿತ್ರಾ ಅವರ ತಂದೆ ಬಸವರಾಜಪ್ಪ ಅಂಗಡಿ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು