ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ, ಸಕ್ಕರೆ ವ್ಯಾಪಾರಿಗಳಿಗೂ ಸೋಂಕು

ಜಿಲ್ಲೆಯಲ್ಲಿ 43ಕ್ಕೇರಿದ ಕೋವಿಡ್‌ ಪ್ರಕರಣಗಳು: ಆತಂಕ ಹುಟ್ಟಿಸುವ ಪ್ರವಾಸ ಹಿನ್ನೆಲೆ
Last Updated 23 ಜೂನ್ 2020, 14:53 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ರಾಣೆಬೆನ್ನೂರಿನ ಬಟ್ಟೆ ವ್ಯಾಪಾರಿ ಹಾಗೂ ಪಿಗ್ಮಿ ಏಜೆಂಟ್‌ ಆದ ಶಿಗ್ಗಾವಿಯ ಸಕ್ಕರೆ ವ್ಯಾಪಾರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ಈ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 43 ವ್ಯಕ್ತಿಗಳಿಗೆ ಸೋಂಕು ತಗಲಿದ್ದು, ಈ ಪೈಕಿ 24 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 19 ಪ್ರಕರಣಗಳು ಸಕ್ರಿಯವಾಗಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ತಿಳಿಸಿದ್ದಾರೆ.

ಪಿ-9411 ಹಾಗೂ ಪಿ-9412 ಇಬ್ಬರಿಗೆ ಮಂಗಳವಾರ ಪಾಸಿಟಿವ್ ಬಂದಿದೆ. ಬ್ಯಾಡಗಿಯ ಪೊಲೀಸ್ ಕಾನ್‍ಸ್ಟೆಬಲ್‌ (ಪಿ-7030) ಇಂದು ಆಸ್ಪತ್ರೆಯಿಂದ ಗುಣಮುಖನಾಗಿ ಬಿಡುಗಡೆ ಹೊಂದಿದ್ದಾರೆ.

ಪ್ರವಾಸ ಹಿನ್ನೆಲೆ

ರಾಣೆಬೆನ್ನೂರಿನ 38 ವರ್ಷದ ಬಟ್ಟೆ ವ್ಯಾಪಾರಿ ಪಿ-9411 ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಈತನ ತಂದೆ-ತಾಯಿ ಹಾಗೂ ಪತ್ನಿಯೊಂದಿಗೆ ಮಾರುತಿನಗರದ ಕಾಳಿಕಾದೇವಿ ದೇವಸ್ಥಾನದ ಮುಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ ಬಟ್ಟೆ ಖರೀದಿಗೆ ಜೂನ್ 9ರಂದು ಕಾರಿನಲ್ಲಿ ಬೆಂಗಳೂರಿನ ಚಿಕ್ಕಪೇಟೆ ಹೋಲ್‍ಸೇಲ್ ಬಟ್ಟೆ ಅಂಗಡಿಗೆ ಭೇಟಿ ನೀಡಿ ಜೂನ್ 11ರಂದು ಮರಳಿ ರಾಣೆಬೆನ್ನೂರಿಗೆ ಬಂದಿರುತ್ತಾರೆ.

ಪುನಃ ಜೂನ್ 17ರಂದು ಬಟ್ಟೆ ಖರೀದಿಗೆ ದಾವಣಗೆರೆ ಹೋಗಿ ಬಂದಿರುತ್ತಾನೆ. ಜೂನ್ 20ರಂದು ಜ್ವರ, ಕೆಮ್ಮು, ನೆಗಡಿ ಕಾರಣ ಪುನಃ ಆಸ್ಪತ್ರೆಗೆ ತೆರಳಿದಾಗ ವೈದ್ಯರು ಈತನ ಗಂಟಲು ದ್ರವವನ್ನು ಸ್ವಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್ 22ರಂದು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಈತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ಪಿಗ್ಮಿ ಏಜೆಂಟ್‌

ಪಿಗ್ಮಿ ಸಂಗ್ರಹಿಸುತ್ತಿದ್ದ ಶಿಗ್ಗಾವಿ ಪಟ್ಟಣದ 37 ವರ್ಷದ ಪುರುಷ ಪಿ-9412 ಈತನು ತಂದೆ-ತಾಯಿಯೊಂದಿಗೆ ಶಿಗ್ಗಾವಿ ಪಟ್ಟಣದ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದನು. ಪಿಗ್ಮಿಯಿಂದ ಸಂಗ್ರಹವಾದ ಹಣವನ್ನು ಶಿಗ್ಗಾವಿಯ ಕಿತ್ತೂರ ರಾಣಿ ಚೆನ್ನಮ್ಮ ಕೋ ಆಪರೇಟಿವ್ ಸೊಸೈಟಿಗೆ ಜಮಾ ಮಾಡುತ್ತಿದ್ದನು. ಅಲ್ಲದೆ ಈತ ಸಗಟು ಅಂಗಡಿಗಳಿಗೆ ಸಕ್ಕರೆ ಸರಬರಾಜು ಮಾಡುವ ವೃತ್ತಿಯಲ್ಲಿ ತೊಡಗಿದ್ದಾನೆ.

ಈತ ಸೋಂಕಿತ ಪಿ-8292 ವ್ಯಕ್ತಿಯ ಅಣ್ಣನ ಮಗನಾಗಿರುತ್ತಾನೆ. ಈತನ ಮನೆಯ ಒಂದು ಕಿ.ಮೀ.ದೂರದಲ್ಲಿ ವಾಸವಾಗಿರುತ್ತಾನೆ. ಸೋಂಕಿತ ಪಿ-9412 ಜೂನ್ 17ರಂದು ಬಂಕಾಪುರ ಪಟ್ಟಣದ ಸುಮಾರು 11 ಹೋಲ್‍ಸೇಲ್ ಅಂಗಡಿಗಳಿಗೆ ಸಕ್ಕರೆ ಸರಬರಾಜು ಮಾಡಿ ಬಂದಿರುತ್ತಾನೆ. ಜೂನ್ 20 ರಂದು ಈತನ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಲಾಗಿದ್ದು, ಜೂನ್ 22 ರಂದು ಪಾಸಿಟಿವ್ ಎಂದು ಲ್ಯಾಬ್ ವರದಿ ಬಂದಿರುತ್ತದೆ.

ರಾಣೇಬೆನ್ನೂರು ನಗರದ ಮಾರುತಿ ನಗರದ ಕಾಳಿಕಾದೇವಿ ದೇವಸ್ಥಾನ ಹಾಗೂ ಶಿಗ್ಗಾವಿಯ ಜಯನಗರ ರಸ್ತೆ ಪ್ರದೇಶಗಳನ್ನೊಳಗೊಂಡ 100 ಪ್ರದೇಶವನ್ನು ಕಂಟೈನ್ಮೆಂಟ್‌ ವಲಯವಾಗಿ ಪರಿವರ್ತಿಸಲಾಗಿದೆ. ಸುತ್ತಲಿನ 200 ಮೀ.ಪ್ರದೇಶವನ್ನು ‘ಬಫರ್ ಜೋನ್’ ಆಗಿ ಪರಿವರ್ತಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಮಾರುತಿ ನಗರಕ್ಕೆ ಹಾವೇರಿ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಜಯನಗರಕ್ಕೆ ಸವಣೂರ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT