ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕೋವಿಡ್‌, ಮಳೆ ಮಾಹಿತಿ ಪಡೆದ ಸಿಎಂ ಬಿ.ಎಸ್. ಯಡಿಯೂರಪ್ಪ

ಜಿಲ್ಲಾ ವಿ.ಆರ್.ಡಿ.ಎಲ್. ಲ್ಯಾಬ್‍ನಲ್ಲಿ ನಿತ್ಯ 140 ಮಾದರಿಗಳ ಪರೀಕ್ಷೆ: ಜಿಲ್ಲಾಧಿಕಾರಿ
Last Updated 13 ಜುಲೈ 2020, 15:31 IST
ಅಕ್ಷರ ಗಾತ್ರ

ಹಾವೇರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾಡಳಿತದೊಂದಿಗೆ ಸೋಮವಾರ ‘ವಿಡಿಯೊ ಸಂವಾದ’ ನಡೆಸಿ ಕೋವಿಡ್ ವೈರಾಣು ನಿಯಂತ್ರಣ, ಮಳೆಯ ಪರಿಸ್ಥಿತಿ ಹಾಗೂ ಬಿತ್ತನೆ ವಿವರಗಳ ಮಾಹಿತಿಯನ್ನು ಪಡೆದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಜಿಲ್ಲೆಯ ಕೋವಿಡ್ ನಿಯಂತ್ರಣ ಕ್ರಮಗಳು, ತಾಲ್ಲೂಕುವಾರು ಕೋವಿಡ್ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಂಡಿರುವ ಹಾಸಿಗೆಗಳ ವಿವರ, ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿ.ಆರ್.ಡಿ.ಎಲ್.)ದಲ್ಲಿ ಪ್ರತಿದಿನ ಕೋವಿಡ್ ಶಂಕಿತರ ಗಂಟಲು ಮಾದರಿ ಪರೀಕ್ಷಾ ವಿವರ ಹಾಗೂ ಜಿಲ್ಲೆಯ ಮಳೆ-ಬೆಳೆಯ ಪರಿಸ್ಥಿತಿಯನ್ನು ಮುಖ್ಯಮಂತ್ರಿಗೆ ವಿವರಿಸಿದರು.

ಜಿಲ್ಲೆಯಲ್ಲಿ ಈವರೆಗೆ 308 ಖಚಿತ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 170 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 131 ಪ್ರಕರಣಗಳು ಸಕ್ರಿಯವಾಗಿವೆ. 126 ಕಂಟೈನ್‌ಮೆಂಟ್‌ ಜೋನ್‍ಗಳಾಗಿ ಈವರೆಗೆ ಘೋಷಿಸಲಾಗಿದೆ. ಈ ಪೈಕಿ 17 ಜೋನ್‍ಗಳನ್ನು ಡಿನೋಟಿಫೈ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚುವರಿ ಬೆಡ್ ವ್ಯವಸ್ಥೆ, ಐಸೋಲೇಷನ್ ವ್ಯವಸ್ಥೆ, ಸಂಟ್ರೆಲೈಸ್ ಪ್ರೆಸರೈಸ್‌ ವೆಂಟಿಲೇಟರ್ ವ್ಯವಸ್ಥೆ ಹಾಗೂ ಇದೇ ಮಾದರಿಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್‌ ತೆರೆಯಲಾಗಿದೆ. ಜಿಲ್ಲಾ ವಿ.ಆರ್.ಡಿ.ಎಲ್. ಲ್ಯಾಬ್‍ನಲ್ಲಿ ಪ್ರತಿದಿನ 130 ರಿಂದ 140 ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತದೆ. ದಿನಕ್ಕೆ 300 ಮಾದರಿಗಳನ್ನು ಪರೀಕ್ಷೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಮಳೆಯ ವಿವರ, ಬಿತ್ತನೆ ವಿವರ, ರಸಗೊಬ್ಬರ ಮಾಹಿತಿ, ಬೆಳೆಯ ಸ್ಥಿತಿಗತಿಗಳ ಕುರಿತಂತೆ ಮಾಹಿತಿ ನೀಡಿ, ಪ್ರಸ್ತುತ 170 ಮಿ.ಮೀ. ಮಳೆಯಾಗಿದೆ. ಶೇ 96ರಷ್ಟು ಮುಂಗಾರು ಬಿತ್ತನೆಯಾಗಿದೆ ಎಂದು ವಿವರಿಸಿದರು.

ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು, ಜಿಲ್ಲಾ ಆಸ್ಪತ್ರೆಯ ವಿ.ಆರ್.ಡಿ.ಎಲ್ ಲ್ಯಾಬ್‍ನಲ್ಲಿ ಕಾರ್ಯನಿರ್ವಹಣೆ ಉಸ್ತುವಾರಿಗೆ ಧಾರವಾಡ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿಸ್ಟ್ ಸೇವೆಯನ್ನು ಪಡೆಯಲು ಕ್ರಮವಹಿಸಬೇಕು. ಈಗಾಗಲೇ ವಿಶ್ವವಿದ್ಯಾಲಯದ ಕುಲಸಚಿವರೊಂದಿಗೆ ಚರ್ಚಿಸಲಾಗಿದೆ. ಈ ಕುರಿತಂತೆ ಕ್ರಮವಹಿಸಲು ಸಲಹೆ ನೀಡಿದರು.

ಯೂರಿಯಾ ಸಮರ್ಪಕವಾಗಿ ವಿತರಿಸಿ

ರ‍್ಯಾಪಿಡ್‌ ಆಂಟಿಜನ್ ಟೆಸ್ಟ್ ನಡೆಸಲು ಆದ್ಯತೆ ನೀಡಬೇಕು. ತುರ್ತು ಪ್ರಕರಣಗಳಲ್ಲಿ ವಿವೇಚನೆಯಿಂದ ಪರೀಕ್ಷೆ ನಡೆಸಲು ಸಲಹೆ ನೀಡಿದರು. ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ಬಗ್ಗೆ ದೂರುಗಳು ಬಂದಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸಮರ್ಪಕವಾಗಿ ವಿತರಣೆ ಕ್ರಮವಹಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT