ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಹರಡುವ ಬಿಜೆಪಿಗೆ ಪಾಠ ಕಲಿಸಿ

ನಮ್ಮ ಪ್ರಣಾಳಿಕೆ ಈಡೇರಿಕೆಗೆ ಬದ್ಧ: ಹಾನಗಲ್‌ ಶಾಸಕ ಶ್ರೀನಿವಾಸ ಮಾನೆ ಹೇಳಿಕೆ
Published 27 ಏಪ್ರಿಲ್ 2024, 15:23 IST
Last Updated 27 ಏಪ್ರಿಲ್ 2024, 15:23 IST
ಅಕ್ಷರ ಗಾತ್ರ

ಹಾವೇರಿ: ‘ಕಾಂಗ್ರೆಸ್‍ನ ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಸುಳ್ಳು ಆರೋಪಗಳ ಮೂಲಕ ಜನರ ದಾರಿ ತಪ್ಪಿಸುತ್ತಿದ್ದು, ಈ ಬಗ್ಗೆ ಕಿವಿಗೊಡಬೇಡಿ. ನಮ್ಮ ಪ್ರಣಾಳಿಕೆ ಈಡೇರಿಸುವುದು ಶತಸಿದ್ಧ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿಗೆ ತಕ್ಕಪಾಠ ಕಲಿಸಿ’ ಎಂದು ಹಾನಗಲ್‌ ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಚುನಾವಣೆ ಸ್ವಾತಂತ್ರ್ಯ ಸಂಗ್ರಾಮ ಹೋರಾಟಕ್ಕಿಂತ ಕಡಿಮೆ ಏನಿಲ್ಲ. ಜಗಜ್ಯೋತಿ ಬಸವೇಶ್ವರರು, ಸೂಫಿ ಸಂತರು, ಭಗವದ್ಗೀತೆ, ಕುರಾನ್, ಬೈಬಲ್ ಮಹಾಗ್ರಂಥಗಳ ಮೂಲ ಆಶಯಗಳನ್ನು ಉಳಿಸುವ ಸಲುವಾಗಿ ಈ ಬಾರಿ ಕಾಂಗ್ರೆಸ್ ಬೆಂಬಲಿಸುವುದು ಅಗತ್ಯವಿದೆ’ ಎಂದರು.

‘ಬಿಜೆಪಿ ಜಾತಿ, ಧರ್ಮದ ಭಾವನೆಯನ್ನು ಕೆರಳಿಸಿ, ತಪ್ಪು ದಾರಿಗೆ ಎಳೆಯುವ ಮೂಲಕ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ‘ಅಚ್ಚೇ ದಿನ್ ಆಯೇಗಾ’ ಅಂತ ಹೇಳಿದರು. ರೈತರ ಆದಾಯ ದ್ವಿಗುಣ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುವ ಭರವಸೆ ನೀಡಿದ್ದರು. ಇದನ್ನು ನಂಬಿದ ಜನರು ಮತ ಹಾಕಿ ಬಹುಮತ ನೀಡಿದರು. ಹೀಗೆ ಬಿಜೆಪಿಯವರು ಪ್ರತಿಸಲ ಭಾವನಾತ್ಮಕ ವಿಷಯಗಳಿಂದ ಚುನಾವಣೆ ಎದುರಿಸುತ್ತಿದ್ದಾರೆ’ ಎಂದು ಜರಿದರು. 

‘2018ರಲ್ಲಿ ಪುಲ್ವಾಮಾ ಘಟನೆಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡರು. ದೇಶ ರಕ್ಷಣೆಯಲ್ಲಿ ಮೋದಿಯೇ ಶ್ರೇಷ್ಠ ಅಂತ ನಂಬಿಕೆ ಹುಟ್ಟಿಸಿದರು. 300 ಕೆ.ಜಿ. ಆರ್‌.ಡಿ.ಎಕ್ಸ್‌ ದೇಶಕ್ಕೆ ಬಂದಿದ್ದು ಭದ್ರತಾ ವೈಫಲ್ಯವಲ್ಲವೇ? ಸೈನಿಕರ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡಲಿಲ್ಲ. ಈ ಬಾರಿ ಅಂತಹ ಘಟನೆಯ ವಿಷಯ ಸಿಕ್ಕಿಲ್ಲ. ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಮೋದಿ ಹಗುರ ಹೇಳಿಕೆ ನೀಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ನೇಹಾ ಹತ್ಯೆ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಕಳೆದ 20 ವರ್ಷದಿಂದ ಬಿಜೆಪಿ ಸಂಸದರ ಆಡಳಿತದಿಂದ ಕ್ಷೇತ್ರ ಹಿಂದಕ್ಕೆ ಹೋಗಿದೆ. ಗಡ್ಡದೇವರಮಠ ಈ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ. ಉತ್ಸಾಹಿ ಯುವಕರಿದ್ದು, ಕೇಂದ್ರದ ಅನುದಾನ ತಂದು ಅಭಿವೃದ್ಧಿ ಮಾಡುತ್ತಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಒಂದು ಅವಕಾಶ ಮಾಡಿಕೊಡಿ. ಅವರು ಮಾದರಿ ಕ್ಷೇತ್ರ ಮಾಡುವ ಭರವಸೆ ಇದೆ’ ಎಂದರು. 

ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದರು.

‘ಭ್ರಷ್ಟಾಚಾರ ಆರೋಪ:

ಬಿಜೆಪಿ ಮೌನ’ ‘ಶೇ 40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್ ಆರೋಪ ಮಾಡಿದ ಮೇಲೆ ಜನರು ವಿಧಾನಸಭಾ ಚುನಾವಣೆಯಲ್ಲಿ ತೀರ್ಪು ನೀಡಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆದರು. ನಾವು ಯಾರಿಂದಲೂ ಹಣ ಪಡೆದಿಲ್ಲ ಎಂಬುದನ್ನು ಬಿಜೆಪಿಯವರು ಹೇಳದೇ ಮೌನವಾಗಿದ್ದಾರೆ ಅಂದರೆ ತಪ್ಪು ಒಪ್ಪಿಕೊಂಡಿದ್ದಾರೆ ಅಂತ ಅರ್ಥ. ಬಿಜೆಪಿಯವರು ಕಳೆದ ವರ್ಷ ಎಸ್ಸಿ– ಎಸ್ಟಿಗೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಯಾವುದಕ್ಕೆ ಬಳಕೆ ಮಾಡಿದ್ದಾರೆ ಎಂಬ ಬಗ್ಗೆ ಮೊದಲು ಉತ್ತರಿಸಲಿ’ ಎಂದು ಮಾನೆ ಹೇಳಿದರು. ‘22 ತಿಂಗಳು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಏನು ಅಭಿವೃದ್ಧಿ ಮಾಡಿದ್ದಾರೆ ಕೋವಿಡ್‍ನಲ್ಲಿ ಆಮ್ಲಜನಕ ಕೊರತೆಯಿಂದ ಎಷ್ಟು ಜನ ಮೃತಪಟ್ಟರು. ಅಧಿಕಾರ ಖಜಾನೆ ಕೀಲಿ ಕೈ ಕೈಯಲ್ಲಿದ್ದಾಗ ಜಿಲ್ಲೆಗೆ ರಾಜ್ಯಕ್ಕೆ ಬೊಮ್ಮಾಯಿ ಕೊಡುಗೆ ಏನು’ ಎಂದು ಮಾನೆ ಪ್ರಶ್ನಿಸಿದರು. ‘ರಾಜ್ಯಕ್ಕೆ 18 ಸಾವಿರ ಕೋಟಿ ಬರ ಪರಿಹಾರ ನೀಡಿಲ್ಲ. 15ನೇ ಹಣಕಾಸು ಯೋಜನೆಯ ಅನುದಾನ ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರವನ್ನು ಏಕೆ ಕೇಳಲಿಲ್ಲ’ ಎಂದರು.

ಮೇ 3ರಂದು ಸಿಎಂ ಸಮಾವೇಶ

‘ರಾಣೆಬೆನ್ನೂರು ನಗರದ ಉರ್ದು ಮೈದಾನದಲ್ಲಿ ಮೇ 3ರಂದು ಸಂಜೆ 5.30ಕ್ಕೆ ಆಯೋಜಿಸಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಏ.28ರಂದು ಬಂಕಾಪುರದಲ್ಲಿ ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ಅವರು ರೋಡ್ ಶೋ ನಡೆಸಲಿದ್ದಾರೆ. ಏ.29ರಂದು ಹಾವೇರಿಯ ಶಿವಶಕ್ತಿ ಪ್ಯಾಲೇಸ್‍ನಲ್ಲಿ ಸತೀಶ ಜಾರಕಿಹೊಳಿ ಅವರ ಕಾರ್ಯಕ್ರಮ ನಡೆಯಲಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT