ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ದರ ಶತಕ; ಬದುಕು ನರಕ: ಕಾಂಗ್ರೆಸ್‌

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾವೇರಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಪ್ರತಿಭಟನೆ
Last Updated 11 ಜೂನ್ 2021, 12:22 IST
ಅಕ್ಷರ ಗಾತ್ರ

ಹಾವೇರಿ: ಪೆಟ್ರೋಲ್‌, ಡೀಸೆಲ್‌ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ಜಾಗಟೆ ಬಾರಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ನಗರದ ಮಾಗಾವಿ ಪೆಟ್ರೋಲ್‌ ಬಂಕ್‌ ಮುಂಭಾಗ ‘100 ನಾಟ್‌ಔಟ್‌’ ಘೋಷಣೆಯಡಿ ಪ್ರತಿಭಟನೆ ನಡೆಸಿದರು. ಸರ್ಕಾರ ಜನವಿರೋಧಿ ನೀತಿ ಮತ್ತು ದುರಾಡಳಿತದ ಮೂಲಕ ಸಾಮಾನ್ಯ ಜನರು ಬೀದಿಪಾಲಾಗುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ‘2014ರ ಪೂರ್ವದಲ್ಲಿ ಪೆಟ್ರೋಲ್‌ ಲೀಟರ್‌ಗೆ ₹63 ಮತ್ತು ಡೀಸೆಲ್‌ ಲೀಟರ್‌ಗೆ ₹56 ಇತ್ತು. ಇಂದು ಪೆಟ್ರೋಲ್‌ ಬೆಲೆ ನೂರರ ಗಡಿ ದಾಟಿದೆ. ಡೀಸೆಲ್‌ ಬೆಲೆ ₹92 ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ₹105ರಿಂದ ₹75ಕ್ಕೆ ಇಳಿಕೆಯಾಗಿದ್ದರೂ, ಇಂಧನ ದರವನ್ನು ಏರಿಕೆ ಮಾಡುವ ಮೂಲಕ ಬಿಜೆಪಿ ಸರ್ಕಾರ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ’ ಎಂದು ಆರೋಪಿಸಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ನರೇಂದ್ರ ಮೋದಿ ಅವರು ಭರವಸೆ ನೀಡಿದ ‘ಅಚ್ಛೇ ದಿನ್‌’ ಬರಲೇ ಇಲ್ಲ, ರೈತರ ಆದಾಯ ದ್ವಿಗುಣವಾಗಲಿಲ್ಲ, ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿಲ್ಲ’ ಎಂದು ಟೀಕಿಸಿದರು.

ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ‘ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಸ್ವಲ್ಪ ಬೆಲೆ ಏರಿಕೆಯಾದರೂ ಬಿಜೆಪಿ ಮುಖಂಡರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಈಗ ಅವರದೇ ಸರ್ಕಾರ ನಿತ್ಯ ಬೆಲೆ ಏರಿಕೆ ಮಾಡುತ್ತಿದೆ. ಜನಸಾಮಾನ್ಯರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ’ ಎಂದು ಕಿಡಿಕಾರಿದರು.

ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ನಂತರ 19 ಬಾರಿ ಇಂಧನ ಬೆಲೆ ಹೆಚ್ಚಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವ ಭರವಸೆಯೂ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿದರು.ಪ್ರತಿಭಟನೆಯಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಡಾ.ಪ್ರಕಾಶಗೌಡ ಪಾಟೀಲ, ಕೆಪಿಸಿಸಿ ಎಸ್‌.ಟಿ ಘಟಕದ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಡಾ.ಆರ್.ಎಂ. ಕುಬೇರಪ್ಪ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ.ಸಂಜಯ ಡಾಂಗೆ ಸೇರಿದಂತೆ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT