ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ದುರ್ಬಳಕೆ ಖಂಡಿಸಿ ಪ್ರತಿಭಟನೆ: ಪ್ರತಿಭಟನಾಕಾರರ ಬಂಧನ, ಬಿಡುಗಡೆ

ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ:
Last Updated 17 ಜೂನ್ 2022, 14:20 IST
ಅಕ್ಷರ ಗಾತ್ರ

ಹಾವೇರಿ: ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ಇ.ಡಿ) ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಜಾಥಾ ನಡೆಸಿದರು.

ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಎಂ.ಜಿ ರಸ್ತೆ ಮಾರ್ಗವಾಗಿ ಗಾಂಧಿ ವೃತ್ತದ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡಿತು. ಈ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇ.ಡಿ ದುರ್ಬಳಕೆ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.ಕೇಂದ್ರ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ಬ್ರಿಟಿಷರನ್ನು ದೇಶದಿಂದ ಹೊರಗಟ್ಟಿದ ಕಾಂಗ್ರೆಸ್ ಇದಕ್ಕೆಲ್ಲ ಹೆದರುವುದಿಲ್ಲ. ಕಾಂಗ್ರೆಸ್ ಅನ್ನು ನೇರವಾಗಿ ಎದುರಿಸಲು ಬಿಜೆಪಿ ಹಿಂಜರಿಯುತ್ತಿದೆ. ಆದ್ದರಿಂದ ಇ.ಡಿ, ಐ.ಟಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ಕಾರ್ಯಕರ್ತರು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗಿದರು. 40 ವರ್ಸೆಂಟ್ ಬಿಜೆಪಿ ಸರ್ಕಾರ ತೊಲಗಬೇಕು, ಕೋಮುಗಲಭೆ ಸೃಷ್ಟಿಸುವ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ಘೋಷಣೆ ಕೂಗಿದರು.

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕಾಂಗ್ರೆಸ್‌ ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ಸಾಲುಗಟ್ಟಿ ವಾಹನಗಳು ನಿಂತಿದ್ದವು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕಾಂಗ್ರೆಸ್‌ ಮುಖಂಡರನ್ನು ವಶಕ್ಕೆ ಪಡೆದು ಪೊಲೀಸ್‌ ವಾಹನದ ಮೂಲಕ ಕರೆದೊಯ್ದರು.

‘ಬಿಜೆಪಿ ಕುತಂತ್ರಕ್ಕೆ ಮಣಿಯುವುದಿಲ್ಲ’
ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಅಚ್ಛೇ ದಿನ್ ಬರಲಿದೆ ಎಂದು ಹೇಳಿದ್ದ ಪ್ರಧಾನಿ ಮೋದಿ ದೇಶದ ಜನರಿಗೆ ನಿರಾಸೆ ಮೂಡಿಸಿದ್ದಾರೆ. 8 ವರ್ಷ ಆಡಳಿತ ನಡೆಸಿರುವ ಮೋದಿ ಬೆಲೆ ಏರಿಕೆ ಮಾಡಿರುವುದೇ ಅವರ ಸಾಧನೆಯಾಗಿದೆ. ಬಿಜೆಪಿ ಸರ್ಕಾರದ ಕುತಂತ್ರಕ್ಕೆ ಕಾಂಗ್ರೆಸ್ ಬಗ್ಗುವುದಿಲ್ಲ. ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ತಪ್ಪನ್ನೂ ಮಾಡಿಲ್ಲ. ಆದರೂ ವಿನಾಕಾರಣ ಕಿರುಕುಳ ನೀಡಲು ಅವರನ್ನು ಐಡಿ ವಿಚಾರಣೆ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಕೋಮುದ್ವೇಷ, ಪ್ರತಿಪಕ್ಷಗಳ ನಾಯಕರ ತೇಜೋವಧೆ ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ಅಜ್ಜಂಪೀರ ಖಾದ್ರಿ, ಬಿ.ಎಚ್.ಬನ್ನಿಕೋಡ, ಸೋಮಣ್ಣ ಬೇವಿನಮರದ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಡಾ.ಆರ್.ಎಂ. ಕುಬೇರಪ್ಪ, ಐ.ಯು.ಪಠಾಣ, ಕೊಟ್ರೇಶಪ್ಪ ಬಸೇಗಣ್ಣಿ ಎಸ್.ಆರ್.ಪಾಟೀಲ, ಷಣ್ಮುಖ ಶಿವಳ್ಳಿ, ಪ್ರಕಾಶಗೌಡ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT