ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 126 ಗ್ರಾಮಗಳಲ್ಲಿ ಸಂಪೂರ್ಣ ಲಸಿಕಾಕರಣ

ಜಿಲ್ಲೆಯಲ್ಲಿ ಕೋವಿಡ್‌ ಮೊದಲ ಡೋಸ್ ಶೇ 85, ಎರಡನೇ ಡೋಸ್‌ ಶೇ 37ರಷ್ಟು ಸಾಧನೆ
Last Updated 11 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ಕೋವಿಡ್‌ ಲಸಿಕಾಕಾರಣ ಪ್ರಗತಿಯ ಹಾದಿಯಲ್ಲಿದ್ದು, ಜಿಲ್ಲೆಯ 126 ಗ್ರಾಮಗಳಲ್ಲಿ ಸಂಪೂರ್ಣ ಲಸಿಕಾಕರಣದ ಸಾಧನೆಯಾಗಿದೆ.

ಎಂಟು ತಾಲ್ಲೂಕುಗಳ 126 ಗ್ರಾಮಗಳಲ್ಲಿ ಒಟ್ಟು 1,77,791 ಜನಸಂಖ್ಯೆಯಿದೆ. ಈ ಪೈಕಿ 1,23,112 ಮಂದಿ18 ವರ್ಷ ಮೇಲ್ಪಟ್ಟವರಾಗಿದ್ದು, ಈ ಎಲ್ಲರೂ ಕೋವಿಡ್‌ ಮೊದಲ ಡೋಸ್‌ ಅನ್ನು ಪಡೆದುಕೊಂಡಿದ್ದಾರೆ. ಎರಡನೇ ಡೋಸ್‌ ಲಸಿಕಾಕರಣ ಪ್ರಗತಿಯಲ್ಲಿದೆ.

ಸವಣೂರು ತಾಲ್ಲೂಕಿನ ಕಳಸೂರು, ಕಡಕೋಳ, ಹತ್ತಿಮತ್ತೂರು; ಬ್ಯಾಡಗಿ ತಾಲ್ಲೂಕಿನ ಗುಡ್ಡದಮಲ್ಲಾಪುರ, ತಿಮ್ಮಾಪುರ, ತುಮರಿಕೊಪ್ಪ; ಹಾನಗಲ್‌ ತಾಲ್ಲೂಕಿನ ಇನಾಂಯಲ್ಲಾಪುರ, ಕೊಂಡಜ್ಜಿ, ಮತ್ತಿಹಳ್ಳಿ, ನೆಲ್ಲಿಕೊಪ್ಪ; ಹಾವೇರಿ ತಾಲ್ಲೂಕಿನ ಕೆಸರಳ್ಳಿ, ಚನ್ನೂರು, ಗಳಗನಾಥ, ನಾಗನೂರು; ಹಿರೇಕೆರೂರು ತಾಲ್ಲೂಕಿನ ನೇಸ್ವಿ, ಆಲದಗೇರಿ, ಬತ್ತಿಕೊಪ್ಪ; ರಾಣೆಬೆನ್ನೂರು ತಾಲ್ಲೂಕಿನ ಯರೇಹೊಸಳ್ಳಿ, ಬೇವಿನಹಳ್ಳಿ, ಹನುಮನಮಟ್ಟಿ; ಶಿಗ್ಗಾವಿ ತಾಲ್ಲೂಕಿನ ಮಡ್ಲಿ, ಗಂಗಿಬಾವಿ, ನಾರಾಯಣಪುರ ಸೇರಿದಂತೆ ಒಟ್ಟು 126 ಗ್ರಾಮಗಳಲ್ಲಿ ಲಸಿಕಾಕರಣ ಸಂಪೂರ್ಣ ಯಶಸ್ವಿಯಾಗಿದೆ.

ರಾಜ್ಯದಲ್ಲೇ ಮೊದಲನೇ ಸ್ಥಾನ:ಜಿಲ್ಲೆಯಲ್ಲಿ 22,201 ಕೋವಿಡ್‌ ಪ್ರಕರಣಗಳು ದಾಖಲಾಗಿ, 21,551 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಒಟ್ಟು 650 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಮೊದಲನೇ ಅಲೆಯಲ್ಲಿ ಕೋವಿಡ್‌ ಸಾವುಗಳ ಸಂಖ್ಯೆ ಕಡಿಮೆ ಇತ್ತು. ಆದರೆ, ಎರಡನೇ ಅಲೆಯಲ್ಲಿ ಕೋವಿಡ್‌ ಸಾವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿತು. ಶೇಕಡಾವಾರು ಸಾವುಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಮೊದಲನೇ ಸ್ಥಾನ ಹಾವೇರಿ ಜಿಲ್ಲೆಗಿದೆ. ಒಟ್ಟಾರೆ ಶೇಕಡಾವಾರು ಸಾವಿನ ಪ್ರಮಾಣ 2.93 ಇದೆ.

ಶೂನ್ಯ ಪ್ರಕರಣಗಳು:ಎರಡನೇ ಅಲೆಯಲ್ಲಿ ಕೋವಿಡ್‌ ಪ್ರಕರಣ ಮತ್ತು ಸಾವುಗಳು ಜನರನ್ನು ಕಂಗೆಡಿಸಿದ್ದವು.ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 500ರವರೆಗೂ ಕೋವಿಡ್‌ ಪ್ರಕರಣಗಳ ಸಂಖ್ಯೆ ದಾಖಲಾಗಿತ್ತು. ಪ್ರಸ್ತುತ ಕೋವಿಡ್‌ ಸಕ್ರಿಯ ಪ್ರಕರಣಗಳು ಶೂನ್ಯ. ಎರಡು ತಿಂಗಳಿಂದ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿವೆ. ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್‌ ಸಂಪೂರ್ಣ ನಿಯಂತ್ರಣದಲ್ಲಿದೆ.

2ನೇ ಲಸಿಕೆಗೆ ನಿರುತ್ಸಾಹ:ಜಿಲ್ಲೆಯಲ್ಲಿ 10,03,368 ಮಂದಿ ಮೊದಲ ಡೋಸ್‌ ಹಾಗೂ 4,34,176 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಕೊರೊನಾ ಸೋಂಕು ಬಹುತೇಕ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎರಡನೇ ಡೋಸ್‌ ಪಡೆಯಲು ಜನರು ನಿರುತ್ಸಾಹ ತೋರುತ್ತಿದ್ದಾರೆ. 84 ದಿನಗಳನ್ನು ಕಳೆದರೂ ಎರಡನೇ ಡೋಸ್‌ ಪಡೆಯಲು ಲಸಿಕಾ ಕೇಂದ್ರಗಳತ್ತ ಜನರು ಸುಳಿಯುತ್ತಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

ಲಸಿಕಾ ಮೇಳಗಳು:‘ರಾಜ್ಯ ಸರ್ಕಾರದ ಸೂಚನೆ ಪ್ರಕಾರ ವಾರದಲ್ಲಿ ಒಂದು ದಿನ ‘ಲಸಿಕಾ ಮೇಳ’ವನ್ನು ಆಯೋಜಿಸಬೇಕು. ಆದರೆ, ಹಾವೇರಿಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮತ್ತು ಸಿಇಒ ಮೊಹಮ್ಮದ್‌ ರೋಶನ್‌ ಅವರ ನಿರ್ದೇಶನದ ಮೇರೆಗೆ ವಾರಕ್ಕೆ ಮೂರು ಲಸಿಕಾ ಮೇಳವನ್ನು ಏರ್ಪಡಿಸುತ್ತಿದ್ದೇವೆ. ಒಂದು ಮೇಳದಲ್ಲಿ ಸರಾಸರಿ 15 ಸಾವಿರ ಮಂದಿಗೆ ಲಸಿಕೆ ಹಾಕುತ್ತಿದ್ದೇವೆ. ಕಳೆದ 30 ದಿನಗಳಲ್ಲಿ ಎರಡನೇ ಡೋಸ್‌ ಪಡೆಯುವವರ ಸಂಖ್ಯೆಯೇ ಜಾಸ್ತಿ ಕಂಡು ಬಂದಿದೆ’ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಜಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

***

ಜಿಲ್ಲೆಯಲ್ಲಿ 1.87 ಲಕ್ಷ ಕೋವಿಡ್‌ ಡೋಸ್‌ಗಳು ಲಭ್ಯವಿದ್ದು, ಲಸಿಕೆ ಹಾಕಿಸಿಕೊಳ್ಳಲು ಜನರು ಸ್ವ–ಇಚ್ಛೆಯಿಂದ ಮುಂದೆ ಬರಬೇಕು
–ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ಸಂಪೂರ್ಣ ಲಸಿಕಾಕರಣ ಸಾಧಿಸಿದ ಗ್ರಾಮಗಳ ವಿವರ

ತಾಲ್ಲೂಕು ಗ್ರಾಮಗಳ ಸಂಖ್ಯೆ
ಸವಣೂರು 40
ಹಾನಗಲ್‌ 25
ಹಾವೇರಿ 21
ಶಿಗ್ಗಾವಿ 16
ಹಿರೇಕೆರೂರು 14
ಬ್ಯಾಡಗಿ 05
ರಾಣೆಬೆನ್ನೂರು 05
ಒಟ್ಟು 126

ಕೋವಿಡ್‌ ಲಸಿಕೆಯ ವಿವರ
13,53,030:ಜಿಲ್ಲೆಗೆ ಪೂರೈಕೆಯಾದ ಕೋವಿಶೀಲ್ಡ್‌
1,76,400:ಜಿಲ್ಲೆಗೆ ಪೂರೈಕೆಯಾದ ಕೋವ್ಯಾಕ್ಸಿನ್‌
15,29,430:ಜಿಲ್ಲೆಗೆ ಪೂರೈಕೆಯಾದ ಒಟ್ಟು ಡೋಸ್‌
13,41,190:ಇದುವರೆಗೆ ಬಳಕೆಯಾದ ಡೋಸ್‌
1,88,240:ಉಳಿಕೆಯಾಗಿರುವ ಡೋಸ್‌

ಕೋವಿಡ್‌ ಲಸಿಕಾಕರಣದ ಶೇಕಡಾವಾರು ವಿವರ

ತಾಲ್ಲೂಕು 1ನೇ ಡೋಸ್‌ 2ನೇ ಡೋಸ್‌
ಬ್ಯಾಡಗಿ ಶೇ 96.55 ಶೇ 37.88
ಹಾನಗಲ್‌ ಶೇ 80.98 ಶೇ 28.60
ಹಾವೇರಿ ಶೇ 84.58 ಶೇ 38.87
ಹಿರೇಕೆರೂರು ಶೇ 88.48 ಶೇ 32.16
ರಾಣೆಬೆನ್ನೂರು ಶೇ 79.81 ಶೇ 35.82
ಸವಣೂರು ಶೇ 88.97 ಶೇ 45.15
ಶಿಗ್ಗಾವಿ ಶೇ 86.03 ಶೇ 45.13
ಒಟ್ಟು ಶೇ 85.10 ಶೇ 36.83

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT