ಭಾನುವಾರ, ಜೂನ್ 26, 2022
28 °C
ಮಾಸ್ಕ್‌, ಸ್ಯಾನಿಟೈಸರ್‌, ಫೇಸ್‌ಶೀಲ್ಡ್‌ ನೀಡುವಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮನವಿ

ಹಾವೇರಿ: ಜೀವ ಲೆಕ್ಕಿಸದೆ ಕೋವಿಡ್‌ ಕರ್ತವ್ಯ ನಿರ್ವಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೋವಿಡ್‌ ಎರಡನೇ ಅಲೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಇಂಥ ತುರ್ತು ಪರಿಸ್ಥಿತಿಯ ನಡುವೆ ತಮ್ಮ ಜೀವವನ್ನು ಪಣಕ್ಕಿಟ್ಟು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜನರ ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯಲ್ಲಿ 1,470 ಆಶಾ ಕಾರ್ಯಕರ್ತೆಯರು ಹಾಗೂ 1,918 ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ. ಇವರಲ್ಲಿ ಬಹುತೇಕರು ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದ್ದಾರೆ. ಸೇವಾ ಭದ್ರತೆ, ಕನಿಷ್ಠ ವೇತನ ಸೇರಿದಂತೆ ಮತ್ತಿತರ ಮೂಲಸೌಕರ್ಯಗಳ ಕೊರತೆಯ ನಡುವೆಯೂ ಹತ್ತಾರು ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ‘ದುಡಿಮೆಯೇ ದೇವರು’ ಎಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

ಮನೆ–ಮನೆ ಸಮೀಕ್ಷೆ: ನಗರ ಮತ್ತು ಪಟ್ಟಣಗಳಿಗಿಂತ ಹಳ್ಳಿಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಈ ವೇಳೆಯಲ್ಲಿ ಗ್ರಾಮೀಣ ಪ್ರದೇಶದ ಮನೆ–ಮನೆಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದಾರೆ. ಕೋವಿಡ್‌ ಮುಂಚೂಣಿ ಯೋಧರಾಗಿರುವ ಆಶಾ ಕಾರ್ಯಕರ್ತೆಯರಿಗೆ ಸಮರ್ಪಕವಾಗಿ ಮತ್ತು ಅಗತ್ಯವಿದ್ದಷ್ಟು ಮಾಸ್ಕ್‌, ಸ್ಯಾನಿಟೈಸರ್‌, ಫೇಸ್‌ಶೀಲ್ಡ್‌ ದೊರಕಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಅಂಗನವಾಡಿಗಳು ಬಾಗಿಲು ಮುಚ್ಚಿದ್ದರೂ ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತರಾಗಬಾರದು ಎಂದು ಮನೆ–ಮನೆಗಳಿಗೆ ಹೋಗಿ ಆಹಾರ ತಲುಪಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಮಟ್ಟದ ‘ಕೋವಿಡ್‌ ಕಾರ್ಯಪಡೆ’ ಸದಸ್ಯರಾಗಿ ಆರೋಗ್ಯ ಕಾರ್ಯಕರ್ತರೊಂದಿಗೆ ಶ್ರಮಿಸುತ್ತಿದ್ದಾರೆ. 

ಲಸಿಕೆ ದೊರೆತಿಲ್ಲ: ಜಿಲ್ಲೆಯಲ್ಲಿ ನಿಗದಿತ ಗುರಿಗೆ ಶೇ 41ರಷ್ಟು ಮಾತ್ರ ಕೋವಿಡ್‌ ಲಸಿಕಾಕರಣ ನಡೆದಿದೆ. ಕೋವಿಡ್‌ ಲಸಿಕೆಯ ಕೊರತೆಯಿಂದ ಆಮೆಗತಿಯಲ್ಲಿ ಲಸಿಕಾಕರಣ ಸಾಗುತ್ತಿದೆ. ಕೋವಿಡ್‌ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಿಬ್ಬಂದಿಗಳಲ್ಲಿ ಎಷ್ಟೋ ಮಂದಿಗೆ ಲಸಿಕೆ ದೊರೆತಿಲ್ಲ. ಗ್ರಾಮಸ್ಥರ ಅಸಹಕಾರ, ಬೈಗುಳ... ಹೀಗೆ ಕೊರತೆ ಮತ್ತು ಕಷ್ಟಗಳ ನಡುವೆಯೂ ಪ್ರಾಮಾಣಿಕವಾಗಿ ಕೊರೊನಾ ಸೋಂಕು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. 

‘ಬೆಳಿಗ್ಗೆ 9.30ರಿಂದ ಸಂಜೆ 4ರವರೆಗೂ ಅಂಗನವಾಡಿ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಬೇಕು. ಇದರ ಜೊತೆಗೆ ಬೆಳಿಗ್ಗೆ 7 ಗಂಟೆಗೆ ಆಶಾ ಕಾರ್ಯಕರ್ತೆಯರೊಂದಿಗೆ ಮನೆ–ಮನೆ ಸಮೀಕ್ಷೆಗೆ ಹೋಗಬೇಕು. ತೀವ್ರ ಕಾರ್ಯದೊತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 29 ಕಾರ್ಯಕರ್ತೆಯರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದುವರೆಗೂ ಸರ್ಕಾರ ನೀಡುವ ₹30 ಲಕ್ಷ ಪರಿಹಾರ ಸಿಕ್ಕಿಲ್ಲ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್‌ ಉಪಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ತಿಳಿಸಿದರು. 

ಗೌರವಧನ ಬಂದಿಲ್ಲ

ಬ್ಯಾಡಗಿ: ತಾಲ್ಲೂಕಿನಲ್ಲಿ 162 ಅಂಗನವಾಡಿ, 128 ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಏಪ್ರಿಲ್ ತಿಂಗಳ ಗೌರವ ಧನ ಸಿಗಬೇಕಾಗಿದೆ.

‘ಮನೆ– ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕಾಗಿದ್ದು, ಸೋಂಕು ಹರಡುವ ಭೀತಿ ಕಾಡುತ್ತಿದೆ. ಕೆಲವರು ಸೋಂಕಿತರಾಗಿ ಗುಣಮುಖರಾಗಿದ್ದಾರೆ. ಈಗ ಮಾಸ್ಕ್‌, ಸ್ಯಾನಿಟೈಸರ್ ಇಲಾಖೆ ನೀಡಿದೆ. ಮೊದಲು ಸ್ವಂತ ಖರ್ಚಿನಲ್ಲಿಯೇ ಅವುಗಳನ್ನು ಕೊಳ್ಳಬೇಕಾಗಿತ್ತು’ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಹೇಮಾವತಿ ಎಲಿ ಹೇಳಿದರು.

ಜೀವಭಯದಲ್ಲಿ ಕೆಲಸ ನಿರ್ವಹಣೆ

ಸವಣೂರ: 120ಕ್ಕೂ ಹೆಚ್ಚು ಆಶಾ ಹಾಗೂ 205 ಅಂಗನವಾಡಿ ಕಾರ್ಯಕರ್ತೆಯರು ನಿರಂತರವಾಗಿ ಕೋವಿಡ್ ಮಧ್ಯೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಆರೋಗ್ಯವನ್ನು ಕಾಯ್ದುಕೊಳ್ಳಲು ಮೂಲಸೌಲಭ್ಯವನ್ನು ಆರೋಗ್ಯ ಇಲಾಖೆ ಪೂರೈಸದೆ ಇರುವುದರಿಂದ ಜೀವ ಭಯದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕೆಲಸವನ್ನು ಮಾಡುತ್ತಿದ್ದಾರೆ.

ಹಗಲಿರುಳು ಕರ್ತವ್ಯ ನಿರ್ವಹಣೆ

ರಟ್ಟೀಹಳ್ಳಿ: ಕೋವಿಡ್ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯ್ತಿ ಸಿಬ್ಬಂದಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ಎರಡು ತಿಂಗಳಿಂದ ಸಂಬಳವಾಗಿಲ್ಲ. ನಮ್ಮ ವೈಯಕ್ತಿಕ ರಕ್ಷಣೆಗೆ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್‌ ಅವಶ್ಯವಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಲಸಿಕೆ ನೀಡಲಾಗಿದೆ ಎಂದು ರಟ್ಟೀಹಳ್ಳಿ ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಗದಗಿನ ತಿಳಿಸಿದರು.

ಕೋವಿಡ್‌ ಕೆಲಸಕ್ಕೆ ಲಿಖಿತ ಆದೇಶ ಇಲ್ಲ

ಹಿರೇಕೆರೂರ: ಕೋವಿಡ್‌ ಹಿನ್ನೆಲೆಯಲ್ಲಿ ಮನೆ–ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಹಾಗೂ ಮಾಹಿತಿ ಕಲೆ ಹಾಕುವ ಕಾರ್ಯವನ್ನು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಆದರೆ ತಮ್ಮ ಕೆಲಸಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂಬುದು ಬಹುತೇಕ ಕಾರ್ಯಕರ್ತೆಯರ ಅಳಲು.

ಮನೆ–ಮನೆಗೆ ಭೇಟಿ ನೀಡಿ ಕೋವಿಡ್‌ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ನಮಗೆ ಮೌಖಿಕವಾಗಿ ಹೇಳುತ್ತಾರೆ. ಆದರೆ ಈ ಬಗ್ಗೆ ಒಂದೇ ಒಂದು ಲಿಖಿತ ಆದೇಶ ನೀಡಿಲ್ಲ. ಸುರಕ್ಷತೆಗಾಗಿ ಮಾಸ್ಕ್‌, ಸ್ಯಾನಿಟೈಸರ್‌ ಕೊಟ್ಟಿಲ್ಲ, ಕೋವಿಡ್‌ ಸಂದರ್ಭದಲ್ಲಿ ಮನೆ–ಮನೆಗೆ ಭೇಟಿ ನೀಡಿದ ನಮಗೆ ಏನಾದರೂ ತೊಂದರೆಯಾದರೆ ನಮ್ಮ ಕುಟುಂಬದ ಗತಿ ಏನು? ಎಂದು ಎತ್ತಿನಹಳ್ಳಿ (ಎಂ.ಕೆ) ಅಂಗನವಾಡಿ ಕಾರ್ಯಕರ್ತೆ ಕುಸುಮಾ ಪಾಟೀಲ ಪ್ರಶ್ನಿಸುತ್ತಾರೆ.

ಪ್ರೋತ್ಸಾಹಧನಕ್ಕೆ ಮನವಿ

ರಾಣೆಬೆನ್ನೂರು: ತಾಲ್ಲೂಕಿನಲ್ಲಿ ಒಟ್ಟು 239 ಆಶಾ ಕಾರ್ಯಕರ್ತೆಯರು ಹಾಗೂ 373 ಅಂಗನವಾಡಿ ಕಾರ್ಯಕರ್ತೆಯರು ಮನೆ– ಮನೆಗೆ ತೆರಳಿ ಕೋವಿಡ್‌ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

‘ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್‌, ಕೈಗವುಸು ನೀಡಲಾಗಿದೆ. ಆಶಾ ಕಾರ್ಯಕರ್ತೆಯರು ಕೋವಿಡ್‌ ಕೆಲಸ ಮಾಡುವುದಕ್ಕೆ ಹೆಚ್ಚಿನ ಪ್ರೋತ್ಸಾಹ ಧನ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ’ ಎನ್ನುತ್ತಾರೆ ತಹಶೀಲ್ದಾರ್‌ ಶಂಕರ್‌. ಜಿ.ಎಸ್‌.

ಬಿಸಿಲು ಲೆಕ್ಕಿಸದೇ ಸಣ್ಣ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಆಶಾ ಕಾರ್ಯಕರ್ತೆ ಲತಾ ಬ್ಯಾಡಗಿ, ಅಂಗನವಾಡಿ ಕಾರ್ಯಕರ್ತೆಯರಾದ ಶಾರದಾ ಮತ್ತು ಗೀತಾ ತಿಳಿಸಿದರು.

ಪರೀಕ್ಷೆ–ಲಸಿಕೆಯ ಕರ್ತವ್ಯ

ಶಿಗ್ಗಾವಿ: ಕೋವಿಡ್ ಪರೀಕ್ಷೆ ಮತ್ತು ಲಸಿಕಾಕರಣ ಕಾರ್ಯದಲ್ಲಿ ಸಾರ್ವಜನಿಕರು ಹಾಗೂ ಆರೋಗ್ಯ ಇಲಾಖೆ ನಡುವಿನ ಕೊಂಡಿಯಾಗಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಕೆಲಸ ಮಾಡುವ ಜತೆಗೆ ಮಕ್ಕಳಿಗೆ, ಗರ್ಭಿಣಿಯರಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಎರಡು ತಿಂಗಳಿಂದ ವೇತನ ನೀಡಿಲ್ಲ. ಮೂರು ತಿಂಗಳಿಂದ ಮೊಟ್ಟೆಗೆ ಹಣ ಬಿಡುಗಡೆ ಮಾಡಿಲ್ಲ. ಸ್ವಂತ ಹಣ ನೀಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮೊಟ್ಟೆ ನೀಡಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆ ನಾಗಮ್ಮ ಹೇಳಿದರು.

ಸ್ವಂತ ಹಣದಲ್ಲಿ ಪರಿಕರ ಖರೀದಿ!

ಹಾನಗಲ್‌: ಕೋವಿಡ್ ಸಂಬಂಧಿತ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ತಾಲ್ಲೂಕಿನ ಆಶಾ, ಅಂಗನವಾಡಿ ಕಾರ್ಯಕರ್ತೆಯರು 2ನೇ ಅಲೆ ಸಮಯದಲ್ಲಿ ಜಾಗರೂಕರಾದ ಪರಿಣಾಮ ಇವರಿಗೆ ಸೋಂಕು ಬಾಧೆ ಮೊದಲ ಅಲೆಯಷ್ಟು ತಟ್ಟಿಲ್ಲ. ತಾಲ್ಲೂಕಿನಲ್ಲಿ 319 ಜನ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಕಾಡಶೆಟ್ಟಿಹಳ್ಳಿಯಲ್ಲಿ ಒಬ್ಬ ಕಾರ್ಯಕರ್ತೆ ಈಚೆಗೆ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ತಾಲ್ಲೂಕಿನಲ್ಲಿ ಆಶಾ ಕಾರ್ಯಕರ್ತೆಯರು ಕಳೆದ ವರ್ಷ ಕೊರೊನಾ ಸೋಂಕಿಗೆ ಹೆಚ್ಚು ಒಳಗಾಗಿದ್ದರು. ಹೀಗಾಗಿ ಈ ಬಾರಿ ಮುಂಚಿತವಾಗಿ ಅವರಿಗೆ ಸಂಘದಿಂದ ಸೂಚನೆ ನೀಡಲಾಗಿತ್ತು. ಸ್ವಂತ ಹಣದಲ್ಲಿ ಸ್ಯಾನಿಟೈಸರ್‌, ಮಾಸ್ಕ್‌ ಖರೀದಿಸಿ ಸೇವೆಯಲ್ಲಿ ತೊಡಗಿಕೊಂಡಿದ್ದೆವು ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶೀಲಾ ಬಂಕಾಪೂರಮಠ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು