ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಖಾರದ ಪುಡಿ ಎರಚಿ ಹಣ ದರೋಡೆ: ಆರೋಪಿಗಳ ಬಂಧನ, ₹1.22 ಲಕ್ಷ ನಗದು ವಶ

Last Updated 30 ಜುಲೈ 2021, 15:05 IST
ಅಕ್ಷರ ಗಾತ್ರ

ಹಾವೇರಿ: ಫೈನಾನ್ಸ್‌ ಹಣ ಸಂಗ್ರಹಿಸಿಕೊಂಡು, ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರನ್ನು ತಡೆದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ ₹1.28 ಲಕ್ಷವನ್ನು ಬುಧವಾರ ರಟ್ಟೀಹಳ್ಳಿ ತಾಲ್ಲೂಕು ಅಂಗರಗಟ್ಟಿ ಬಳಿ ದೋಚಿಕೊಂಡು ಹೋಗಿದ್ದರು. ಘಟನೆ ನಡೆದ ಎರಡು ದಿನಗಳಲ್ಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಚಂದನಕುಮಾರ ಯಲ್ಲಣ್ಣನವರ, ಕೇಶವ ಯಲ್ಲಣ್ಣನವರ ಹಾಗೂ ಅರುಣಕುಮಾರ ಬಂಧಿತ ಆರೋಪಿಗಳು. ಆರೋಪಿಗಳಿಂದ ಬೈಕ್‌, ₹1.22 ಲಕ್ಷ ನಗದು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

‘ಹೊನ್ನಾಳಿ ದುರ್ಗಿ ಗುಡಿಯ ಚಂದನ್‌ ಎಂಬುವರ ಸ್ನೇಹಿತ ಚಂದನ್‌ಕುಮಾರ್‌ (ಆರೋಪಿ) ಎಂಬುವರ ಜತೆ ಮೇದೂರ, ನಾಗವಂದ, ಅಂಗರಗಟ್ಟಿ ಗ್ರಾಮಗಳಲ್ಲಿ ಫೈನಾನ್ಸ್‌ ಹಣ ಸಂಗ್ರಹಿಸಿ, ಹಳ್ಯಾಳ ತಾಂಡಾದ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಹಣ ದರೋಡೆ ಮಾಡಿದ್ದರು. ಈ ಕೃತ್ಯದಲ್ಲಿ ಬೈಕ್‌ನಲ್ಲಿ ಕುಳಿತಿದ್ದ ಚಂದನಕುಮಾರನೇ ತನ್ನ ಸ್ನೇಹಿತರಿಗೆ ಹಣ ತರುತ್ತಿರುವ ವಿಷಯ ತಿಳಿಸಿ ಪೂರ್ವನಿಯೋಜಿತ ಸಂಚು ರೂಪಿಸಿದ್ದ’ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಣೆಬೆನ್ನೂರು ಡಿವೈಎಸ್ಪಿ ಟಿ.ವಿ. ಸುರೇಶ ಅವರು, ಹಿರೇಕೆರೂರು ಸಿಪಿಐ ಆರ್‌.ಆರ್‌.ಪಾಟೀಲ, ಪಿಎಸ್‌ಐ ಚಂದನಚಲುವಯ್ಯ, ಪ್ರೊಬೇಷನರಿ ಪಿಎಸ್‌ಐ ಸಂಪತ್‌ ಆನೆಕಿವಿ ಮತ್ತು ಅಪರಾಧ ದಳದ ತಂಡವನ್ನು ರಚಿಸಿ, ತನಿಖೆ ನಡೆಸಲು ನೇಮಿಸಿದ್ದರು. ಶುಕ್ರವಾರ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ದಾರಿಯಲ್ಲಿ ಅಡ್ಡಗಟ್ಟಿ ಹಣ ದೋಚುವ ಹಲವಾರು ಘಟನೆಗಳು ನಡೆದಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ತೀವ್ರ ತನಿಖೆ ನಡೆಸಿ, ಪ್ರಕರಣವನ್ನು ಸಂಪೂರ್ಣವಾಗಿ ಬೇಧಿಸುತ್ತೇವೆ ಎಂದು ಹೇಳಿದರು.

ವಿಶೇಷ ತಂಡದ ಬಗ್ಗೆ ಎಸ್ಪಿಯವರು ಮೆಚ್ಚುಗೆ ವ್ಯಕ್ತಪಡಿಸಿ, ನಗದು ಬಹುಮಾನ ಘೋಷಿಸಿದ್ದಾರೆ.

‘ಟ್ರಾಫಿಕ್‌ ಸಿಗ್ನಲ್‌ ಲೈಟ್‌’ ದುರಸ್ತಿಗೆ ಕ್ರಮ
ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಂಚಾರ ಸೂಚನಾ ದೀಪ (ಟ್ರಾಫಿಕ್‌ ಸಿಗ್ನಲ್‌ ಲೈಟ್‌) ಕೆಟ್ಟು ಹೋಗಿವೆ. ಈ ಬಗ್ಗೆ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದೇವೆ. ಖಾಸಗಿ ಏಜೆನ್ಸಿಗೆ ಕೊಟ್ಟ ವಾರ್ಷಿಕ ನಿರ್ವಹಣೆ ಅವಧಿ ಮುಗಿದಿದ್ದು, ಟೆಂಡರ್‌ ನವೀಕರಿಸಲು ಕೋರಿದ್ದೇವೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.

ನಗರದಲ್ಲಿರುವ 38 ಸಿಸಿಟಿವಿ ಕ್ಯಾಮೆರಾಗಳು ಹಾಳಾಗಿದ್ದು, ಇವುಗಳ ದುರಸ್ತಿ ಮಾಡಿಸಿಕೊಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆಯ್ದ ಸ್ಥಳಗಳಲ್ಲಿಹೆಚ್ಚುವರಿಯಾಗಿ 100 ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.

**
50ರಿಂದ 100 ಜನರು ವಾಸಿಸುವ ಕಡೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಅಪರಾಧ ತಡೆಗಟ್ಟಲು ಜನರು ಸಹಕರಿಸಬೇಕು.
– ಹನುಮಂತರಾಯ, ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT