ಗುರುವಾರ , ಸೆಪ್ಟೆಂಬರ್ 23, 2021
24 °C
ಗರಿಷ್ಠ 2 ಎಕರೆ ಮಿತಿ ಸಡಿಲಿಸಿ, ಪೂರ್ಣ ಪರಿಹಾರ ನೀಡಲು ಅನ್ನದಾತರ ಮನವಿ

ಹಾವೇರಿ: ಬೆಳೆ ಹಾನಿ, ಸಚಿವರಿಂದ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ರೈತರ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿದ ಸಚಿವ ಬಿ.ಸಿ. ಪಾಟೀಲ ಅವರು ಪರಿಶೀಲನೆ ನಡೆಸಿ, ರೈತರ ಅಹವಾಲು ಆಲಿಸಿದರು. 

ಬ್ಯಾಡಗಿ ಮತ ಕ್ಷೇತ್ರದ ವರದಾಹಳ್ಳಿ ಹಾಗೂ ಹಾವೇರಿ ತಾಲ್ಲೂಕಿನ ನಾಗನೂರ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರ, ಹೊಳೆಆಲೂರ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲನೆ ನಡೆಸಿದರು.

ವರದಾಹಳ್ಳಿಯಲ್ಲಿ ಮಳೆಗೆ ಕೊಚ್ಚಿಹೋದ ತರಕಾರಿ, ಸೋಯಾಬಿನ್, ಹತ್ತಿ ಬೆಳೆಗಳ ಪರಿಶೀಲನೆ ನಡೆಸಿದರು. ನಾಗನೂರ ಗ್ರಾಮದಲ್ಲಿ ಹಾಳಾದ ಶೇಂಗಾ, ಸೋಯಾಬಿನ್, ಕಬ್ಬು ಬೆಳೆಗಳನ್ನು ಪರಿಶೀಲನೆ ನಡೆಸಿದರು. ಮಾಕನೂರ ಮತ್ತು ಹೊಳೆಆನ್ವೇರಿ ಗ್ರಾಮಗಳಿಗೆ ಭೇಟಿ ನೀಡಿ, ತರಕಾರಿ ಬೆಳೆ, ಭತ್ತ ನಾಟಿ ಮಾಡುವ ಸ್ಥಳದಲ್ಲಿ ಮಣ್ಣು ತುಂಬಿಕೊಂಡಿರುವ ಜಮೀನುಗಳನ್ನು ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದರು.

ರೈತರ ಮನವಿ:

ಬೆಳೆ ಪರಿಹಾರ ನೀಡುವಲ್ಲಿ ಎರಡು ಎಕರೆ ಗರಿಷ್ಠ ಎಂಬ ಮಾನದಂಡವನ್ನು ಸಡಿಲಿಸಬೇಕು. ರೈತರ ಬೆಳೆ ಎಷ್ಟು ಎಕರೆಯಲ್ಲಿ ಹಾನಿಯಾಗಿದೆ ಅಷ್ಟು ಭೂಮಿಗೂ ಪರಿಹಾರ ಒದಗಿಸಬೇಕು. ಮಳೆಯಿಂದ ಬೆಳೆಯ ಮೇಲೆ ಮಣ್ಣು ತುಂಬಿಕೊಂಡು ಹಾನಿಯಾಗಿದೆ. ಕೆಲ ನದಿ, ಹಳ್ಳಗಳ ಪಕ್ಕದ ಜಮೀನಿನಲ್ಲಿ ಗುಂಟೆಗಟ್ಟಲೇ ಜಮೀನು ಕೊಚ್ಚಿಹೋಗಿದೆ. ಇದಕ್ಕೂ ಪರಿಹಾರ ನೀಡಬೇಕು. ಇಲ್ಲವಾದರೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಮನವಿ ಮಾಡಿಕೊಂಡರು.

ಸಚಿವರ ಭರವಸೆ:

ರೈತರ ಮನವಿಗೆ ಸ್ಪಂದಿಸಿದ ಸಚಿವ ಬಿ.ಸಿ. ಪಾಟೀಲ, ಪರಿಹಾರ ನೀಡುವ ಗರಿಷ್ಠ ಮಿತಿಯನ್ನು ಸಡಿಲಿಸಿ ಹಾನಿಯಾದ ಪ್ರದೇಶಕ್ಕೆ ಪರಿಹಾರ ನೀಡುವ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗಿದೆ ಹಾಗೂ ಪ್ರವಾಹದಿಂದ ಕೊಚ್ಚಿಹೋದ ಭೂಮಿ ಹಾಗೂ ಜಮೀನಿನಲ್ಲಿ ಉಸುಕು ತುಂಬಿದ ಜಮೀನಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಮೀಕ್ಷೆ ಕೈಗೊಂಡು ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಾಗನೂರ ಬೆಳೆಹಾನಿ ಪ್ರದೇಶದಲ್ಲಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಸ್ಥಳದಲ್ಲಿ ನಿಂತು ಮಾಹಿತಿ ನೀಡದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತಹಶೀಲ್ದಾರ್‌ ಮೇಲೆ ಸಿಡಿಮಿಡಿಗೊಂಡು ಆಡಳಿತ ವ್ಯವಸ್ಥೆ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ಹೆಲಿಪ್ಯಾಡ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿ’

ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿ ನಗರದಲ್ಲಿ ನೂತನ ಹೆಲಿಪ್ಯಾಡ್‌ ನಿರ್ಮಿಸಲು ಹಾಗೂ ಸುಸಜ್ಜಿತ ಜಿ+1 ಪ್ರವಾಸಿ ಮಂದಿರ ನಿರ್ಮಿಸಲು ಪ್ರಸ್ತಾವ ಸಲ್ಲಿಸಿ ಎಂದು ಸಚಿವ ಬಿ.ಸಿ.ಪಾಟೀಲ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. 

ನೆರೆ ಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡುವ ಬಗ್ಗೆ ನಮಗೆ ಮಾಹಿತಿಯನ್ನೇ ನೀಡಿಲ್ಲ ಎಂದು ರಾಣೆಬೆನ್ನೂರು ಶಾಸಕ ಅರುಣಕುಮಾರ್‌ ಪೂಜಾರ ಮತ್ತು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.