ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಮತದಾರರ ಪಾತ್ರ ಅನನ್ಯ

‘ಮತದಾನ’ವನ್ನು ಹಬ್ಬದ ರೀತಿ ಆಚರಿಸಿ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿಕೆ
Last Updated 25 ಜನವರಿ 2020, 19:41 IST
ಅಕ್ಷರ ಗಾತ್ರ

ಹಾವೇರಿ: ‘ವಿಶ್ವದ ಕೆಲವು ದೇಶಗಳಲ್ಲಿ ರಾಜರ ಆಳ್ವಿಕೆ ನಡೆಯುತ್ತಿವೆ. ಪ್ರಜಾಪ್ರಭುತ್ವದಲ್ಲಿ ಯುವ ಮತದಾರರ ಪಾತ್ರ ಬಹುಮುಖ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತದಾನವನ್ನು ಒಂದೊಂದು ದೇಶದಲ್ಲಿ ಒಂದೊಂದು ರೀತಿಯಲ್ಲಿ ಮಾಡಲಾಗುತ್ತದೆ. ಇನ್ನು ಕೆಲವು ಕಡೆ ವಂಶ ಪಾರಂಪರ್ಯವಾಗಿ ಅಧಿಕಾರವನ್ನು ಹಿಡಿಯುತ್ತಿದ್ದಾರೆ.ನಮ್ಮ ದೇಶದಲ್ಲಿ ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿದ್ದೇವೆ ಎಂದರು.

ಚುನಾವಣಾ ಆಯೋಗವೂ ಮತದಾರರ ಪ್ರತಿಜ್ಞಾ ವಿಧಿಯನ್ನು ಹೊರಡಿಸಿದ್ದು, ಅದರಲ್ಲಿ ಬರುವ ಪದಗಳು ಅರ್ಥಗರ್ಭಿತವಾಗಿವೆ. ಅದನ್ನು ಪ್ರತಿಜ್ಞೆಯಾಗಿ ಸೀಕರಿಸದೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಎ.ವಿ.ಪಾಟೀಲ ಮಾತನಾಡಿ, ಸಂವಿಧಾನ ಪ್ರಜೆಗಳಿಗೆ ಮತದಾನ ಹಕ್ಕನ್ನು ನೀಡಿದೆ. ಭವಿಷ್ಯದ ಪ್ರಜೆಗಳಾದ ಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಸುಭದ್ರ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ ಮಾತನಾಡಿ,ಮತದಾನದ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ 2011 ರಿಂದ ಮತದಾನ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಹೊಸ ಕ್ರಾಂತಿಗಳಾಗಲು ಯುವ ಮತದಾರರಿಂದ ಮಾತ್ರ ಸಾಧ್ಯ. ಸುಭದ್ರ ಸರ್ಕಾರ ನಿರ್ಮಾಣದ ದೃಷ್ಟಿಯಿಂದ ಯುವ ಮತದಾರರು ದಿಟ್ಟ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ಅವರು ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಮತದಾರರ ನೊಂದಣಿ ಪ್ರಕ್ರಿಯೆಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಬಿಎಲ್‌ಒ, ಇಎಲ್‌ಸಿಗಳನ್ನು ಸನ್ಮಾನಿಸಲಾಯಿತು.

ಮತದಾರ ದಿನಾಚರಣೆ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಕಾವ್ಯಾ ಹಾದಿಮನಿ, ವಿಜಯಲಕ್ಷ್ಮಿ, ತೇಜಸ್ವಿನಿ ಆರೇರ ಅವರು ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಇಂಗ್ಲಿಷ್‌ ಪ್ರಬಂಧದಲ್ಲಿ ದೀಪಾ ಬೆಳಲದವರ, ಎ.ಕೆ.ಧನ್ಯಾ ಹಾಗೂ ಅರ್ಬಿಯಾ ಪಠಾಣ ಬಹುಮಾನ ಪಡೆದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಅನನ್ಯ ಪಾಟೀಲ, ಪೂರ್ವಿಕಾ (ಪ್ರಥಮ), ಭರತಕುಮಾರ ಕರೆಮ್ಮನವರ, ಶಿವರಾಜ ಗಾಡಿ (ದ್ವಿತೀಯ) ಹಾಗೂ ರಾಘವೇಂದ್ರ, ಸಾಯಿಕುಮಾರ (ತೃತೀಯ) ಬಹುಮಾನ ಪಡೆದರು. ನಾಟಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ನ್ಯಾಯಾಧೀಶರಾದ ಕೆ.ಶ್ರೀವಿದ್ಯಾ, ವಕೀಲರ ಸಂಘದ ಕಾರ್ಯದರ್ಶಿ ಪಿ.ಎಂ.ಬೆನ್ನೂರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಸಿ. ಪೀರಜಾದೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಪೌರಾಯುಕ್ತ ಬಸವರಾಜ ಜಿದ್ದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT