ಗುರುವಾರ , ಸೆಪ್ಟೆಂಬರ್ 29, 2022
26 °C
ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಲು ಒತ್ತಾಯ

ಸೆ.21ರಂದು ಸಿಎಂ ಕಚೇರಿ ಎದುರು ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಲು ಒತ್ತಾಯಿಸಿ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿ ಎದುರು ಸೆ.21ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಬೆನ್ನೂರ ಹೇಳಿದರು. 

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಅವರು ಮಾತನಾಡಿ, ಎ.ಜೆ.ಸದಾಶಿವ ಆಯೋಗ ರಾಜ್ಯದ 101 ಪರಿಶಿಷ್ಟ ಜಾತಿ ಮನೆ–ಮನೆ ಕೌಟುಂಬಿಕ ಸಮೀಕ್ಷೆ ಕೈಗೊಂಡು 2012ರಲ್ಲಿ ವರದಿಯನ್ನು ನೀಡಿದೆ. ಸಮೀಕ್ಷೆಗಾಗಿ ಹಣಕಾಸಿನ ನೆರವು ನೀಡಿದ ಬಿಜೆಪಿ ಸರ್ಕಾರ ವರದಿಯನ್ನು ಸ್ವೀಕರಿಸಿ 10 ವರ್ಷಗಳಾಗಿವೆ. ಮುಖ್ಯಮಂತ್ರಿಯವರು ಪ್ರಸ್ತುತ ಅಧಿವೇಶನದಲ್ಲಿ ವರದಿಯನ್ನು ಮಂಡಿಸಿ, ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದರು.  

ನ್ಯಾ.ಸದಾಶಿವ  ಆಯೋಗದ ವರದಿಯನ್ನು ಅಂಗೀಕರಿಸಲಾಗುವುದು ಎಂದು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ ಹೇಳಿದ್ದರು. ಇದುವರೆಗೆ ವರದಿಯನ್ನು ಅಂಗೀಕರಿಸಿಲ್ಲ. ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವವರೆಗೆ ಧರಣಿಯನ್ನು ಮುಂದುವರಿಸುತ್ತೇವೆ. ಅದಕ್ಕಾಗಿ ಸಮುದಾಯದ ಒಳಮೀಸಲಾತಿ ಪರ ಹೋರಾಡುತ್ತಿರುವ ಪ್ರಗತಿಪರ ಮುಖಂಡರು, ಮಾದಿಗ, ಸಮಗಾರ, ಡೋರಕಕ್ಕಯ್ಯಾ, ಮೋಚಿ, ಅರುಂದತಿಯಾ, ಬಂಗಿ ಇತ್ಯಾದಿ ಸಮುದಾಯದ ಮುಖಂಡರು ಕಡ್ಡಾಯವಾಗಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. 

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪರಮೇಶ್ವರಪ್ಪ ಮೇಗಳಮನಿ, ಡಿ.ಎಸ್‌.ಮಾಳಗಿ, ಉಡಚಪ್ಪ ಮಾಳಗಿ, ಸಂಜಯಗಾಂಧಿ ಸಂಜೀವಣ್ಣನವರ, ಅಶೋಕ ಮರೆಣ್ಣನವರ ಮುಂತಾದವರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.