ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಗ್ರಂಥಾಲಯ ಸೇವೆ: 6 ತಿಂಗಳಲ್ಲಿ 4 ಲಕ್ಷ ನೋಂದಣಿ!

ಡಿಜಿಟಲ್‌ ಗ್ರಂಥಾಲಯ: ಬೆಂಗಳೂರು ನಗರ ಪ್ರಥಮ, ಉತ್ತರ ಕನ್ನಡಕ್ಕೆ ಕಡೆಯ ಸ್ಥಾನ
Last Updated 2 ಸೆಪ್ಟೆಂಬರ್ 2020, 21:03 IST
ಅಕ್ಷರ ಗಾತ್ರ

ಹಾವೇರಿ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ‘ಡಿಜಿಟಲ್‌ ಗ್ರಂಥಾಲಯ’ಕ್ಕೆ 6 ತಿಂಗಳಲ್ಲಿ ರಾಜ್ಯದಾದ್ಯಂತ 4.27 ಲಕ್ಷ ಓದುಗರು ನೋಂದಣಿ ಮಾಡಿಕೊಂಡಿದ್ದು, ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದೆ.

ಆಗಸ್ಟ್‌ 31ರ ಅಂತ್ಯಕ್ಕೆಬೆಂಗಳೂರು ನಗರ–88,256, ರಾಯಚೂರು–56,885 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 25,543 ಓದುಗರು ನೋಂದಣಿಯಾಗಿದ್ದು, ಈ ಮೂರು ಜಿಲ್ಲೆಗಳು ಕ್ರಮವಾಗಿ ರಾಜ್ಯದಲ್ಲಿ ಮೊದಲ ಮೂರು ಸ್ಥಾನಗಳಲ್ಲಿವೆ. ಉತ್ತರ ಕನ್ನಡ–1,186, ಕೊಡಗು–1,385 ಮತ್ತು ಗದಗ–2,290 ಈ ಮೂರು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಡೆಯ ಮೂರು ಸ್ಥಾನದಲ್ಲಿವೆ.

‘ಸಾರ್ವಜನಿಕ ಗ್ರಂಥಾಲಯ ಶ್ರೀಸಾಮಾನ್ಯನ ವಿಶ್ವವಿದ್ಯಾಲಯ’ ಎಂಬ ಘೋಷವಾಕ್ಯದ ಇಲಾಖೆ ವೆಬ್‌ಸೈಟ್ (www.karnatakadigitalpubliclibrary.org)‌ ಹಾಗೂ ಮೊಬೈಲ್‌ ಆ್ಯಪ್ (e-Sarvajanika Granthalaya)‌ ಮೂಲಕ 1.8 ಲಕ್ಷ ಇ–ಪುಸ್ತಕಗಳನ್ನು ಓದಬಹುದು. ವೆಬ್‌ಸೈಟ್‌ನಲ್ಲಿರುವ ವಿವಿಧ ಲಿಂಕ್‌ಗಳಲ್ಲಿರುವ ಪುಸ್ತಕಗಳನ್ನು ಸೇರಿಸಿದರೆ ಒಟ್ಟಾರೆ 4.37 ಲಕ್ಷ ಪುಸ್ತಕಗಳ ಭಂಡಾರವೇ ಇದೆ. ಇದುವರೆಗೂ ಒಟ್ಟಾರೆ 13.50 ಲಕ್ಷ ಮಂದಿ ಓದಿದ್ದಾರೆ.

ಟಾಪ್‌ ಟೆನ್‌ ಪುಸ್ತಕಗಳು:ಎಫ್‌ಡಿಎ ಮತ್ತು ಎಸ್‌ಡಿಎ, ಇತಿಹಾಸ, ಕರ್ನಾಟಕ ಪ್ರಾದೇಶಿಕ ಭೂಗೋಳಶಾಸ್ತ್ರ, ಚಿದಂಬರ ರಹಸ್ಯ, ಇದನ್ನೆಲ್ಲ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ, ಕೆ.ಎ.ಎಸ್‌., ಅಪರಾಧ ಶಾಸ್ತ್ರ, ಕನ್ನಡ ಕೈಪಿಡಿ, ಸಮಗ್ರ ಇತಿಹಾಸ ಪುಸ್ತಕಗಳು... ಟಾಪ್‌ ಟೆನ್‌ ಸ್ಥಾನದಲ್ಲಿವೆ. ವಿಶೇಷವಾಗಿ, ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳು ಹೆಚ್ಚು ಡಿಜಿಟಲ್‌ ಪುಸ್ತಕಗಳನ್ನು ಓದುತ್ತಿದ್ದಾರೆ.

ಆರು ವೈಶಿಷ್ಟ್ಯಗಳು: ವೆಬ್‌ಸೈಟ್‌ನಲ್ಲಿ ಆರು ವೈಶಿಷ್ಟ್ಯಗಳೊಂದಿಗೆ ಮಾಹಿತಿಯನ್ನು ಅಡಕ ಮಾಡಲಾಗಿದೆ. ಇ–ಪುಸ್ತಕಗಳು ಮತ್ತು ನಿಯತಕಾಲಿಕೆಗಳು, ವಿಡಿಯೊಗಳು, ಶೈಕ್ಷಣಿಕ ವಿಷಯ, ಸಿಮ್ಯುಲೇಷನ್‌ ಲ್ಯಾಬ್‌, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಸಾಮಗ್ರಿಗಳು, ಟೆಕ್‌ ಕ್ಯಾಂಪ್‌ಗಳು ಮತ್ತು ರಸಪ್ರಶ್ನೆ ಎಂದು ವರ್ಗೀಕರಣ ಮಾಡಲಾಗಿದೆ.

‘ಲಾಕ್‌ಡೌನ್‌ ಅವಧಿಯಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಮುಚ್ಚಿದ್ದ ಕಾರಣ, ‘ಡಿಜಿಟಲ್‌ ಗ್ರಂಥಾಲಯ’ ಓದುಗರ ಪಾಲಿಗೆ ವರದಾನವಾಗಿದೆ. ಹಕ್ಕುಸ್ವಾಮ್ಯ ಹೊರತುಪಡಿಸಿದ ಕೃತಿಗಳು ಡಿಜಿಟಲ್‌ ಗ್ರಂಥಾಲಯದಲ್ಲಿ ಲಭ್ಯವಿವೆ. ಆಸಕ್ತ ಪ್ರಕಾಶಕರು ಮತ್ತು ಲೇಖಕರು ಅನುಮತಿ ಪತ್ರ ನೀಡಿದರೆ ಅವರ ಕೃತಿಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುತ್ತೇವೆ. ಈಗಾಗಲೇ 60 ಲೇಖಕರು ಅನುಮತಿ ನೀಡಿದ್ದಾರೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ‌ ಎಸ್‌.ಹೊಸಮನಿ ತಿಳಿಸಿದರು.

ಡಿಜಿಟಲ್‌ ಗ್ರಂಥಾಲಯಕ್ಕೆ 10 ಲಕ್ಷ ಓದುಗರ ನೋಂದಣಿ ಗುರಿಯಿದ್ದು, ವರ್ಷಾಂತ್ಯಕ್ಕೆ ತಲುಪಲಿದ್ದೇವೆ. ಉಚಿತವಾಗಿ ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆಯಬಹುದು ಎಂದುಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ– ಡಾ.ಸತೀಶಕುಮಾರ ಎಸ್‌. ಹೊಸಮನಿ ಪ್ರತಿಕ್ರಿಯಿಸಿದರು.

ಲಾಕ್‌ಡೌನ್‌ನಿಂದಾಗಿ ಗ್ರಂಥಾಲಯಗಳು ಮುಚ್ಚಿರುವ ಕಾರಣ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ‘ಡಿಜಿಟಲ್‌ ಲೈಬ್ರರಿ’ ಉಪಯುಕ್ತವಾಗಿದ್ದು, ಬಡ ವಿದ್ಯಾರ್ಥಿಗಳ ಆಶಾಕಿರಣವಾಗಿದೆ ಎಂದು ಹಿರೇಕೆರೂರಿನ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಬಸನಗೌಡ ಪೊಲೀಸ್‌ಗೌಡರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT