ಶನಿವಾರ, ಅಕ್ಟೋಬರ್ 1, 2022
20 °C
ಚಪ್ಪರದಹಳ್ಳಿ ಸಮೀಪ ಉಕ್ಕಿ ಹರಿಯುವ ಕುಮದ್ವತಿ ನದಿ: ರಸ್ತೆ, ಸೇತುವೆ ದುರಸ್ತಿಗೆ ಆಗ್ರಹ

ರಟ್ಟೀಹಳ್ಳಿ: ಮಳೆಗಾಲದಲ್ಲಿ ಗ್ರಾಮಸ್ಥರಿಗೆ ತಪ್ಪದ ಸಂಕಷ್ಟ

ಪ್ರದೀಪ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ರಟ್ಟೀಹಳ್ಳಿ: ಪ್ರತಿ ವರ್ಷವೂ ಮಳೆಗಾಲದಲ್ಲಿ ಕುಮದ್ವತಿ ನದಿ ಉಕ್ಕಿ ಹರಿದು ಸೇತುವೆ ಮೇಲೆ ಹರಿಯುವುದರಿಂದ ತಾಲ್ಲೂಕಿನ ಎಲಿವಾಳ ಮತ್ತು ಚಪ್ಪರದಹಳ್ಳಿ ಗ್ರಾಮಸ್ಥರು ಸಂಕಷ್ಟ ಅನುಭವಿಸುವಂತಾಗಿದೆ.

ರಟ್ಟೀಹಳ್ಳಿ ಚಪ್ಪರದಹಳ್ಳಿ ಮಾರ್ಗ ಮಧ್ಯೆ ಯಲಿವಾಳ ಗ್ರಾಮದ ಹತ್ತಿರ ಕುಮದ್ವತಿ ನದಿಗೆ ಅತ್ಯಂತ ಹಳೆಯದಾದ ಸೇತುವೆಯಿದ್ದು, ಇದು ಅತ್ಯಂತ ಕೆಳಮಟ್ಟದಲ್ಲಿ ಇರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಎದುರಾಗುತ್ತದೆ. ಅಲ್ಲದೆ ಶಾಲೆ, ಕಾಲೇಜು, ಆಸ್ಪತ್ರೆಗೆ ತೆರಳಲು ವಿದ್ಯಾರ್ಥಿಗಳು, ಗ್ರಾಮಸ್ಥರು ಪರದಾಡುಂತಾಗಿದೆ.

ಸೇತುವೆಯನ್ನು ದುರಸ್ತಿಪಡಿಸಿ, ಎತ್ತರಿಸಿದರೆ, ಮಳೆಗಾಲದಲ್ಲಿ ಗ್ರಾಮಸ್ಥರು ಸುರಕ್ಷಿತವಾಗಿ ಸಂಚರಿಸಲು ಅನುಕೂಲವಾಗುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ಜೋರಾಗಿ ಹರಿಯುವ ನದಿಯನ್ನು ದಾಟುವುದು ದೊಡ್ಡ ಸಾಹಸವಾಗಿದೆ. ಆಯ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಗ್ರಾಮದ ವಿದ್ಯಾರ್ಥಿಗಳು. 

ಇಳಿಬಿದ್ದ ವಿದ್ಯುತ್‌ ತಂತಿಗಳು:

ಚಪ್ಪರದಹಳ್ಳಿ ಗ್ರಾಮದಲ್ಲಿ ಹೊಲಕ್ಕೆ ಸಾಗುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ನಿತ್ಯ ಜಮೀನಿಗೆ ತೆರಳಲು ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ. ಗ್ರಾಮದಲ್ಲಿ ವಿದ್ಯುತ್ ಇಲಾಖೆಯವರು ಎಷ್ಟೋ ವರ್ಷಗಳ ಹಿಂದೆ ಹಾಕಿದ ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳು ಸಂಪೂರ್ಣವಾಗಿ ಹಾಳಾಗಿದ್ದು, ಕಂಬಗಳು ಬೀಳುವ ಹಂತದಲ್ಲಿವೆ. ವಿದ್ಯುತ್ ತಂತಿಗಳು ಗ್ರಾಮದಲ್ಲಿ ಅತ್ಯಂತ ಕೆಳಹಂತದಲ್ಲಿದ್ದು ಅಪಾಯ ಆಹ್ವಾನಿಸುತ್ತಿವೆ. 

ಸ್ಮಶಾನದ ಕೊರತೆ:

ಇಲ್ಲಿನ ಗ್ರಾಮಸ್ಥರಿಗೆ ಸ್ಮಶಾನ ಭೂಮಿ ಇಲ್ಲದೆ ಶವ ಸಂಸ್ಕಾರವನ್ನು ನಡೆಸಲು ತೊಂದರೆಯಾಗಿದೆ. ಗ್ರಾಮವು ತಾಲ್ಲೂಕು ಕೇಂದ್ರದಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಬಸ್‌ ಸೌಲಭ್ಯವಿದ್ದು, ಮಧ್ಯಾಹ್ನದ ವೇಳೆ ಸಂಚಾರಕ್ಕೆ ತೊಂದರೆಯಾಗಿದೆ. 

ಆರೋಗ್ಯ ಕೇಂದ್ರ ಸೌಲಭ್ಯ ಕಲ್ಪಿಸಿ:

ಗ್ರಾಮಕ್ಕೆ ತೆರಳಬೇಕೆಂದರೆ ಯಲಿವಾಳ ಕ್ರಾಸ್‌ನಿಂದ ಸುಮಾರು 4 ಕಿ.ಮೀ. ನಡೆದುಕೊಂಡೇ ಕ್ರಮಿಸಬೇಕು. ಗ್ರಾಮದಲ್ಲಿ ಆಸ್ಪತ್ರೆ ವ್ಯವಸ್ಥೆಯಿಲ್ಲದೆ ಚಿಕಿತ್ಸೆಗೆ ತಾಲ್ಲೂಕು ಕೇಂದ್ರ ರಟ್ಟೀಹಳ್ಳಿಗೆ ಆಗಮಿಸಬೇಕು. ಇದರಿಂದ ಇಲ್ಲಿ ವೃದ್ಧರು, ಮಹಿಳೆಯರಿಗೆ ತೊಂದರೆಯಾಗಿದೆ. ರಾತ್ರಿ ವೇಳೆಯಲ್ಲಿ ಇಲ್ಲಿ ಬೀದಿದೀಪ ವ್ಯವಸ್ಥೆಯಿಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಮಳೆಗಾಲದಲ್ಲಿ ಉಕ್ಕಿ ಹರಿಯುವ ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯನ್ನು ಎತ್ತರಿಸಿ, ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.
– ಶಿವನಗೌಡ ಪಾಟೀಲ, ಯಲಿವಾಳ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ

ಗ್ರಾಮದ ಶಾಲಾ ಕೊಠಡಿ, ಶೌಚಾಲಯ, ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆ ತಲುಪಿವೆ. ಸರ್ಕಾರ, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು.

– ಬಸವರಾಜ ಇಂಗಳಗೊಂದಿ, ಚಪ್ಪರದಹಳ್ಳಿ ಗ್ರಾಮದ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು