ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು: ರಸೀದಿ ನೀಡದೇ ಅಧಿಕ ಶುಲ್ಕ ವಸೂಲಿ!

ಹಾವೇರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು: 42 ವಿದ್ಯಾರ್ಥಿಗಳಿಗೆ ವಂಚನೆ– ಆರೋಪ
Last Updated 18 ಜೂನ್ 2022, 15:25 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ದೇವಗಿರಿ ಸಮೀಪದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿಗಳಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿ, ರಸೀದಿಯನ್ನೇ ನೀಡದಿರುವುದು ಬೆಳಕಿಗೆ ಬಂದಿದೆ.

ಕಾಲೇಜು ಕ್ಯಾಂಪಸ್‌ನಲ್ಲಿರುವ ‘ಬಾಲಕರ ವಿದ್ಯಾರ್ಥಿ ನಿಲಯ’ದ (ಸಾಮಾನ್ಯ ವರ್ಗ) 42 ವಿದ್ಯಾರ್ಥಿಗಳಿಂದ ತಲಾ ₹13 ಸಾವಿರದಂತೆ ಒಟ್ಟು ₹5.46 ಲಕ್ಷ ಹಾಸ್ಟೆಲ್‌ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗಿದೆ. ಹಾಸ್ಟೆಲ್‌ ನಿಗದಿತ ಶುಲ್ಕ ₹8 ಸಾವಿರದ ಬದಲಿಗೆ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ₹5 ಸಾವಿರ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

‘ವಿದ್ಯಾರ್ಥಿಯಿಂದ ತಲಾ ₹5 ಸಾವಿರದಂತೆ 42 ವಿದ್ಯಾರ್ಥಿಗಳಿಂದ ₹2.10 ಲಕ್ಷ ಶುಲ್ಕವನ್ನು ಹೆಚ್ಚುವರಿಯಾಗಿ ಕಟ್ಟಿಸಿಕೊಂಡು ನಮಗೆ ಮೋಸ ಮಾಡಿದ್ದಾರೆ. ಹೆಚ್ಚುವರಿ ಶುಲ್ಕವನ್ನು ಹಿಂತಿರುಗಿಸುತ್ತೇವೆ ಎಂದು ಭರವಸೆ ನೀಡಿದ್ದ ಅಂದಿನ ಪ್ರಾಂಶುಪಾಲ ಡಾ.ಕೆ.ಬಿ.ಪ್ರಕಾಶ್‌ 2022ರ ಏಪ್ರಿಲ್‌ನಲ್ಲಿ ನಿವೃತ್ತಿಯಾಗಿದ್ದಾರೆ. ಹಣ ಕಟ್ಟಿಸಿಕೊಂಡಿದ್ದ ಎಸ್‌ಡಿಎ ರವೀಂದ್ರಕುಮಾರ್ ಕಾಲೇಜಿಗೆ 4 ತಿಂಗಳಿಂದ ಅನಧಿಕೃತ ಗೈರು ಹಾಜರಾಗಿ, ನಾಪತ್ತೆಯಾಗಿದ್ದಾರೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಗೋಳು ಕೇಳುವವರಿಲ್ಲ: ಕಣ್ಣೀರಿಟ್ಟ ವಿದ್ಯಾರ್ಥಿಗಳು

‘ಹಣ ಕಟ್ಟಿಸಿಕೊಳ್ಳುವಾಗ ವಿದ್ಯಾರ್ಥಿಗಳು ರಸೀದಿ ಕೇಳಿದ್ದಕ್ಕೆ ಒಂದು ವಾರದ ನಂತರ ಕೊಡುತ್ತೇವೆ ಎಂದು ನಂಬಿಸಲಾಗಿತ್ತು. ನಂತರ ರಸೀದಿಯನ್ನೇ ನೀಡಲಿಲ್ಲ. ಹೀಗಾಗಿ ಹಣ ಕಟ್ಟಿದ್ದಕ್ಕೆ ನಮ್ಮ ಬಳಿ ದಾಖಲೆಯಿಲ್ಲ. ನೂತನ ಪ್ರಾಂಶುಪಾಲ ಡಾ.ಜಗದೀಶ ಕೋರಿ ಅವರನ್ನು ಕೇಳಿದರೆ, ‘ಕಾಲೇಜು ಹಾಸ್ಟೆಲ್‌ ಅವ್ಯವಸ್ಥೆಯನ್ನು ಸರಿಪಡಿಸುತ್ತೇವೆ. ಹೆಚ್ಚುವರಿ ಹಣ ಪಾವತಿ ಮತ್ತು ರಸೀದಿ ನೀಡದಿರುವುದಕ್ಕೂ ನನಗೂ ಸಂಬಂಧವಿಲ್ಲ’ ಎಂದು ಉತ್ತರಿಸುತ್ತಿದ್ದಾರೆ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ’ ಎಂದು ವಿದ್ಯಾರ್ಥಿಗಳು ಕಣ್ಣೀರು ಸುರಿಸಿದರು.

ಅವ್ಯವಸ್ಥೆಯ ಆಗರ:

ಸಾಮಾನ್ಯ ವರ್ಗ ಮತ್ತು ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗಾಗಿ ₹ 3 ಕೋಟಿ ವೆಚ್ಚದಲ್ಲಿ ಜೋಡಿ ಹಾಸ್ಟೆಲ್‌ಗಳನ್ನು ನಾಲ್ಕು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ.ಎಸ್‌ಸಿ,ಎಸ್ಟಿ ಹಾಸ್ಟೆಲ್‌ ಬಳಕೆಯಾಗದೇ ಪಾಳು ಬಿದ್ದಿದೆ. ಸಾಮಾನ್ಯ ವರ್ಗದ ಹಾಸ್ಟೆಲ್‌ನಲ್ಲಿ ಮಂಚದ ವ್ಯವಸ್ಥೆ ಇಲ್ಲ. ಕಿಟಕಿ, ಬಾಗಿಲುಗಳ ಗಾಜು ಒಡೆದಿದ್ದು, ಮಳೆ ಬಂದರೆ ನೀರು ಒಳ ನುಗ್ಗುತ್ತದೆ. ತಿಂಗಳಿಗೊಮ್ಮೆ ಶೌಚಾಲಯ ಸ್ವಚ್ಛ ಮಾಡುವುದರಿಂದ ದುರ್ವಾಸನೆ ಬೀರುತ್ತಿವೆ ಎಂದು ವಿದ್ಯಾರ್ಥಿಗಳು ಸಮಸ್ಯೆಗಳನ್ನು ತೋಡಿಕೊಂಡರು.

**

ಚೆಕ್‌ ಬೌನ್ಸ್‌:ರೊಕ್ಕಕ್ಕಾಗಿ ಅಲೆದಾಟ

‘ಹಾಸ್ಟೆಲ್‌ ಪ್ರವೇಶಕ್ಕೆ ಎಂದು ₹15,500 ಶುಲ್ಕ ಕಟ್ಟಿದ್ದೆ. ಆದರೆ ಹಾಸ್ಟೆಲ್‌ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ನಾನು ಹಾಸ್ಟೆಲ್‌ಗೆ ಬಾರದೇ ಪಿ.ಜಿ.ಯಲ್ಲೇ ಉಳಿದುಕೊಂಡೆ. ಹೀಗಾಗಿ ನನ್ನ ಹಣ ವಾಪಸ್‌ ಕೊಡಿ ಎಂದು ಕೇಳಿದ್ದಕ್ಕೆ, ಕಾಲೇಜಿನವರು ಬ್ಯಾಂಕ್‌ ಚೆಕ್‌ ಕೊಟ್ಟಿದ್ದರು. ಕಾಲೇಜು ಅಕೌಂಟಿನಲ್ಲಿ ಹಣವಿಲ್ಲದ ಕಾರಣ ‘ಚೆಕ್‌ ಬೌನ್ಸ್‌’ ಆಗಿದೆ. ನನ್ನ ರೊಕ್ಕ ವಾಪಸ್‌ ಪಡೆಯಲು 4 ತಿಂಗಳಿಂದ ಕಾಲೇಜಿನ ಆಡಳಿತ ಕಚೇರಿಗೆ ಅಲೆಯುತ್ತಿದ್ದೇನೆ’ ಎಂದು ವಿದ್ಯಾರ್ಥಿ ಮಹೇಶ ದುಃಖ ತೋಡಿಕೊಂಡರು.

***

ವಿದ್ಯಾರ್ಥಿಗಳಿಂದ ಹಣ ಕಟ್ಟಿಸಿಕೊಂಡಿದ್ದ ಎಸ್‌ಡಿಎ ನಾಪತ್ತೆಯಾಗಿದ್ದಾರೆ. ಹಣ ಸರ್ಕಾರಕ್ಕೆ ಸಂದಾಯವಾಗಿಲ್ಲ. ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ
– ಡಾ.ಜಗದೀಶ ಕೋರಿ, ಪ್ರಾಂಶುಪಾಲ, ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT