ಸೋಮವಾರ, ಏಪ್ರಿಲ್ 6, 2020
19 °C
ರಾಣೆಬೆನ್ನೂರು ತಾಲ್ಲೂಕಿನ ನಿಟ್ಟೂರು ಗ್ರಾಮದ ಯುವಕ ರೇವಣಸಿದ್ದಪ್ಪ

ರೈತನಿಗೆ ಬಲ ನೀಡಿದ ರೇನ್ ಗನ್

ಬಸವರಾಜ ಒಡೇರಹಳ್ಳಿ Updated:

ಅಕ್ಷರ ಗಾತ್ರ : | |

Prajavani

ತುಮ್ಮಿನಕಟ್ಟಿ: ಆರ್ಥಿಕ ಸಂಕಷ್ಟದಿಂದ ನಲುಗಿದ ತಮ್ಮ ಕುಟುಂಬದ ರಕ್ಷಣೆಗೆ ಆಸರೆಯಾಗಿ ನಿಂತ ರಾಣೆಬೆನ್ನೂರು ತಾಲ್ಲೂಕಿನ ನಿಟ್ಟೂರು ಗ್ರಾಮದ ಯುವಕ ರೇವಣಸಿದ್ದಪ್ಪ ಮಂಜಪ್ಪ ಕಿರಗೇರಿ ‘ಇಟಾಲಿಯನ್ ರೇನ್ ಗನ್’ ತಂತ್ರಜ್ಞಾನ ಅಳವಡಿಸಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಎರಡು ವರ್ಷದ ಹಿಂದೆ ಬ್ಯಾಂಕಿನಿಂದ ₹2 ಲಕ್ಷ ಸಾಲ ಪಡೆದು ಕೊಳವೆಬಾವಿ ಕೊರೆಯಿಸಿದೆ. ಅದರಲ್ಲಿ ಮೂರು ಇಂಚು ನೀರು ಸಿಕ್ಕಿದೆ. ತಂದೆಯಿಂದ ಬಳುವಳಿಯಾಗಿ ಬಂದ 10 ½ ಎಕರೆ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದೇನೆ ಎನ್ನುತ್ತಾರೆ ಯುವ ರೈತ ರೇವಣಸಿದ್ದಪ್ಪ.

2 ½ ಎಕರೆಯಲ್ಲಿ 181 ತೆಂಗಿನ ಸಸಿ, 2 ಎಕರೆ ಅಲಸಂದೆ, 1 ಎಕರೆ ಬಿಳಿಜೋಳ, 20 ಗುಂಟೆ ಸೌತೆಕಾಯಿ, 4 ಎಕರೆಯಲ್ಲಿ ಒಣ ಬೇಸಾಯದಲ್ಲಿ ಗೋವಿನಜೋಳ(ಮೆಕ್ಕೆಜೋಳ) ಹಾಗೂ ತೆಂಗಿನ ಸಸಿಗಳ ನಡುವೆಯೂ ಗೋವಿನ ಜೋಳ ಬೆಳೆಯುತ್ತಿದ್ದೇನೆ ಎಂದು ಅವರು ತಿಳಿಸಿದರು.

ಮೊಬೈಲ್‌ ಮೂಲಕ ನಿರ್ವಹಣೆ:

ಬೆಳೆಗಳಿಗೆ ವರ್ಷಕ್ಕೆ 20 ಟ್ರಾಕ್ಟರ್ ಕೊಟ್ಟಿಗೆ ಗೊಬ್ಬರ, 5 ಟ್ರಾಕ್ಟರ್ ಕೆರೆ ಹೂಳು ಎತ್ತಿದ ಮಣ್ಣು ಹಾಕುತ್ತೇನೆ. ಬೆಳೆಗಳು ಸಮೃದ್ಧವಾಗಿ ಬೆಳೆಯಲು ರೇನ್ ಗನ್ ತಂತ್ರಜ್ಞಾನದ ಬಳಕೆ ಬಹಳ ಉಪಯುಕ್ತವಾಗಿದೆ. ಅಲ್ಲದೆ, ಸ್ಟಾರ್ಟರ್‌ ಬೋರ್ಡ್‌ಗೆ ಜಿಎಸ್‌ಪಿ ಪಂಪ್ ಕಂಟ್ರೋಲರ್ ಜೋಡಿಸಿ ಸಿಮ್ ಕಾರ್ಡು ಸೇರಿಸಿದೆ. ಇದರಿಂದ ಮೊಬೈಲ್‌ ಮೂಲಕವೇ ನಿರ್ವಹಣೆ ಮಾಡುತ್ತಿದ್ದೇನೆ ಎನ್ನುತ್ತಾರೆ ರೇವಣಸಿದ್ದಪ್ಪ.

ಈ ಬಾರಿ ಮೆಕ್ಕೆಜೋಳ ಎಕರೆಗೆ 25 ಕ್ವಿಂಟಲ್, ಅಲಸಂದೆ 6 ಕ್ವಿಂಟಲ್, ಬಿಳಿಜೋಳ 10 ಕ್ವಿಂಟಲ್ ಬರುವ ನಿರೀಕ್ಷೆ ಇದೆ. ಅಲ್ಲದೆ, ನೀರಾವರಿ ಮಾಡಿದ 2 ವರ್ಷದಲ್ಲಿಯೇ ಎಲ್ಲ ಸಾಲ ತೀರಿಸಿ ನೆಮ್ಮದಿಯಿಂದ ಬದುಕುತ್ತಿದ್ದೇನೆ ಎಂದು ಅವರು ವಿವರಿಸಿದರು.

ಕೃಷಿಯಲ್ಲಿ ತೊಡಗಲು ಕುಟುಂಬದ ಸಹಕಾರ ಇದೆ. ಸಹೋದರ ಶಿವಪ್ಪ, ತಂದೆ ಮಂಜಪ್ಪ ಹಾಗೂ ಶಿಕ್ಷಕ ಶಂಕರಗೌಡ ಚಳಗೇರಿ ಸದಾ ಬೆನ್ನೆಲುಬಾಗಿದ್ದಾರೆ. ಸಾಂಪ್ರದಾಯಿಕ ಬೆಳೆ ಜತೆಗೆ ಮಿಶ್ರ ಬೆಳೆ ಬೆಳೆಯುತ್ತಾ ಬೆಳೆ ಉತ್ತಮ ಆದಾಯ ಪಡೆಯಲು ಸಹಕಾರಿಯಾಗಿದೆ ಎನ್ನುತ್ತಾರೆ ಅವರು. 

ಕೃಷಿ ಮಾಹಿತಿಗೆ ಯುಟ್ಯೂಬ್‌:

ಕೃಷಿ ಚಟುವಟಿಕೆ ಬಗ್ಗೆ ಯಾವುದೇ ಮಾಹಿತಿ ಅವಶ್ಯಕವಾಗಿದ್ದಾಗ ಪರಿಣತರು ಮಾಡಿದ ವಿಡಿಯೊಗಳನ್ನು ಯುಟ್ಯೂಬ್‌ ಮೂಲಕ ನೋಡಿ ಕಲಿಯುತ್ತೇನೆ. ಅದರೊಟ್ಟಿಗೆ ಧಾರವಾಡ ಕೃಷಿ ಮೇಳ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಕಲೆ ಹಾಕಿದ ಮಾಹಿತಿ ಸಹಕಾರಿಯಾಗಿದೆ ಎನ್ನುತ್ತಾರೆ ರೇವಣಸಿದ್ದಪ್ಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು