ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ತಡೆದು ರೈತರ ಆಕ್ರೋಶ; ಸಂಚಾರ ಅಸ್ತವ್ಯಸ್ತ

ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡಿ, ಕಬ್ಬಿನ ಬಾಕಿ ಕೊಡಿ
Last Updated 2 ಡಿಸೆಂಬರ್ 2020, 14:43 IST
ಅಕ್ಷರ ಗಾತ್ರ

ಹಾವೇರಿ: ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡಬೇಕು ಹಾಗೂ ಕಬ್ಬಿನ ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್ ಬಣ) ನೇತೃತ್ವದಲ್ಲಿ ರೈತರು ಬುಧವಾರ ‘ಹೆದ್ದಾರಿ ಬಂದ್‌ ಚಳವಳಿ’ ನಡೆಸಿದರು.

ನಗರದ ಹೊರವಲಯದ ದೇವಗಿರಿ ಕ್ರಾಸ್‌ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆದ ರೈತರು, ರಸ್ತೆಯಲ್ಲೇ ಮಲಗಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪಂಜಾಬ್‌, ಹರಿಯಾಣ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ರೈತರ ಪ್ರವೇಶ ತಡೆಯಲು ಸೇನೆ ಬಳಸುತ್ತಿರುವುದು ಹಾಗೂ ಅನ್ನದಾತರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಜಲಫಿರಂಗಿ, ಟಯರ್‌ ಗ್ಯಾಸ್‌ ಹಾಗೂ ಲಾಠಿ ಏಟಿನ ಮೂಲಕ ಅನ್ನ ಬೆಳೆಯುವ ರೈತರ ಮೇಲೆ ಕೇಂದ್ರ ಸರ್ಕಾರ ಕ್ರೌರ್ಯ ಮೆರೆಯುತ್ತಿದೆ ಎಂದು ಕೇಂದ್ರದ ವಿರುದ್ಧ ಗುಡುಗಿದರು.

ಮಾಲತೇಶ ಪೂಜಾರ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ರೈತ ಸಮುದಾಯವನ್ನು ನಾಶ ಮಾಡಿ, ಕಾರ್ಪೊರೆಟ್‌ ಕಂಪನಿಗಳಿಗೆ ನೆರವು ನೀಡುತ್ತಿದ್ದಾರೆ. ರೈತರ ಹೋರಾಟವನ್ನು ಹತ್ತಿಕ್ಕುವ ಕೇಂದ್ರದ ಪ್ರಯತ್ನವನ್ನು ಖಂಡಿಸುತ್ತೇವೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಂಬಲ ಸೂಚಿಸಿ ಹೆದ್ದಾರಿಗಳ ಬಂದ್‌ ಚಳವಳಿ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಸೇರಿದಂತೆ ಹಲವಾರು ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳಿಂದ ರೈತರು ಬೀದಿಪಾಲಾಗುವ ಸಂಭವವಿದೆ. ಕೃಷಿ ಭೂಮಿಗಳು ಬಂಡವಾಳಶಾಹಿಗಳ ಪಾಲಾಗುತ್ತವೆ. ರೈತ ಸಂಘಗಳೊಂದಿಗೆ ಚರ್ಚಿಸದೆ, ತರಾತುರಿಯಲ್ಲಿ ಕಾಯ್ದೆಗಳನ್ನು ತಂದಿದ್ದು ಏಕೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ರಾಜು‌ ತರ್ಲಘಟ್ಟ, ಎಂ.ಎಂ.ನಾಯಕ, ಚನ್ನಪ್ಪ ಮರಡೂರ‌, ರುದ್ರಪ್ಪ ಬಳಿಗಾರ‌, ಮುತ್ತು ಗುಡಿಗೇರ, ಹಾಲೇಶ್ ಕರಡಿ, ನೂರ್‌ ಅಹಮದ್‌ ಮುಲ್ಲಾ, ಭುವನೇಶ್ವರ ಶಿಡ್ಲಾಪುರ ಮುಂತಾದವರು ಹೆದ್ದಾರಿ ಬಂದ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ಸಂಚಾರ ಅಸ್ತವ್ಯಸ್ತ:ಹೆದ್ದಾರಿ ಬಂದ್‌ ವೇಳೆ ರೈತರು ರಸ್ತೆಯಲ್ಲಿ ಅಡ್ಡಲಾಗಿ ಮಲಗಿ ಘೋಷಣೆಗಳನ್ನು ಕೂಗಿದರು. ಇದರ ಪರಿಣಾಮ ವಾಹನಗಳು ಕಿ.ಮೀ. ದೂರದವರೆಗೆ ನಿಂತುಕೊಂಡು, ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ನೂರಾರು ಸಂಖ್ಯೆಯಲ್ಲಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್‌ ವಾಹನದಲ್ಲಿ ಕರೆದೊಯ್ದರು. ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿ ವಾಹನದೊಂದಿಗೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT