ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಆತ್ಮಹತ್ಯೆ: ಶವ ಇಟ್ಟು ಪ್ರತಿಭಟನೆ, ಶಿವಾನಂದ ಪಾಟೀಲರ ರಾಜೀನಾಮೆಗೆ ಆಗ್ರಹ

Published 27 ಡಿಸೆಂಬರ್ 2023, 15:42 IST
Last Updated 27 ಡಿಸೆಂಬರ್ 2023, 15:42 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ ಬುಧವಾರ ಸಾಲಬಾಧೆ ಮತ್ತು ಬೆಳೆನಷ್ಟದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ರೈತನ ಶವವನ್ನು ಇಟ್ಟು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಶ್ಯಾಬಳ ಗ್ರಾಮದ ರೈತ ಚಂದ್ರು ನಂಜುಂಡಪ್ಪ ಚನ್ನಾಪುರ (49) ಆತ್ಮಹತ್ಯೆ ಮಾಡಿಕೊಂಡ ರೈತ. 

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚಿನ್ನಪ್ಪ ಪೂಜಾರ ಮಾತನಾಡಿ, ‘ಮಳೆಯಾಗದೇ, ಬೆಳೆ ಬಾರದೆ ರೈತರು ಕಂಗಾಲಾಗಿದ್ದು, ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಇಂಥ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ಹೇಳಿಕೆ ರೈತರ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡುತ್ತದೆ. ರೈತ ವಿರೋಧಿ ಹೇಳಿಕೆ ನೀಡುತ್ತಿರುವ ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೃತ ಕುಟುಂಬಕ್ಕೆ ₹1ಕೋಟಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ರೈತರು ಬರಗಾಲ ಬೀಳುವುದನ್ನೇ, ಸಾಲ ಮುನ್ನಾ ಮಾಡುವುದನ್ನೇ ಎದುರು ನೋಡುತ್ತಿದ್ದಾರೆ ಎಂಬ ಸಚಿವರ ಹೇಳಿಕೆ ಇಡೀ ರೈತ ಸಮೂಹದ ಆಕ್ರೋಶಕ್ಕೆ ಕಾರಣವಾಗಿದೆ. ಸಾಲ ಬಡ್ಡಿ ಮುನ್ನಾ ಆಗಿದೆ. ತಕ್ಷಣ ಸಾಲ ತುಂಬುವಂತೆ ಬ್ಯಾಂಕ್ ಅಧಿಕಾರಿಗಳ ಒತ್ತಾಯ ಹೆಚ್ಚಾಗಿದೆ. ಸರ್ಕಾರದ ಆದೇಶ ಕಡೆಗಣಿಸಿ ರೈತರ ಮನೆಗಳಿಗೆ ಅಲೆಯುತ್ತಿದ್ದಾರೆ. ಸರ್ಕಾರ ಸಂಪೂರ್ಣ ಸಾಲ ಮುನ್ನಾ ಮಾಡಬೇಕು. ಮೃತ ರೈತರ ಕುಟುಂಬಕ್ಕೆ ನೆರವಾಗಬೇಕು ಎಂದರು.

ತಹಶೀಲ್ದಾರ್ ಸಂತೋಷ ಹಿರೇಮಠ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ‘ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಿಗುವಂತೆ ಸರ್ಕಾರಕ್ಕೆ ತಕ್ಷಣ ವರದಿ ಸಲ್ಲಿಸಲಾಗುವುದು’ ಎಂದರು. 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಾದ ರಾಜು ಪವಾರ, ಎನ್.ಎಂ.ನಾಯಕ, ಭುವನೇಶ್ವರ ಶಿಡ್ಲಾಪುರ, ಮುತ್ತಣ್ಣ ಗುಡಿಗೇರಿ, ಆನಂದ ಕೆಳಗಿಮನಿ, ಶಂಕರಗೌಡ ಪಾಟೀಲ, ಚನ್ನಪ್ಪ ಮರಡೂರ, ಹನುಮಂತಪ್ಪ ದೊಡ್ಡಮನಿ, ರಾಜು ತಲರ್ಘಟ, ರಾಜು ಪಿತಾಂಬರ, ಗಿರೀಶ ಪಾಟೀಲ, ಅಬ್ದುಲ್ ಕಡಕೊಳ, ಅಶೋಕ ಮಡ್ಲಿ, ನಾಗಪ್ಪ ಕೋಟಣದ, ದೇವರಾಜ ಸೇರಿದಂತೆ ಅನೇಕ ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು. 

ಬ್ಯಾಂಕ್‌ನಲ್ಲಿ ₹30 ಲಕ್ಷ ಸಾಲ

‘ಕೃಷಿ ಚಟುವಟಿಕೆಗಾಗಿ ಕೋಣನಕೇರಿ ಗ್ರಾಮೀಣ ವಿಕಾಸ ಬ್ಯಾಂಕ್‌ನಲ್ಲಿ ₹30 ಲಕ್ಷ ಸಾಲವನ್ನು ಮಾಡಲಾಗಿದ್ದು ಬರಗಾಲದ ಸಂದರ್ಭದಲ್ಲಿ ತೀರಿಸುವುದು ಹೇಗೆ ಎಂದು ಮನನೊಂದು ಅರಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತ ಚಂದ್ರಪ್ಪ ಅವರ ಪತ್ನಿ ಹೇಮಕ್ಕ ಪೊಲೀಸರಿಗೆ ದೂರು ನೀಡಿದ್ದು ಈ ಬಗ್ಗೆ ಬಂಕಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT