ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಲಿ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಿ: ವಿನಾಯಕ ಕುರುಬರ ಒತ್ತಾಯ

Last Updated 25 ಸೆಪ್ಟೆಂಬರ್ 2020, 2:55 IST
ಅಕ್ಷರ ಗಾತ್ರ

ಹಾವೇರಿ: ‘ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ ಎಪಿಎಂಸಿ, ಗ್ರಾಮೀಣ ಬಜಾರ್‌, ವೇರ್‌ಹೌಸ್‌, ಬಂದರು ವಲಯದ ಹಮಾಲಿ ಕಾರ್ಮಿಕರಿಗೆ ಆರ್ಥಿಕ ನೆರವು ಮತ್ತು ಆಹಾರ ಧಾನ್ಯದ ಕಿಟ್‌ ನೀಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ’ ಎಂದು ಜಿಲ್ಲಾ ಹಮಾಲಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವಿನಾಯಕ ಕುರುಬರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರವಿವಿಧ ಹಮಾಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ತಮ್ಮ ಬೇಡಿಕೆಗಳ ಈಡೇರಿಸುವಂತೆ ಮುಷ್ಕರ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‌ನಲ್ಲಿ ಹಮಾಲಿ ಕಾರ್ಮಿಕರನ್ನು ಪರಿಗಣಿಸದೇ ಕಡೆಗಣಿಸಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ನೀಡಿದ ಭರವಸೆ ಹುಸಿಯಾಗಿದೆ. ಆದ್ದರಿಂದ ನಮ್ಮ ಬೇಡಿಕೆಗಳಿಗಾಗಿ ಹೋರಾಟ ಆರಂಭಿಸಿದ್ದೇವೆ ಎಂದರು.

ರಾಜ್ಯದಲ್ಲಿರುವ ಸುಮಾರು 4 ಲಕ್ಷ ಶ್ರಮಿಕರು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಾಗಿದ್ದು, ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ಲಾಕ್‌ಡೌನ್ ಆರಂಭದಿಂದ ಮಾರುಕಟ್ಟೆ ವಹಿವಾಟು ಸ್ಥಗಿತಗೊಂಡಿದ್ದರಿಂದ ಕೆಲಸಕ್ಕಾಗಿ ಅಲೆಯುವಂತಾಗಿದೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಪ್ರಧಾನಮಂತ್ರಿ ಜೀವನ ಭೀಮಾ ಮತ್ತು ಸುರಕ್ಷಾ ವಿಮಾ ಯೋಜನೆಗಳಿಗೆ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ಕಾರ್ಯ ಕೂಡಲೇ ಪ್ರಾರಂಭಿಸಬೇಕು. ನೋಂದಾಯಿತ ಕಾರ್ಮಿಕರಿಗೆ ಮರಣ ಪರಿಹಾರ ಮತ್ತು ಯೋಜನೆಗೆ ಸೇರುವ ಕಾರ್ಮಿಕರ ವಯಸ್ಸಿನ ಮಿತಿ 60 ವರ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಮುಷ್ಕರದಲ್ಲಿ ಹೊನ್ನಪ್ಪ ಮಾಳಗಿ, ಗುಡ್ಡಪ್ಪ ಮಾಳಗಿ, ಮಲ್ಲೇಶ ಭಜಂತ್ರಿ, ಕರಿಯಪ್ಪ ಶಿವಣ್ಣನವರ, ಹೊನ್ನಪ್ಪ ಹರಿಜನ, ರಮೇಶ ಹರಿಜನ, ಕುಮಾರ ನಾಗರಾಜ ಹಾದಿಮನಿ, ನಾಗಪ್ಪ ಸೋಮಣ್ಣನವರ, ಗುಡ್ಡಪ್ಪ ಕನ್ನಮ್ಮನವರ, ನೀಲಪ್ಪ ಕಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT