ಶುಕ್ರವಾರ, ಆಗಸ್ಟ್ 23, 2019
22 °C
ಮಳೆ ಅಬ್ಬರಕ್ಕೆ ತತ್ತರಿಸಿದ ಜಿಲ್ಲೆಯ ಜನ: ಕೆರೆ–ಕಟ್ಟೆಗಳು ತುಂಬಿ ಅತಿವೃಷ್ಟಿಯ ಭೀತಿ

ಪ್ರವಾಹ ಎದುರಿಸಲು ಸಮರೋಪಹಾದಿ ಸಿದ್ಧತೆ

Published:
Updated:
Prajavani

ಹಾವೇರಿ: ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದು, ಅತಿವೃಷ್ಟಿಯ ಸಂಭವನೀಯ ಅವಘಡ ಎದರಿಸಲು ಜಿಲ್ಲಾಡಳಿತ ಯುದ್ಧೋಪಹಾದಿಯಲ್ಲಿ ಸಜ್ಜಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು ಪ್ರತಿ ತಾಲ್ಲೂಕಿನಲ್ಲೂ ಸಹಾಯವಾಣಿ ಹಾಗೂ ಗಂಜಿಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.  

ಹಾನಿಗೆ ಒಳಗಾಗಿರುವ ಕೆಲ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಾಜಪೇಯಿ, ಬಳಿಕ ತಮ್ಮ ಕಚೇರಿಯಿಂದ ಎಲ್ಲ ತಾಲ್ಲೂಕು ಅಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿದರು. ‘ಪ್ರವಾಹ ಪರಿಸ್ಥಿತಿ ಎದರಿಸಲು ಎಲ್ಲರೂ ಗರಿಷ್ಠ ಎಚ್ಚರಿಕೆಯಿಂದ ಸಿದ್ಧರಿರಬೇಕು. ದೂರುಗಳು ಬಂದ ಕೂಡಲೇ ಸ್ಪಂದಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ, ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪರಿಹಾರ ಕೇಂದ್ರ ತೆರೆಯಿರಿ: ‘ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು, ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಜನ–ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು. ಪರಿಹಾರ ಕೇಂದ್ರಗಳನ್ನು ತೆರೆದು ಊಟ–ವ್ಯವಸ್ಥೆ ಕಲ್ಪಿಸಬೇಕು. ಪೊಲೀಸ್, ಅಗ್ನಿಶಾಮಕ, ಅರಣ್ಯ, ಪಿಡಬ್ಲ್ಯುಡಿ ಸೇರಿ ಸಂಬಂಧಪಟ್ಟ ಇಲಾಖೆ ಸಿಬ್ಬಂದಿ ವಿಶೇಷ ತಂಡಗಳನ್ನು ರಚಿಸಿಕೊಂಡು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಪ್ರತಿ ತಾಲ್ಲೂಕಿನಲ್ಲೂ ಜನರ ತುರ್ತು ಸಹಾಯಕ್ಕಾಗಿ ಸಹಾಯವಾಣಿ ಪ್ರಾರಂಭಿಸಬೇಕು. ಅಲ್ಲಿನ ಜನರೊಟ್ಟಿಗೆ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಿಕೊಂಡು, ಪರಸ್ಪರ ಮಾಹಿತಿ ವಿನಿಮಯದ ಮೂಲಕ ಪರಿಸ್ಥಿತಿ ತಿಳಿಯುತ್ತಿರಬೇಕು. ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಡಂಗೂರದ ಮೂಲಕ ಸಂದೇಶ ರವಾನಿಸಬೇಕು. ಜನ ನದಿಗಳ ದಡಕ್ಕೆ ತೆರಳದಂತೆ ನೋಡಿಕೊಳ್ಳಬೇಕು. ನೀರಿನ ಹರಿವು ಹೆಚ್ಚಳದ ಬಗ್ಗೆ ನಿರಂತರವಾಗಿ ಮಾಹಿತಿ ಪಡೆದುಕೊಳ್ಳುತ್ತ, ಅಪಾಯದ ಮುನ್ಸೂಚನೆ ಕಂಡು ಬಂದ ಕೂಡಲೇ ಆ ಭಾಗದ ಜನ–ಜಾನುವಾರುಗಳನ್ನು ಸ್ಥಳಾಂತರ ಮಾಡಬೇಕು.’ 

ಬಾಂದಾರಗಳ ಬಿರುಕು ಪರಿಶೀಲಿಸಿ: ‘ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು, ನೀರಾವರಿ ಹಾಗೂ ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯ ಕೆರೆ–ಕಟ್ಟೆಗಳ ಹಾಗೂ ಬಾಂದಾರಗಳ ಸಂಭವನೀಯ ಬಿರುಕುಗಳ ಕುರಿತು ಪರಿಶೀಲನೆ ನಡೆಸಬೇಕು. ರಸ್ತೆ ಸೇತುವೆ ಜಲಾವೃತವಾದರೆ, ಮರ, ವಿದ್ಯುತ್ ಕಂಬಗಳು ಉರುಳಿಬಿದ್ದರೆ ಪಿಡಬ್ಲ್ಯುಡಿ, ಹೆಸ್ಕಾಂ ಹಾಗೂ ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ಗಳು ತಕ್ಷಣ ಕಾರ್ಯೋನ್ಮುಖರಾಗಿ ಕ್ರಮ ವಹಿಸಬೇಕು’  

‘ಶಿಥಿಲವಾದ ಶಾಲಾ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಶಾಲಾ ಕಟ್ಟಡಗಳನ್ನು ಪರಿಶೀಲಿಸಿ, ಡಿಡಿಪಿಐಗೆ ವರದಿ ಕೊಡಬೇಕು’ ಎಂದೂ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಹಾನಿ ಪರಿಹಾರಕ್ಕೆ ಕ್ರಮ: ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಕ್ಷಣವೇ ಬೆಳೆಹಾನಿ ಸಂಭವಿಸಿದ ಸ್ಥಳಗಳಿಗೆ ತೆರಳಿ ನಷ್ಟದ ಕುರಿತು ವರದಿ ಸಿದ್ಧಪಡಿಸಬೇಕು. ಮನೆ ಕುಸಿತ, ಜಾನುವಾರುಗಳಿಗೆ ಹಾನಿಯಾದರೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚನೆಯಂತೆ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಅಲೆಮಾರಿ ಜನರ ಸ್ಥಳಾಂತರ
ನಾಗೇಂದ್ರನಮಟ್ಟಿ, ಶಾಂತಿನಗರ, ಅಲೆಮಾರಿ ಕ್ಯಾಂಪ್‌ನಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ, ಅಲ್ಲಿನ ಜನರ ಸಮಸ್ಯೆಗಳನ್ನೂ ಆಲಿಸಿದರು. ‘ರಸ್ತೆ–ಚರಂಡಿಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಕೊಳಚೆ ನೀರು ಮನೆಗೆ ನುಗ್ಗುತ್ತಿದೆ’ ಎಂದು ಅಲ್ಲಿನ ನಿವಾಸಿಗಳು ದೂರಿದರು. ಅವುಗಳ ನಿರ್ವಹಣೆಗೆ ಬುಧವಾರದಿಂದಲೇ ಕಾಮಗಾರಿ ಆರಂಭಿಸುವಂತೆ ನಗರಸಭೆ ಆಯುಕ್ತ ಬಸವರಾಜ ಜಿದ್ದಿ ಅವರಿಗೆ ಸೂಚಿಸಿದರು.

ತಾತ್ಕಾಲಿಕ ಟೆಂಟಿನಲ್ಲಿ ನೀರು ಹರಿದು ತೀವ್ರ ತೊಂದರೆ ಅನುಭವಿಸುತ್ತಿದ್ದ ಅಲೆಮಾರಿ ಜನರನ್ನು ತಕ್ಷಣವೇ ಸ್ಥಳಾಂತರಿಸಿ ಪುನರ್ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ ಶಿವಕುಮಾರ ಅವರಿಗೆ ಸೂಚಿಸಿದರು.

‘ಲಿಖಿತ ಅನುಮತಿಗೆ ಕಾಯಬೇಡಿ’
‘ಪರಿಹಾರ ಕಾರ್ಯಕ್ಕೆ ಅನುದಾನ ಬಳಸಿಕೊಳ್ಳಲು ಯಾರೂ ಲಿಖಿತ ಅನುಮತಿಗೆ ಕಾಯುವ ಅಗತ್ಯವಿಲ್ಲ. ಸಾಂಕ್ರಾಮಿಕ ರೋಗಗಳ ತಡೆ, ಹಾವು ಕಡಿತದಂಥ ಪ್ರಕರಣಗಳಿಗೆ ಔಷಧಿಯ ಕೊರತೆ ಹಾಗೂ ವೈದ್ಯಕೀಯ ಉಪಚಾರದಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ತಹಶೀಲ್ದಾರ್ ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Post Comments (+)