ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂ.14ರವರೆಗೆ ‘ಪೂರ್ಣ ಲಾಕ್‌ಡೌನ್‌’ ವಿಸ್ತರಣೆ

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಾರದಲ್ಲಿ ಮೂರು ದಿನ ಅವಕಾಶ
Last Updated 5 ಜೂನ್ 2021, 13:03 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಜೂನ್ 7ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 14ರ ಬೆಳಿಗ್ಗೆ 6 ಗಂಟೆವರೆಗೆ ಜಿಲ್ಲೆಯಾದ್ಯಂತ ‘ಪೂರ್ಣ ಲಾಕ್‌ಡೌನ್‌’ ಮುಂದುವರಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ವಾರದಲ್ಲಿ ಮೂರು ದಿನ ಮಂಗಳವಾರ, ಗುರುವಾರ ಹಾಗೂ ಶನಿವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಕೋವಿಡ್ ಮಾರ್ಗಸೂಚಿ ಅನ್ವಯ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸಾರ್ವಜನಿಕರಿಗೆ ತರಕಾರಿ, ಔಷಧಿ, ದಿನಸಿ ಸಾಮಗ್ರಿಗಳನ್ನು ತಾವು ವಾಸಿಸುವ ಸ್ಥಳದಲ್ಲಿ ಹತ್ತಿರದ ಅಂಗಡಿಗಳಿಂದ ಖರೀದಿಸಲು ಮಾತ್ರ ವಿನಾಯಿತಿ ನೀಡಲಾಗಿದೆ.

ಅಗತ್ಯ ವಸ್ತುಗಳಾದ ಹಾಲು, ಆಸ್ಪತ್ರೆಗಳು, ಔಷಧ ಅಂಗಡಿಗಳು ಮತ್ತು ಪಡಿತರ ಆಹಾರ ಧಾನ್ಯಗಳು, ಗೃಹ ಬಳಕೆ ಎಲ್.ಪಿ.ಜಿ. ಸಿಲಿಂಡರ್‌ಗಳ ಸಾಗಾಣಿಕೆ ಮತ್ತು ವಿತರಣೆ ಹಾಗೂ ಅಗತ್ಯ ಸೇವೆಗಳಾದ ಆಂಬುಲೆನ್ಸ್‌, ಅಗ್ನಿಶಾಮಕ, ಪೆಟ್ರೋಲ್ ಪಂಪ್, ಆಮ್ಲಜನಕ ಉತ್ಪಾದನಾ ಘಟಕ, ಎ.ಟಿ.ಎಂ, ಬ್ಯಾಂಕ್, ಅಂಚೆ ಕಚೇರಿ, ವಿಮಾ, ಟೆಲಿಕಾಂ, ಇಂಟರ್ ನೆಟ್ ಹಾಗೂ ಖಾಸಗಿ ಭದ್ರತಾ ಸೇವೆಗಳಲ್ಲಿ ತೊಡಗಿರುವ ಅಧಿಕಾರಿ/ ಸಿಬ್ಬಂದಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಿ ಅನುಮತಿ ನೀಡಲಾಗಿದೆ.

ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪರಿಕರಗಳು, ಯಂತ್ರೋಪಕರಣಗಳು, ಬೀಜ ಮತ್ತು ರಸಗೊಬ್ಬರ ಮಾರಾಟಕ್ಕೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ವಿನಾಯಿತಿ ನೀಡಿದೆ. ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ರೇಷ್ಮೆ ಗೂಡು, ರೇಷ್ಮೆ ಮೊಟ್ಟೆ ಸಾಗಾಣಿಕೆಗಾಗಿ ಹಾಗೂ ರೇಷ್ಮೆ ಉದ್ಯಮದ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.

ಕಟ್ಟಡ ನಿರ್ಮಾಣ ಕಾಮಗಾರಿಗಳ ಸ್ಥಳದಲ್ಲಿಯೇ ವಾಸವಿದ್ದ ಕಟ್ಟಡ ಕೆಲಸಗಾರರಿಂದ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅನುಮತಿ ಇದೆ. ಸ್ಥಳದಲ್ಲಿಯೇ ವಾಸಿಸುವ ಸಿಬ್ಬಂದಿ ಕಾರ್ಮಿಕರು/ ಕೆಲಸಗಾರರನ್ನು ಉಪಯೋಗಿಸಿಕೊಂಡು ಜೀವನಾವಶ್ಯಕ ವಸ್ತುಗಳನ್ನು ತಯಾರಿಸುವ, ನಿರಂತರ ಕಾರ್ಯಾಚರಣೆ ನಡೆಸುವ ಉತ್ಪಾದನಾ ಘಟಕಗಳು ಮತ್ತು ಕಾರ್ಖಾನೆಗಳಿಗೆ ಅನುಮತಿ ನೀಡಲಾಗಿದೆ.

ರಫ್ತುಗಳಲ್ಲಿ ನೇರವಾಗಿ ತೊಡಗಿರುವ ಕೈಗಾರಿಕಾ ಇಲಾಖೆಯಿಂದ ಹೊರಡಿಸಲಾಗುವ ಪಟ್ಟಿಯಲ್ಲಿನ ಘಟಕಗಳು, ಸಂಸ್ಥೆಗಳಿಗೆ ಕೋವಿಡ್ ಮಾರ್ಗಸೂಚಿ ಅನುಸರಿಸಿ ಶೇ 30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ವಿನಾಯಿತಿ ನೀಡಿದೆ.

ಈ ಅವಧಿಯಲ್ಲಿ ಕೋವಿಡ್-19 ಮಾರ್ಗಸೂಚಿಯನ್ವಯ ಅಂತ್ಯ ಸಂಸ್ಕಾರಕ್ಕೆ 5 ಜನಕ್ಕೆ ಮೀರದಂತೆ ಅನುಮತಿ ನೀಡಲಾಗಿದೆ. ಈ ಆದೇಶವು ಕೋವಿಡ್-19 ಕಾರ್ಯನಿರತ ಅಧಿಕಾರಿಗಳು/ ಸಿಬ್ಬಂದಿ ಮತ್ತು ಸರ್ಕಾರಿ ವಾಹನಗಳ ಓಡಾಟಕ್ಕೆ ಅನ್ವಯಿಸುವುದಿಲ್ಲ. ಜಿಲ್ಲೆಯಾದ್ಯಂತ ವಿನಾಯಿತಿ ಪಡೆದ ಉದ್ದೇಶಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಜನರಿಗೂ ಅಧಿಕ ವ್ಯಕ್ತಿಗಳು ಒಂದೆಡೆ ಸೇರುವಿಕೆಯನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT